Advertisement

ಚಾರ್ಮಾಡಿಯ ಮಡಿಲಲ್ಲಿ

07:30 AM Mar 16, 2018 | Team Udayavani |

ಅದು 2018ರ ಮೊದಲ ತಿಂಗಳ ಕೊನೆಯ ದಿನ. ಅದೆಷ್ಟೋ ದಿನಗಳಿಂದ ಕಾದಿದ್ದ ದಿನ ಅಂತಾನೇ ಹೇಳಬಹುದು. ಈ ಸುತ್ತಾಟ, ಅಲೆದಾಟ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ! ಅದ್ರಲ್ಲೂ ದಿನವಿಡೀ ಲೆಕ್ಚರ್‌ ಕೇಳಿ, ಅದೇ ಕ್ಲಾಸು, ಅದೇ ಮನೆ, ಅದೇ ದಿನಚರಿ ಅಂದ್ರೆ ಬೋರ್‌ ಆಗೇ ಆಗುತ್ತೆ. ಇಂತಹ ಬೋರಿಂಗ್‌ ಟೈಮ್‌ಗೆ ಬ್ರೇಕ್‌ ಕೊಟ್ಟು ಹಿಂದೆಂದೂ ನೋಡಿರದೇ ಇದ್ದ ಜಾಗಕ್ಕೆ “ಟ್ರೆಕ್ಕಿಂಗ್‌’ ಎಂಬ ಶೀರ್ಷಿಕೆ ಕೊಟ್ಟು ನಾವು ನಡೆದಿದ್ದು ಚಾರ್ಮಾಡಿಯ ಮಡಿಲಿಗೆ. 

Advertisement

ಸರಿಸುಮಾರು 39 ವಿದ್ಯಾರ್ಥಿಗಳು ಜೊತೆಗೆ ಮೂವರು ಉಪನ್ಯಾಸಕರು ಮಾತ್ರವಲ್ಲದೇ 75ರ ಹರೆಯದಲ್ಲೂ ಲವಲವಿಕೆಯಿಂದ ಕೂಡಿರುವ ಹಿರಿಯ ಭಾಷಾಂತರಕಾರ ಶ್ರೀಕರ್‌,  ಎಲ್‌. ಭಂಡಾರ್ಕರ್‌, ದಿನೇಶ್‌ ಹೊಳ್ಳರವರ ಮಾರ್ಗದರ್ಶನದಲ್ಲಿ ನಮ್ಮ ಟ್ರೆಕ್ಕಿಂಗ್‌ನ ಪಯಣವನ್ನು ಪ್ರಾರಂಭಿಸಿದೆವು. ಆರಂಭದಲ್ಲಿ ಎಲ್ಲರೂ ಲವಲವಿಕೆಯಿಂದ ಕಿರಿದಾದ ಕಾಲುದಾರಿ, ಏರು-ತಗ್ಗಿನ ಪ್ರದೇಶದಲ್ಲಿ ಜಾರುತ್ತಾ, ಕಲ್ಲುಗಳಿಂದ ಎಡವಿ ಹಾಗೋ ಹೀಗೋ ಸಾಗುತ್ತಿ¨ªೆವು. ಸುಮಾರು ಒಂದು ಗಂಟೆ ಕಳೆಯುವಷ್ಟರಲ್ಲಿ ನಾವು ತಲುಪಿದ್ದ ಸ್ಥಳ “ಕೊಡೆ ಕಲ್ಲು’ ಎನ್ನುವ ಶಿಖರ. ಕೊಡೆಯಾಕಾರದ ಬೃಹತ್‌ ಬಂಡೆಕಲ್ಲೊಂದು ಇರುವ ಸ್ಥಳವಾದ್ದರಿಂದ ಆ ಪ್ರದೇಶವನ್ನು ಕೊಡೆ ಕಲ್ಲು ಎಂದೇ ಕರೆಯುತ್ತಾರೆ. ಅಲ್ಲಿಯವರೆಗೂ ಬಿಸಿಲಿನಲ್ಲಿ ಸಾಗಿಬಂದ ನಮಗೆ ಆ ಸ್ಥಳವನ್ನು ತಲುಪಿದಾಕ್ಷಣ ಒಮ್ಮೆ ನಿಟ್ಟುಸಿರು ಬಿಡುವಂತಾಯ್ತು. ಆ ಕ್ಷಣ ಮರುಭೂಮಿಯಲ್ಲಿ ಓಯಸಿಸ್‌ ಸಿಕ್ಕಂಥ ಅನುಭವವಾಗಿದ್ದಂತೂ ನಿಜ. ಆ ಪ್ರದೇಶದಲ್ಲಿ ಸ್ವಲ್ಪ ದಣಿವಾರಿಸಿಕೊಂಡು, ನೆನಪಿನ ದಾಖಲೆಗೆ ಒಂದಷ್ಟು ಫೊಟೋಗಳನ್ನು ಕ್ಲಿಕ್ಕಿಸಿಕೊಂಡು ಮುಂದೆ ಸಾಗಿದೆವು. ಅಲ್ಲೊಮ್ಮೆ-ಇಲ್ಲೊಮ್ಮೆ ಆಯಾಸದಿಂದ ದಣಿವಾರಿಸಿಕೊಳ್ಳಲು ನಿಂತಾಗ ಮಾರ್ಗದರ್ಶಕರು ಕಾಡು, ಅದರ ಮಹತ್ವ, ಈಗ ಅವುಗಳು ಎದುರಿಸುತ್ತಿರುವ ಸಮಸ್ಯೆಗಳು, ಕಾಡಿನ ಸಂರಕ್ಷಣೆಯಲ್ಲಿ ನಮ್ಮ ಪಾತ್ರಗಳ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಹಾಗೂ ಸರಳವಾಗಿ ತಿಳಿಸುತ್ತಿದ್ದರು. 

ಮುಂದೆ ನಮ್ಮ ಪಯಣ ಸಾಗಿದ್ದು ಬಾಳೆಕಲ್‌ ಗುಡ್ಡಕ್ಕೆ. ಸುಡುಬಿಸಿಲಿನಲ್ಲಿ, ಬಯಲುಗಾಡಿನಲ್ಲಿ, ಏಕಪಥೀಯವಾಗಿ ಹೋಗುವುದೆಂದರೆ ಸುಲಭದ ಮಾತಲ್ಲ, ಸ್ವಲ್ಪ ಆಯ ತಪ್ಪಿದರೂ ಶಿಖರವನ್ನು ಏರುತ್ತಿರುವವರು ತಪ್ಪಲಿನಲ್ಲಿರಬೇಕಾಗುತ್ತದೆ. ಹಾಗಾಗಿ, ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಮುಂದೆ ಹೆಜ್ಜೆ ಹಾಕುತ್ತಿದ್ದೆವು. ಎರಡು ಗಂಟೆಯ ಸತತ ನಡಿಗೆಯ ನಂತರ ನಾವು ತಲುಪಿದ ಸ್ಥಳ ಬಾಳೇಕಲ್‌ ಗುಡ್ಡ. ಆ ಸ್ಥಳ ತಲುಪಿದಾಕ್ಷಣ ಒಮ್ಮೆ ಏದುಸಿರು ಬಿಟ್ಟು ಸುತ್ತಲೂ ಕಣ್ಣು ಹಾಯಿಸುವಷ್ಟರೊಳಗೆ ಅಷ್ಟು ದೂರ ಸಾಗಿಬಂದ ಆಯಾಸವೆಲ್ಲ ಮಾಯವಾಗಿತ್ತು. ಸುತ್ತೆಲ್ಲ ನೋಡಿದರೆ ಪರ್ವತಗಳ ಸಾಲು, ಹಚ್ಚಹಸಿರಿನಿಂದ ಕೂಡಿರುವ ನಿತ್ಯ ಹರಿದ್ವರ್ಣದ ಕಾಡು, ಬಿಸಿಲ ಬೇಗೆಯನ್ನು ನಿವಾರಿಸುವಂತಹ ತಂಪಾದ ಗಾಳಿ, ಲೋಕದ ಜಂಜಾಟದಿಂದ ಬಳಲಿರುವ ಮನಸಿಗೆ ಶಾಂತಿ, ನೆಮ್ಮದಿಯ ಸ್ಪರ್ಶ ಸಿಕ್ಕಂತಹ ಅನುಭವ ಆಗಿದ್ದಂತೂ ನಿಜ.

ಇಂಟರ್ನೆಟ್‌, ಟಿ.ವಿ., ನೆಟ್‌ವರ್ಕ್‌, ಸೋಶಿಯಲ್‌ ಮೀಡಿಯಾ… ಇಂತಹ ತಂತ್ರಜ್ಞಾನಗಳು ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ಇದ್ಯಾವುದರ ಸಂಪರ್ಕವಿಲ್ಲದೆ ತಾಂತ್ರಿಕ ಜೀವನದಿಂದ ಸಂಪೂರ್ಣವಾಗಿ ದೂರವಾಗಿ ಜೀವಿಸುತ್ತಿರುವ ಜನರೂ ಇ¨ªಾರೆ. ಇಂತಹ ಜನರಿರುವ ಪ್ರದೇಶಕ್ಕೆ ಸಾಗಿತ್ತು ನಮ್ಮ ಟ್ರೆಕ್ಕಿಂಗ್‌ ಟೀಮ್‌. ಕೇವಲ ಮೂರ್‍ನಾಲ್ಕು ಮನೆಗಳಿರುವ ಈ ಹಳ್ಳಿಯ ಹೆಸರು “ಬಿದಿರುತಳ’. ಇಲ್ಲಿಯ ಜನರ ಜೀವನವೇ ತುಂಬಾ ಭಿನ್ನ. ದೇಶದಲ್ಲಿ ನಡೆಯುತ್ತಿರುವ ವಿಷಯಗಳನ್ನು ತಿಳಿಯಲು ಇವರಿಗಿರುವ ಏಕೈಕ ಮೂಲವೆಂದರೆ ರೇಡಿಯೊ. ಜಗತ್ತಿನ ಆಗು-ಹೋಗುಗಳ ಅರಿವಿಲ್ಲದೆ ತಮ್ಮಷ್ಟಕ್ಕೆ ತಾವು ಬದುಕುತ್ತಿರುವ ಜನರವರು. ತಮ್ಮ ದಿನನಿತ್ಯದ ಬಳಕೆಯ ವಸ್ತುಗಳನ್ನು ಖರೀದಿಸಲು ಅದೆಷ್ಟೋ ದೂರ ನಡೆದು ಹೋಗಬೇಕಾದ ಪರಿಸ್ಥಿತಿ ಅವರದ್ದು. ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಪಡೆಯದಿದ್ದರೂ ಕೂಡ ಇರುವುದರಲ್ಲಿಯೇ ನೆಮ್ಮದಿಯ ಜೀವನವನ್ನು ಕಳೆಯುತ್ತಿರುವ ಅವರನ್ನು ಕಂಡಾಗ ಸಂತೋಷದ ಜೊತೆಗೆ ಆಶ್ಚರ್ಯವೂ ಆಗಿತ್ತು.

ಬೆಳಗ್ಗೆಯಿಂದ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಮುಂದೆ ಮುಂದೆ ಸಾಗುತ್ತಿದ್ದ ನಮ್ಮ ಕಾಲುಗಳು ಹಿಂತಿರುಗಿ ನಡೆಯುವ ಸಮಯ ಬಂದಿತ್ತು. ಪ್ರಕೃತಿಯ ಮಡಿಲಲ್ಲಿ ಕಳೆದ ಆ ದಿನ ಅನೇಕ ಅನುಭವದ ಜೊತೆಗೆ ಪಾಠವನ್ನೂ ಕಲಿಸಿತ್ತು. ಆ ದಿನ ಪೂರ್ತಿ ನಮ್ಮನ್ನು ತನ್ನಲ್ಲಿ ಇರಿಸಿಕೊಂಡಿದ್ದ ಪ್ರಕೃತಿ ಮಾತೆ ತಾಯಿಮಡಿಲ ಸುಖ ಸ್ಪರ್ಶವನ್ನು ನೀಡಿದ್ದಳು. 

Advertisement

ಭಾವನಾ ಜೈನ್‌  ಆಳ್ವಾಸ್‌ ಕಾಲೇಜು, ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next