Advertisement

ಕಣದಲ್ಲಿ “ಮಧ್ಯಂತರ ಚುನಾವಣೆ’ಯದ್ದೇ ಮಾತು

09:55 AM Nov 28, 2019 | Lakshmi GovindaRaj |

ಹದಿನೈದು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯ ರಣಕಣದಲ್ಲಿ ರಾಜಕೀಯ ಮುಖಂಡರ ವಾಗ್ಧಾಳಿ ಮುಗಿಲು ಮುಟ್ಟಿದೆ. ಬಿರುಸಿನ ಚುನಾವಣಾ ಪ್ರಚಾರದ ನಡುವೆಯೇ, ಉಪಚುನಾವಣೆ ನಂತರ ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಮಾತುಗಳೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಂದ ಕೇಳಿ ಬರುತ್ತಿವೆ. ಆದರೆ “ಮಧ್ಯಂತರ ಚುನಾವಣೆ ಸಾಧ್ಯವೇ ಇಲ್ಲ. ಇನ್ನೂ ಮೂರೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿರುವುದು ಖಚಿತ’ ಎಂಬುದು ಸಿಎಂ ಯಡಿಯೂರಪ್ಪ ಅವರ ಸ್ಪಷ್ಟನೆ.

Advertisement

ಮಧ್ಯಂತರ ಚುನಾವಣೆ ಸಾಧ್ಯತೆ ಇಲ್ಲ
ಮೈಸೂರು: ಅಧಿಕಾರ ಇಲ್ಲದೆ ಹತಾಶೆಯಿಂದ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಯ ಮಾತನ್ನಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಇನ್ನೂ ಮೂರೂವರೆ ವರ್ಷ ವಿರೋಧ ಪಕ್ಷದ ನಾಯಕರಾಗಿಯೇ ಇರಬೇಕು. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟನೆ ನೀಡಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನತೆಗೆ ಮಧ್ಯಂತರ ಚುನಾವಣೆ ಬೇಡವಾಗಿದೆ.

ಹೀಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇಲ್ಲ ಎಂದು ಹೇಳಿದರು. ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ನೀಡುವ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಉಪ ಚುನಾವಣೆಯಲ್ಲಿ 15ಕ್ಕೆ ಹದಿನೈದೂ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲ್ಲಲಿದೆ. ನಾನಿದನ್ನು ಕೇವಲ ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಎಲ್ಲವನ್ನೂ ಅಳೆದು ತೂಗಿ ಈ ಮಾತನ್ನು ಹೇಳುತ್ತಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಅವರ ಮಧ್ಯಂತರ ಚುನಾವಣೆಯ ಆಸೆ ಈಡೇರುವುದಿಲ್ಲ ಎಂದರು.

ಕಾಂಗ್ರೆಸ್‌, ಜೆಡಿಎಸ್‌ನವರು ಚುನಾವಣೆಗೆ ಹೋಗೋಣ ಎನ್ನುತ್ತಿದ್ದಾರೆ. ಬಿಜೆಪಿ ಉಪಚುನಾವಣೆಯಲ್ಲಿ ಸೋತು ಸರ್ಕಾರ ಬಹುಮತ ಕಳೆದುಕೊಳ್ಳಬೇಕು, ಮುಂದೆ ಮತ್ತೆ ಚುನಾವಣೆ ನಡೆಯಬೇಕು ಎಂಬುದು ಕಾಂಗ್ರೆಸ್‌, ಜೆಡಿಎಸ್‌ ಉದ್ದೇಶ. ಹಾಗೆಂದು ಆರು ತಿಂಗಳಿಗೊಮ್ಮೆ ಚುನಾವಣೆಗೆ ಹೋಗೋಕಾಗುತ್ತಾ?
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಶಂಕರ್‌ ನನ್ನ ಬೆನ್ನಿಗೆ ಚೂರಿ ಹಾಕಿದ
ರಾಣಿಬೆನ್ನೂರು/ಹುಬ್ಬಳ್ಳಿ: ಆರ್‌.ಶಂಕರ್‌ ಅವರನ್ನು ಎರಡು ಬಾರಿ ಮಂತ್ರಿ ಮಾಡಿದೆ. ಆದರೆ ನನಗೇ ಚೂರಿ ಹಾಕಿ ಹೋದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಮಂಗಳವಾರ ನಡೆದ ಮತ ಪ್ರಚಾರ ಸಭೆಯಲ್ಲಿ ಮಾತನಾಡಿ, ಶಂಕರ್‌ ರಾಜಕಾರಣದಲ್ಲಿ ಇರಲೇಬಾರದು. ಯಾರೇ ಆಗಲಿ ಜನರಿಗೆ, ನಾಯಕರಿಗೆ ದ್ರೋಹ ಮಾಡಿದವರಿಗೆ ಬೆಂಬಲ ಕೊಡಬಾರದು. ಇಂತಹವರಿಂದ ಪ್ರಜಾಪ್ರಭುತ್ವ ಹಾಳಾಗುತ್ತದೆ. ಆಯ್ಕೆಯಾದ ಪಕ್ಷಕ್ಕೆ, ಮತದಾರರಿಗೆ ದ್ರೋಹ ಮಾಡಿದವರನ್ನು ಮತ್ತೆ ವಿಧಾನಸಭೆಗೆ ಕಳುಹಿಸಬಾರದು ಎಂದರು.

Advertisement

ಅಧಿಕಾರ ಇದ್ದಾಗ ಒಂದು ಮಾತು. ಇಲ್ಲದಾಗ ಇನ್ನೊಂದು ಮಾತನಾಡುವ ಯಡಿಯೂರಪ್ಪಗೆ ಎರಡು ನಾಲಿಗೆ ಇವೆ ಎಂದರು. ಬಿಜೆಪಿಯವರು ಸಂಪರ್ಕದಲ್ಲಿ: ಈ ನಡುವೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಬಳಿಯೂ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ. ಹಾಗಂತ ನಾವು ಅವರನ್ನು ಯಾವತ್ತೂ ಪಕ್ಷಕ್ಕೆ ಕರೆದಿಲ್ಲ. ಹೋಗುವವರು ಈಗಾಗಲೇ ಬಿಜೆಪಿಗೆ ಹೋಗಿದ್ದಾರೆ. ಮತ್ತೆ ಇನ್ಯಾವ ಶಾಸಕರೂ ಅಲ್ಲಿಗೆ ಹೋಗಲ್ಲ ಎಂದು ಹೇಳಿದರು.

2018ರ ವಿಧಾನಸಭೆ ಚುನಾವಣೆ ವೇಳೆ ಕೋಳಿವಾಡ ಪರ ಪ್ರಚಾರಕ್ಕೆ ಬಂದಿರಲಿಲ್ಲ. ಶಂಕರ್‌ ಕುರುಬ ಸಮುದಾಯಕ್ಕೆ ಸೇರಿದವರು, ಅದಕ್ಕೆ ಸಿದ್ದರಾಮಯ್ಯ ಕೋಳಿವಾಡ ಪರ ಮತಯಾಚನೆ ಮಾಡಲಿಲ್ಲ ಎಂದು ಯಾರೋ ಕೋಳಿವಾಡ ಮನಸಿನಲ್ಲಿ ತುಂಬಿದ್ದಾರೆ. ಅದಕ್ಕಾಗಿ ಅವರು ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆ. ಕಳೆದ ಚುನಾವಣೆ ವೇಳೆ ಕಾರಣಾಂತರದಿಂದ ಬರಲು ಆಗಲಿಲ್ಲ. ಅದಕ್ಕೆ ಕಾರಣ ಜಾತಿ ರಾಜಕಾರಣ ಅಲ್ಲ.
-ಸಿದ್ದರಾಮಯ್ಯ, ಮಾಜಿ ಸಿಎಂ

ಮಧ್ಯಂತರ ಚುನಾವಣೆಗೆ ನಾವು ಸಿದ್ಧ
ಚಿಕ್ಕಬಳ್ಳಾಪುರ: ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸಲು ಜೆಡಿಎಸ್‌ ಸಿದ್ಧವಾಗಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್‌ ಅಭ್ಯರ್ಥಿ ಎ.ರಾಧಾಕೃಷ್ಣ ಪರ ಮತ ಯಾಚನೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಉಪ ಚುನಾವಣೆ ಫ‌ಲಿತಾಂಶ ಬರುವವರೆಗೂ ಏನೂ ಹೇಳಲು ಆಗುವು ದಿಲ್ಲ, ಆದರೆ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸಲು ನಾವು ಸಿದ್ಧ ಎಂದರು.

ಪಾಪದ ಹಣ ಪಡೆದಿರುವ ಸುಧಾಕರ್‌: ತಾಲೂಕಿನ ನಂದಿ ಗ್ರಾಮದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಯಡಿಯೂರಪ್ಪ ಕೊಟ್ಟಿರುವ ಪಾಪದ ಹಣದಲ್ಲಿ ಡಾ.ಕೆ.ಸುಧಾಕರ್‌ ಮತದಾರರ ಖರೀದಿಗೆ ಮುಂದಾಗಿದ್ದಾರೆ. ಆದರೆ ಪ್ರಜಾಪ್ರಭುತ್ವದ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡುತ್ತಿರುವ ಅಹಂಕಾರಿ ಸುಧಾಕರ್‌ಗೆ ಕ್ಷೇತ್ರದ ಜನ ತಕ್ಕಪಾಠ ಕಲಿಸಲಿದ್ದಾರೆಂದು ಹೇಳಿದರು. ಹುಣಸೂರು ಅಭ್ಯರ್ಥಿ ಎಚ್‌.ವಿಶ್ವನಾಥ್‌ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ವಿಶ್ವನಾಥ್‌ ಇದು ರಾಜಕೀಯ ಧ್ರುವೀಕರಣ ಅಂತ ಹೇಳಿದ್ದಾರೆ. ಖಂಡಿತ ಅಲ್ಲ. ಇದು ರಾಜಕೀಯ ಶುದ್ಧೀಕರಣ ಎಂದರು.

ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಕೊಡಬೇಕೆಂದು ಯಡಿಯೂರಪ್ಪ ಹೇಳಿದ್ದಾರೆ. ನಾನು ಅಧಿಕಾರ ಕಳೆದುಕೊಂಡಾಗ ನನ್ನ ಸಮಾಜಕ್ಕೆ ನೋವು ಆಗಿರುವುದಿಲ್ಲವೇ? ಆದರೆ ಯಡಿಯೂರಪ್ಪ ರೀತಿ ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ಅವರಂತೆ ಸಂಕುಚಿತ ಮನೋಭಾವ ನನ್ನದಲ್ಲ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next