Advertisement
ಯಾದಗಿರಿ: ಸಮ್ಮಿಶ್ರ ಸರ್ಕಾರದಲ್ಲಿ ಯಾದಗಿರಿ ಅಧಿಕಾರ ಭಾಗ್ಯದಿಂದ ದೂರ ಉಳಿದಿದ್ದು, ಹಿಂದುಳಿದ ಜಿಲ್ಲೆ ಬಡವಾಗಿದೆ. ಜಿಲ್ಲೆ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಯಾದಗಿರಿ ಮತ್ತು ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಗುರುಮಠಕಲ್ ನಲ್ಲಿ ತೆನೆಹೊತ್ತ ಮಹಿಳೆ ವಿಜಯ ಪತಾಕೆ ಹಾರಿಸಿದರೆ, ಶಹಾಪುರ ಮತದಾರರು ಶರಣಬಸಪ್ಪಗೌಡ ದರ್ಶನಾಪುರ ಅವರ ಕೈ ಹಿಡಿದ್ದಾರೆ.
ಆದರೆ ಸಚಿವ ಸಂಪುಟ ರಚನೆಯಲ್ಲಿ ಯಾದಗಿರಿ ಜಿಲ್ಲೆಗೆ ಅವಕಾಶ ದೊರೆಯದೇ ಇರುವುದು ಇಲ್ಲಿನ ಜನತೆಗೆ ಶಾಕ್ ನೀಡಿದಂತಾಗಿದೆ. ಇದೀಗ ಜಿಲ್ಲಾ ಉಸ್ತವಾರಿ ಸಚಿವರನ್ನು ಸರ್ಕಾರ ನೇಮಿಸುತ್ತಿದ್ದು, ಯಾದಗಿರಿ ಜಿಲ್ಲೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಕಡೆಗಣಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ನೀಡುವರೋ ಎನ್ನುವ ಎಂಬ ಪ್ರಶ್ನೆ ಕಾಡತೊಡಗಿದೆ.
Related Articles
Advertisement
ಅಭಿವೃದ್ಧಿಗೆ ಹಿನ್ನಡೆಯಾಗುವ ಆತಂಕ: ರಾಜ್ಯದ 30ನೇ ಜಿಲ್ಲೆ ಆಗಿರುವ ಯಾದಗಿರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುತ್ತದೆ ಎನ್ನುವ ಆಲೋಚನೆಯಲ್ಲಿದ್ದ ಜನರಿಗೆ ಇದೀಗ ಅಭಿವೃದ್ಧಿಗೆ ಹಿನ್ನಡೆ ಆಗುವ ಆತಂಕ ಮನೆಮಾಡಿದೆ. ಸಚಿವ ಸ್ಥಾನ ದೊರೆತರೆ ಜಿಲ್ಲೆಗೆ ಕನಿಷ್ಟ ಮೂಲ ಸೌಲಭ್ಯಗಳನ್ನಾದರೂ ಒದಗಿಸಿ ಸಮರ್ಪಕ ನೀರಾವರಿ ಒದಗಿಸುವುದು, ಗುಳೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಅಗತ್ಯ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯೊಲು ಸಹಕಾರಿಯಾಗುತ್ತಿತ್ತು. ಆದರೆ ಸಮ್ಮಿಶ್ರ ಸರ್ಕಾರ ಇದಕ್ಕೆ ತಣ್ಣೀರೆರಚಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪಟ್ಟ ಯಾರಿಗೆ?: ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಬ್ಬರಿಗೂ ಸಚಿವ ಸ್ಥಾನ ಕೈತಪ್ಪಿದ್ದು, ಜಿಲ್ಲಾ ಉಸ್ತುಚಾರಿ ಸಚಿವ ಯಾರಾಗುತ್ತಾರೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆಯ ಹೆಸರಿರುವ ಪಟ್ಟಿ ಹರಿದಾಡುತ್ತಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆಯ ಹೆಸರೇ ಮಾಯವಾಗಿದೆ.
ಜೆಡಿಎಸ್‌ನ ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಪಕ್ಕದ ರಾಯಚೂರು ಜಿಲ್ಲೆಯವರಾಗಿದ್ದು, ಅವರಿಗೆ ಹೆಚ್ಚುವರಿಯಾಗಿ ಯಾದಗಿರಿ ಜಿಲ್ಲೆಯ ಉಸ್ತುವಾರಿ ವಹಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.