Advertisement

ಇನ್ನು ಹತ್ತು ವರ್ಷಗಳಲ್ಲಿ ದಾವಣಗೆರೆ ಐಎಎಸ್‌ ಹಬ್‌- ಜಿ.ಬಿ. ವಿನಯ್‌ ಕುಮಾರ್‌

03:28 PM Sep 16, 2024 | Team Udayavani |

ಉದಯವಾಣಿ ಸಮಾಚಾರ
ದಾವಣಗೆರೆ: ಮುಂದಿನ ಹತ್ತು ವರ್ಷಗಳಲ್ಲಿ ಭಾರತ ದೇಶದಲ್ಲಿ ಐಎಎಸ್‌ ಹಬ್‌ ಆಗಿ ದಾವಣಗೆರೆ ರೂಪುಗೊಳ್ಳಲಿದೆ. ಇನ್‌ಸೈಟ್ಸ್‌ ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಇನ್‌ ಸೈಟ್ಸ್‌ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್‌ ಕುಮಾರ್‌ ತಿಳಿಸಿದರು.

Advertisement

ನಿಜಲಿಂಗಪ್ಪ ಬಡಾವಣೆಯ ರಿಂಗ್‌ರಸ್ತೆಯ ಎಜು ಏಷ್ಯಾ ಶಾಲೆ ಎದುರಿನ ಜಾಧವ್‌ ಕಾಂಪ್ಲೆಕ್ಸ್‌ ನಲ್ಲಿ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ದಾವಣಗೆರೆ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮ್ಯಾಂಚೆಸ್ಟರ್‌ ಆಫ್‌ ಕರ್ನಾಟಕ ಎಂದು ದಾವಣಗೆರೆಯನ್ನು ಕರೆಯಲಾಗುತ್ತಿತ್ತು. ಮುಂಬರುವ ವರ್ಷಗಳಲ್ಲಿ ಐಎಎಸ್‌ ಹಬ್‌ ಮಾಡುವ ಗುರಿ ಇದೆ ಎಂದು ವಿನಯ್‌ ಕುಮಾರ್‌ ತಿಳಿಸಿದರು.

40 ವಿದ್ಯಾರ್ಥಿಗಳಿಂದ ಆರಂಭವಾದ ಇನ್‌ ಸೈಟ್ಸ್‌ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌ನಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಕರ್ನಾ ಟಕವನ್ನು ಐಎಎಸ್‌ ಹಬ್‌ ಆಗಿ ರೂಪುಗೊಳ್ಳುವಂತೆ ಮಾಡಿದ ಕೀರ್ತಿ ಸಲ್ಲುತ್ತದೆ. ದೇಶಾದ್ಯಂತ ಹೆಸರು ಮಾಡುವ ಜೊತೆಗೆ ಪ್ರಖ್ಯಾತಿ ಹೊಂದಿದೆ.

ಬಡವರು, ಹಿಂದುಳಿದವರು, ಆರ್ಥಿಕವಾಗಿ ಸಬಲರಾಗಿಲ್ಲದವರ ಮಕ್ಕಳು ಸರ್ಕಾರಿ ಸೇವೆಗೆ ಸೇರಬೇಕು. ಆ ಮೂಲಕ ಗ್ರಾಮ, ತಾಲೂಕು, ಜಿಲ್ಲೆ ರಾಜ್ಯಕ್ಕೆ ಹೆಸರು ತರುವಂತಾಗಬೇಕೆಂಬ ಪೋಷಕರ ಕನಸಿಗೆ ತಕ್ಕಂತೆ ಕಾರ್ಯನಿರ್ವಹಿಸಲಾಗುತ್ತದೆ
ಎಂದು ತಿಳಿಸಿದರು.

ಹಳ್ಳಿ ಹಳ್ಳಿ ಗಳಲ್ಲಿಯೂ ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ನಾಯಕರು ಸೃಷ್ಟಿ ಆಗಬೇಕು ಎಂಬ ಮೂರು ಪ್ರಮುಖ ಘೋಷಣೆ ಮಾಡಿದಂñಸೆ ನನ್ನ ಇತಿ ಮಿತಿಯಲ್ಲಿ ಕೆಲಸ, ಸೇವೆ ಮಾಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರು, ಅಹಿಂದ ವರ್ಗ ಸೇರಿದಂತೆ ಎಲ್ಲ ವರ್ಗದ ಬಡವರಿಗೆ ನನ್ನ ಕೈಯಲ್ಲಾದಷ್ಟು ರಿಯಾಯತಿ ದರದಲ್ಲಿ ಐಎಎಸ್‌, ಕೆಎಎಸ್‌ ಕೋಚಿಂಗ್‌ ನೀಡಲಾಗುತ್ತದೆ ಎಂದು ತಿಳಿಸಿದರು.

Advertisement

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ವಿದ್ಯಾರ್ಥಿಗಳಂತೆ ಒಟ್ಟು ಜಿಲ್ಲೆಯ 80 ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ಜನ ವರಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು. 2016ರಲ್ಲಿ ಕೆ. ಆರ್‌. ನಂದಿನಿ ಎಂಬ ವಿದ್ಯಾರ್ಥಿನಿ ದೇಶಕ್ಕೆ ರ್‍ಯಾಂಕ್‌ ಬಂದ ಬಳಿಕ ಇನ್‌ ಸೈಟ್ಸ್‌ಸಂಸ್ಥೆಯತ್ತ ಎಲ್ಲರ ಚಿತ್ತ ನೆಟ್ಟಿತು.

ನಮ್ಮ ಸಂಸ್ಥೆಯಿಂದ ಓದಿ ಹೋದವರು ನಾಲ್ವರು ಡಿಸಿಗಳಾಗಿದ್ದಾರೆ. ಆಗುತ್ತಲೂ ಇದ್ದಾರೆ. ಐಎಎಸ್‌, ಕೆಎಎಸ್‌ ಕೇವಲ ಪ್ರತಿಷ್ಠೆಗಾಗಿ ಆಗುವುದಲ್ಲ, ಜನರ ಸೇವೆಗಾಗಿ ಆಯ್ದುಕೊಳ್ಳುವ ಕ್ಷೇತ್ರ. ಜಮ್ಮು ಕಾಶ್ಮೀರ, ಬೆಂಗಳೂರು ಸೇರಿದಂತೆ ಹಲವೆಡೆ ಸಂಸ್ಥೆಯು ಶಾಖೆಗಳನ್ನು ಹೊಂದಿದ್ದು, ದೇಶದಲ್ಲಿಯೇ ಮೂರನೆಯದ್ದು ಎಂಬ ಹೆಗ್ಗಳಿಕೆ ಹೊಂದಿದೆ. ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ. ಗುಣಮಟ್ಟದ ಕೋಚಿಂಗ್‌ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಇನ್‌ ಸೈಟ್ಸ್‌ ಸಂಸ್ಥೆ ಶಾಖೆ ಕಾಟಾಚಾರಕ್ಕೆ ಮಾಡಿಲ್ಲ. ಯುಪಿಎಸ್‌ಸಿ, ಕೆಎಎಸ್‌ ಹಂತದಲ್ಲಿ ಗುಣಮಟ್ಟದ ಕೋಚಿಂಗ್‌ ನೀಡಲಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಬೆಂಗಳೂರಿನ ಫ್ಯಾಕಲ್ಟಿಯೇ ಇಲ್ಲಿಗೆ ಬಂದು ತರಬೇತಿ ನೀಡುತ್ತದೆ. ಮೂರ್ನಾಲ್ಕು ವರ್ಷಗಳಲ್ಲಿ ಯಾರೇ ಬಂದು ಸೇರಿದರೂ ಸರ್ಕಾರಿ ಉದ್ಯೋಗ ಸಿಗುವಂತೆ ಮಾಡುತ್ತೇವೆ. ಅದಕ್ಕೆ ವಿದ್ಯಾರ್ಥಿಗಳ ಶ್ರದ್ಧೆ, ಕಠಿಣ ಪರಿಶ್ರಮ, ಕಲಿಕೆ ಇರಬೇಕು ಅಷ್ಟೆ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಯಲ್ಲಪ್ಪ ಕಕ್ಕರಗೊಳ್ಳ,ಉಪನ್ಯಾಸಕರಾದ ಮಳಲ್ಕೆರೆ ಓಬಳೇಶ್‌ ,ಷಣ್ಮುಖಪ್ಪ ಮಾತನಾಡಿದರು.
ಸಂಸ್ಥೆಯ ಎಂ. ಡಿ. ಶರತ್‌, ಕರಿಬಸವಯ್ಯ ಒಡೆಯರ್‌, ಸಿದ್ದಯ್ಯ ಒಡೆಯರ್‌, ಶಿವಮೂರ್ತಿ, ಮನು ಇತರರು ಇದ್ದರು. ಪುರಂದರ ಲೋಕಿಕೆರೆ ಸ್ವಾಗತಿಸಿದರು.

ಜನಸೇವೆಯೇ ಗುರಿ 
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಆಗ ಹಳ್ಳಿ ಹಳ್ಳಿಗಳಿಗೂ ಹೋಗಿದ್ದೆ. ರಾಜಕಾರಣದಲ್ಲಿ ಸೈಲೆಂಟ್‌ ಆಗಿ ಹೊಡೆದು ಹಾಕಬೇಕು ಎಂಬುದು ಮನದಟ್ಟಾಗಿದೆ. ಎಲೆಕ್ಷನ್‌ ಸೈಲೆಂಟ್‌ ಆಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಸೇವೆ ಮಾಡಲು ಲೋಕಸಭೆಗೆ ಹೋಗಬೇಕೆಂದೇನಿಲ್ಲ. ನಮಗೆ ಇಚ್ಚಾಶಕ್ತಿ, ಜನಸೇವೆ ಮಾಡಬೇಕೆಂಬ ಗುರಿ ಇದ್ದರೆ ಸಾಕು. ದಾವಣಗೆರೆ ಮುಂಬರುವ ದಿನಗಳಲ್ಲಿ ಯಾವ ಮಟ್ಟದಲ್ಲಿಬೆಳೆಯುತ್ತದೆ ಎಂಬುದನ್ನು ಕಾದು ನೋಡಿ ಎಂದು ವಿನಯ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next