Advertisement

ದೊಡ್ಡ ಹುದ್ದೆಯಲ್ಲಿದ್ರೂ ಸರಳತೆ ಬಿಟ್ಟಿರಲಿಲ್ಲ

12:30 AM Jan 30, 2019 | Team Udayavani |

ಮೈಸೂರು: ‘ದೇಶದ ಮುಂಚೂಣಿ ಕಾರ್ಮಿಕ ನಾಯಕನಾಗಿ, ರಾಜಕೀಯ ನೇತಾರನಾಗಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದರೂ ಜಾರ್ಜ್‌ ಫೆರ್ನಾಂಡಿಸ್‌ ಸರಳತೆಯನ್ನು ಬಿಟ್ಟಿರಲಿಲ್ಲ. ಅದೇ ಬಣ್ಣ ಮಾಸಿದ, ಇಸ್ತ್ರಿ ಇಲ್ಲದ ಜುಬ್ಟಾ-ಪೈಜಾಮ, ಹಳೆಯ ಪ್ರೀಮಿಯರ್‌ ಪದ್ಮಿನಿ ಕಾರು, ಎರಡೇ ಕೋಣೆಗಳ ಮನೆ ಅವರ ಆಸ್ತಿಯಾಗಿತ್ತು. ರಕ್ಷಣಾಮಂತ್ರಿಯಾಗಿದ್ದರೂ ಶಿಷ್ಟಾಚಾರ ಬದಿಗಿಟ್ಟು, ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದರು. ಏನಾದರೂ ತಿನ್ನಬೇಕು ಎನಿಸಿದರೆ ರಸ್ತೆ ಬದಿಯ ಹೋಟೆಲ್‌ ಮುಂದೆ ಕಾರು ನಿಲ್ಲಿಸಿ ತಿಂಡಿ ತಿಂದು ಬರುತ್ತಿದ್ದರು. ಕೇಂದ್ರ ಸಚಿವರಾಗಿ ವಿಮಾನಗಳಲ್ಲಿ ಪ್ರಯಾಣ ಮಾಡುವಾಗ ತಮ್ಮ ಆಪ್ತ ಸಹಾಯಕರೊಂದಿಗೆ ಎಕಾನಮಿ ಕ್ಲಾಸ್‌ನಲ್ಲೇ ಪ್ರಯಾಣಿಸುತ್ತಿದ್ದರು. ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ ಬರುತ್ತಿದ್ದ ಅವರ ಇಲಾಖೆಯ ಅಧಿಕಾರಿಗಳು ಮುಜುಗರದಿಂದ ಜಾರ್ಜ್‌ ಸಾಹೇಬರು ವಿಮಾನ ಇಳಿಯುವವರೆಗೂ ತಾವು ಕೆಳಗೆ ಇಳಿಯುವ ಪ್ರಯತ್ನ ಮಾಡುತ್ತಿರಲಿಲ್ಲ’ ಇದು ಡಿಆರ್‌ಡಿಒ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದು, ಜಾರ್ಜ್‌ ಅವರು ರಕ್ಷಣಾಮಂತ್ರಿಯಾಗಿದ್ದಾಗ ಅವರಿಗೆ ಶಿಷ್ಟಾಚಾರ ಅಧಿಕಾರಿಯಾಗಿದ್ದ ಜಯಪ್ರಕಾಶ್‌ ರಾವ್‌ ಅವರ ನುಡಿಗಳು.

Advertisement

1998ರ ಫೆಬ್ರವರಿಯಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವ ಫೆರ್ನಾಂಡಿಸ್‌, ಕತ್ರಿಗುಪ್ಪೆಗೆ ಹೊರಟು ನಿಂತರು. ಆಗಿನ್ನು ರಕ್ಷಣಾಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ ಅವರು ಸಾಹೇಬ್ರು ಎಲ್ಲಿ ಹೋಗುತ್ತಿದ್ದಾರೆ ಎಂದು ದೂರವಾಣಿ ಕರೆ ಮಾಡಿ ಕೇಳಿದಾಗ ಕತ್ರಿಗುಪ್ಪೆಯಲ್ಲಿರುವ ವಿದ್ಯಾಪೀಠದಲ್ಲಿ ಉಡುಪಿಯ ಪೇಜಾವರ ಶ್ರೀಗಳನ್ನು ಕಾಣಲು ಹೋಗುತ್ತಿದ್ದೇನೆ ಎಂದಾಗ ಅಬ್ದುಲ್‌ ಕಲಾಂ ಅವರೂ ಫ‌ರ್ನಾಂಡಿಸ್‌ ಜತೆಗೆ ವಿದ್ಯಾಪೀಠಕ್ಕೆ ತೆರಳಿ ಬಹು ಹೊತ್ತು ಶ್ರೀಗಳೊಂದಿಗೆ ಚರ್ಚಿಸಿ ಬಂದಿದ್ದರು.

ಡಿಆರ್‌ಡಿಒ ಕ್ಯಾಂಪಸ್‌ನ್ನು ಕಾಲ್ನಡಿಗೆಯಲ್ಲೇ ಸುತ್ತಿದರು. ಆ ವೇಳೆಗಾಗಲೇ ಫ‌ರ್ನಾಂಡಿಸ್‌ ಮಾಂಸಾಹಾರವನ್ನು ಬಿಟ್ಟಿದ್ದರು. ಆದರೆ, ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ ಅಂದು ದಕ್ಷಿಣ ಕನ್ನಡ ಶೈಲಿಯ ಅಡುಗೆ ಮಾಡಿಸಿದ್ದನ್ನು ಕೇಳಿ, ಅಂಜಲ್‌ ಮೀನು ಫ್ರೈಯನ್ನು ಕೇಳಿ ಹಾಕಿಸಿಕೊಂಡು ಊಟ ಮಾಡಿದ್ದರು ಎಂದು ಸ್ಮರಿಸುತ್ತಾರೆ ಜಯಪ್ರಕಾಶ್‌ ರಾವ್‌.

‘ಮರು ಹುಟ್ಟು ಎನ್ನುವುದಿದ್ದರೆ ವಿಯೆಟ್ನಾಂ ಪ್ರಜೆಯಾಗಿ ಹುಟ್ಟಬೇಕು’
ರಾಜಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಮಾಜಿ ಸಚಿವ ಜಾರ್ಜ್‌, ಬೆಂಗಳೂರಿನಲ್ಲಿ ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಶನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮರು ಹುಟ್ಟು ಎನ್ನುವುದು ಇದ್ದರೆ ವಿಯೆಟ್ನಾಂ ಪ್ರಜೆಯಾಗಿ ಜನಿಸಬೇಕು’ ಎಂದು ಹೇಳಿದ್ದರು. ಒಂದು ಕಾಲದಲ್ಲಿ ವಿಶ್ವದ ಕಾಫಿ ಮಾರುಕಟ್ಟೆಯಲ್ಲಿ ವಿಯೆಟ್ನಾಂ ಪಾಲು ಹೆಚ್ಚಾಗಿತ್ತು. ಅಲ್ಲದೆ, ಅಲ್ಲಿನ ಪ್ರಜೆಗಳು ಮಾತು ಕೊಟ್ಟರೆ ಅದರ ಈಡೇರಿಕೆಗಾಗಿ ಪ್ರಾಣತ್ಯಾಗಕ್ಕೂ ಸಿದ್ಧರು ಎಂದು ಜಾರ್ಜ್‌ ಹೇಳಿದ್ದರು. ಜತೆಗೆ ಆ ದೇಶಕ್ಕೆ ಭಾರತದ ರಕ್ಷಣಾ ಸಚಿವರಾಗಿ ಮೊದಲ ಭೇಟಿಯನ್ನೂ ನೀಡಿದ್ದರು.

ಮುಖ್ಯಮಂತ್ರಿ ಸಂತಾಪ
ಬೆಂಗಳೂರು:
ಮಾಜಿ ಕೇಂದ್ರ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಾರ್ಜ್‌ ಫ‌ರ್ನಾಂಡಿಸ್‌ ಅವರು ಮಹತ್ವದ ಸಮಾಜವಾದಿಯಾಗಿದ್ದರಲ್ಲದೆ ರಾಜಕೀಯ ಕ್ಷೇತ್ರದ ಪ್ರಮುಖರಾಗಿದ್ದರು. ಕೊಂಕಣ ರೈಲ್ವೆ ಯೋಜನೆಯ ಹಿಂದಿನ ಮಹತ್ವದ ಶಕ್ತಿಯಾಗಿದ್ದರು. ಈ ಯೋಜನೆಯಿಂದಾಗಿ ಅವರು ಎಂದಿಗೂ ಸ್ಮರಣೀಯರು ಎಂದು ಹೇಳಿದ್ದಾರೆ.

Advertisement

ನ್ಯಾಯಕ್ಕಾಗಿ ಅವರು ಹೋರಾಟ ನಡೆಸುತ್ತಿದ್ದರು. ಮೊರಾರ್ಜಿ ದೇಸಾಯಿ, ವಾಜಪೇಯಿ ಸಂಪುಟದಲ್ಲಿ ನಾವಿಬ್ಬರು ಜತೆಯಾಗಿ ಕೆಲಸ ಮಾಡಿದ್ದೆವು. ಅವರು ಸರಳತೆಯಲ್ಲಿಯೇ ಜೀವಿಸಿದ್ದರು.
● ಎಲ್‌.ಕೆ.ಅಡ್ವಾಣಿ, ಬಿಜೆಪಿ ಧುರೀಣ

ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವಲ್ಲಿ ಅವರ ಕೊಡುಗೆ ಮಹತ್ವದ್ದು. 1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಅವರ ಹೋರಾಟ ಶ್ಲಾಘನಾರ್ಹ. 
● ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಜಾರ್ಜ್‌ ನಿಧನದ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ಅವರ ಕುಟುಂಬ ಮತ್ತು ಮಿತ್ರ ವರ್ಗಕ್ಕೆ ಅಗಲಿಕೆಯ ದುಃಖವನ್ನು
ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. 

● ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ದೇಶದಲ್ಲಿನ ಕಾರ್ಮಿಕ ಚಳವಳಿಗೆ ಹೊಸ ದಿಕ್ಸೂಚಿಯನ್ನು ಅವರು ನೀಡಿದ್ದರು. ಜಾರ್ಜ್‌ ನನ್ನ ಅತ್ಯುತ್ತಮ ಸ್ನೇಹಿತ.
ಕರ್ನಾಟಕದಿಂದ ಬಂದಿದ್ದ ಅವರು ಮುಂಬೈನವರೇ ಆದರು.

● ಶರದ್‌ ಪವಾರ್‌, ಎನ್‌ಸಿಪಿ ಅಧ್ಯಕ್ಷ

ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವರಲ್ಲಿ ಜಾರ್ಜ್‌ ಒಬ್ಬರು. ಸೈನಿಕನೇ ಮೊದಲು ಎಂಬ ನಿಯಮವನ್ನು ಮೊದಲು ಜಾರಿಗೆ ತಂದ ಹೆಗ್ಗಳಿಕೆ ಅವರದ್ದು.
● ಮನೋಹರ್‌ ಪರ್ರಿಕರ್‌, ಗೋವಾ ಸಿಎಂ

ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next