Advertisement

ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಶೇ. 99 ಮತದಾರರ ನೋಂದಣಿ

08:19 PM Nov 29, 2022 | Team Udayavani |

ಬೆಂಗಳೂರು: “ದೇಶದ ಯಾವುದೇ ಮೂಲೆಯಲ್ಲಿರುವ ನಾಗರಿಕರು ವೋಟರ್‌ ಹೆಲ್ಪ್ ಲೈನ್‌ ಎಂಬ ಆ್ಯಪ್‌ ಮೂಲಕ ಮತದಾರನಾಗಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಿದ್ದು, ಇದರ ಪರಿಣಾಮ ಪ್ರಸಕ್ತ ಸಾಲಿನಲ್ಲಿ ಶೇ. 99ರಷ್ಟು ಮತದಾರರ ನೋಂದಣಿ ಆನ್‌ಲೈನ್‌ನಲ್ಲಿ ನಡೆದಿದೆ’ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.

Advertisement

ನಗರದ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಮಂಗಳವಾರ ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾರರ ನೋಂದಣಿ ಜಾಗೃತಿ ಅಭಿಯಾನ ಮತ್ತು ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 18 ವರ್ಷ ಮೇಲ್ಪಟ್ಟ ಯಾವುದೇ ನಾಗರಿಕನ ಮತದಾನ ನೋಂದಣಿಗೆ ಮುಂಚಿತವಾಗಿ ಅರ್ಜಿ ಸಲ್ಲಿಸಲು ಈಗ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮತದಾರರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳ ಜವಾಬ್ದಾರಿಗಳಲ್ಲಿ ವ್ಯತ್ಯಾಸಗಳಿವೆ. ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದರೆ, ಕೇಂದ್ರ ಚುನಾವಣಾ ಆಯೋಗವು ಲೋಕಸಭೆ, ರಾಜ್ಯಸಭೆ ರಾಜ್ಯ ವಿಧಾನ ಮಂಡಲಗಳ ಚುನಾವಣೆ ನಡೆಸಿಕೊಡುತ್ತವೆ. ಚುನಾವಣಾ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದು, ಅವುಗಳಲ್ಲಿ ಮುಖ್ಯವಾದದ್ದು ಅರ್ಹತಾ ದಿನಾಂಕವನ್ನು ತ್ತೈಮಾಸಿಕಗಳಲ್ಲಿ ವಿಂಗಡಿಸಲಾಗಿದೆ ಎಂದು ತಿಳಿಸಿದರು.

ಸಮಸಮಾಜ ಮರು ನಿರ್ಮಾಣ ಮಾಡಲಿ: ದೇಶದ ಸಂವಿಧಾನದ ಸಾಧನೆಗಳ ಬಗ್ಗೆ ವಿವರಿಸಿದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ. ಬಸವರಾಜು, 73 ವರ್ಷಗಳ ಸಂವಿಧಾನ ಕಾಲಾವಧಿಯಲ್ಲಿ ಭಾರತದ ಒಬ್ಬ ಕಟ್ಟಕಡೆಯ ಪ್ರಜೆ ದೇಶದ ಅತ್ಯುನ್ನತ ಪದವಿಗೆ ತಲುಪಬಹುದು. ಒಬ್ಬ ವ್ಯಕ್ತಿಯು ತನ್ನ ಜಾತಿ-ಧರ್ಮ, ಜನಾಂಗ ಭೇದ-ಭಾವವಿಲ್ಲದೆ ಉನ್ನತ ಮಟ್ಟಕ್ಕೆ ತಲುಪಿ ಸಮಾಜದಲ್ಲಿ ಗೌರವವಾಗಿ ಬಾಳುವಂತಹ ಅವಕಾಶವನ್ನು ಸಂವಿಧಾನ ನೀಡಿದೆ. ವಿದ್ಯಾರ್ಥಿಗಳು ಭಾರತವನ್ನು ಸುಧಾರಣೆಯೊಂದಿಗೆ ಮರುನಿರ್ಮಾಣದತ್ತ ಕೊಂಡೊಯ್ಯುವ ಮೂಲಕ ಸಮಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ನೋಡಲ್‌ ಅಧಿಕಾರಿ ಡಾ.ಎನ್‌. ಸತೀಶ್‌ಗೌಡ, ಕಾಲೇಜುಗಳಲ್ಲಿ 18 ವರ್ಷ ಪೂರೈಸಿದ ವಿದ್ಯಾರ್ಥಿಗಳಿಗೆ ಮತದಾನ ನೋಂದಣಿ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ವಿವಿ ಮೊಟ್ಟಮೊದಲ ಬಾರಿಗೆ ಅರಿವು ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್‌ ನಾಡಗೌಡರ ಮಾತನಾಡಿದರು. ಸುಮಾರು 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next