Advertisement
ತುಮಕೂರು, ಹಾಸನ, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳು ಜಿದ್ದಾಜಿದ್ದಿನ ಕ್ಷೇತ್ರಗಳಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಡಿ ಸೀಟು ಹೊಂದಾಣಿಕೆಯಡಿ ಚುನಾವಣೆ ಎದುರಿಸುತ್ತಿರುವುದರಿಂದ ಈ ಕ್ಷೇತ್ರಗಳ ಫಲಿತಾಂಶವೂ ಮೂರೂ ಪಕ್ಷಗಳ ಮೇಲೂ ಪರಿಣಾಮ ಬೀರಲಿದೆ.
Related Articles
Advertisement
ಹಾಸನದಲ್ಲಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಮೈತ್ರಿಕೂಟದ ಅಭ್ಯರ್ಥಿ. ಬಿಜೆಪಿಯಿಂದ ಕಾಂಗ್ರೆಸ್ ತೊರೆದಿರುವ ಮಾಜಿ ಸಚಿವ ಎ.ಮಂಜು ಅಭ್ಯರ್ಥಿಯಾಗಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್‌ಸಿಂಹ ಎದುರು ಬಿಜೆಪಿಯಲ್ಲೇ ಇದ್ದು ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಎಚ್.ಸಿ.ವಿಜಯಶಂಕರ್ ಮೈತ್ರಿಕೂಟದ ಅಭ್ಯರ್ಥಿ. ಈ ಕ್ಷೇತ್ರ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಬಿಜೆಪಿ ಅಭ್ಯರ್ಥಿಯಾಗಿದ್ದು, ಮೈತ್ರಿಕೂಟದ ಅಭ್ಯರ್ಥಿಯಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣ ಬೈರೇಗೌಡರು ಕಣದಲ್ಲಿದ್ದಾರೆ. ಅನಂತಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಅವರ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸ್ಪರ್ಧೆ ಮಾಡಿದ್ದಾರೆ.
ಇನ್ನು ಕೋಲಾರ ಮೀಸಲು ಕ್ಷೇತ್ರದಲ್ಲಿ ಏಳು ಬಾರಿ ಗೆಲುವು ಸಾಧಿಸಿರುವ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರ ವಿರುದ್ಧ ಬಿಜೆಪಿಯಿಂದ ಮುನಿಸ್ವಾಮಿ ಕಣದಲ್ಲಿದ್ದಾರೆ. ಅಲ್ಲಿ ಕಾಂಗ್ರೆಸ್‌ನ ಆಂತರಿಕ ಸಂಘರ್ಷ ದೆಹಲಿ ಹೈಕಮಾಂಡ್ ಮಟ್ಟದವರೆಗೂ ತಲುಪಿತ್ತು. ಇಷ್ಟರ ನಡುವೆಯೂ ಕೆ.ಎಚ್.ಮುನಿಯಪ್ಪ ಟಿಕೆಟ್ ಪಡೆದು ಬಂದು ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ, ಈ ಕ್ಷೇತ್ರ ಕುತೂಹಲ ಮೂಡಿಸಿದೆ.
ಒಳ ಏಟಿನ “ಆತಂಕ’: ತುಮಕೂರು, ಮಂಡ್ಯ, ಹಾಸನದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ನ ಒಳ ಏಟಿನ ಆತಂಕ ಇದ್ದರೆ, ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಒಳ ಏಟಿನ ಭಯ ಇದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ತಮ್ಮದೇ ಪಕ್ಷದ ಅತೃಪ್ತರ ಹೊಡೆತ ಬೀಳುವ ಅನುಮಾನವಿದೆ. ಕುಟುಂಬ ರಾಜಕಾರಣದ ವಿಚಾರವೂ ಈ ಮೇಲಿನ ಕ್ಷೇತ್ರಗಳಲ್ಲಿ ಹೆಚ್ಚು ಚರ್ಚಿತ ವಿಷಯವಾಗಿದೆ. ಒಟ್ಟಾರೆ, ಪ್ರಚಾರದ ಮಟ್ಟಿಗೆ ಎರಡೂ ಪಕ್ಷಗಳ ನಾಯಕರು ಒಂದಾಗಿದ್ದರೂ ಮತಗಳಿಕೆಯಲ್ಲಿ ಅದು ವರ್ಕ್ ಔಟ್ ಆಗುತ್ತಾ ಎಂಬುದು ಕಾದು ನೋಡಬೇಕಾಗಿದೆ.