ಬೆಂಗಳೂರು: ರಾಜಧಾನಿಯಲ್ಲಿ ಪಲ್ಸರ್ ಬೈಕ್ ಸರಗಳ್ಳರ ಹಾವಳಿ ಮತ್ತೆ ಶುರುವಾಗಿದ್ದು, ಶುಕ್ರವಾರ ನಗರದ ವಿವಿಧೆಡೆ ನಾಲ್ವರು ಮಹಿಳೆಯರ ಸರ ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಾಲ್ಕು ಕಡೆಯೂ ಇಬ್ಬರೇ ದುಷ್ಕರ್ಮಿಗಳು ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇವಲ ಐದಿನೈದು ನಿಮಿಷಗಳ ಅಂತರದಲ್ಲಿ ಇಬ್ಬರು ಮಹಿಳೆಯರ ಸರಕಿತ್ತು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
ಬೆಳಗ್ಗೆ 6.30ರ ಸುಮಾರಿಗೆ ಪಲ್ಸರ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಜ್ಞಾನಭಾರತಿ ಲೇಔಟ್‌ನ 9ನೇ ಕ್ರಾಸ್‌ನಲ್ಲಿ ಮನೆಯ ಗೇಟ್ ಬಳಿ ನಿಂತಿದ್ದ ಲೀಲಾವತಿ ಎಂಬುವವರ ಕತ್ತಿನಲ್ಲಿದ್ದ 20 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಕೂಡಲೇ ಮಹಿಳೆ ಕಿರುಚಿಕೊಂಡಿದ್ದು, ಮನೆಯಲ್ಲಿದ್ದ ಮಗ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.
ಬಳಿಕ ದುಷ್ಕರ್ಮಿಗಳು 6-45ರ ಸುಮಾರಿಗೆ ವಿದ್ಯಾಪೀಠ ರಸ್ತೆಯ 7ನೇ ಕ್ರಾಸ್‌ನಲ್ಲಿ ಮನೆಯ ಮುಂಭಾಗ ನಿಂತ್ತಿದ್ದ ಸಾವಿತ್ರಮ್ಮ ಅವರನ್ನು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾರೆ. ಸಾವಿತ್ರಮ್ಮ ಮಾತನಾಡುತ್ತಿರುವಾಗಲೇ ಮತ್ತೋರ್ವ ದುಷ್ಕರ್ಮಿ ಸಾವಿತ್ರಮ್ಮ ಕತ್ತಿನಲ್ಲಿದ್ದ ಸರ ಕಿತ್ತುಕೊಂಡಿದ್ದು, ಕ್ಷಣಾರ್ಧದಲ್ಲಿ ಇಬ್ಬರು ಪರಾರಿಯಾಗಿದ್ದಾರೆ.
ಹೆಲ್ಮೆಟ್ ಧರಿಸಿ ಕೃತ್ಯ: ಸರಕಳೆದುಕೊಂಡ ಇಬ್ಬರೂ ಮಹಿಳೆಯ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದ್ದು, ಈಗಾಗಲೇ ಘಟನೆ ನಡೆದ ಸುತ್ತಮುತ್ತಲ ಪ್ರದೇಶಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಕೃತ್ಯ ದಾಖಲಾಗಿದೆ. ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರಿಂದ ನಿಖರ ಗುರುತು ಗೊತ್ತಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದರು.
ಮತ್ತೂಂದೆಡೆ ಬೆಳಗ್ಗೆ 7 ರಿಂದ 10 ಗಂಟೆ ನಡುವೆ ರಾಘವೇಂದ್ರ ಕಾಲೋನಿಯಲ್ಲಿ ಮನೆ ಮುಂದೆ ನಿಂತಿದ್ದ ನರಸಮ್ಮ (50) ಅವರ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ 40 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಜೊತೆಗೆ ಗೊರಗುಂಟೆ ಪಾಳ್ಯದ ಮುಖ್ಯರಸ್ತೆಯಲ್ಲಿ ಸಂಗೀತಾ ಎಂಬುವವರ ಬಳಿ 50 ಗ್ರಾಂ ತೂಕದ ಸರ ಕಸಿದು ಪರಾರಿಯಾಗಿದ್ದಾರೆ.