Advertisement

ಎತ್ತಿನಹೊಳೆ ಯೋಜನೆ ಯಾವ ಸರಕಾರ ಬಂದರೂ ಜಾರಿ ಖಚಿತ: ರೈ

03:45 AM Jan 01, 2017 | Team Udayavani |

ಮಂಗಳೂರು: ಯಾವುದೇ ಸರಕಾರ ಬಂದರೂ ಎತ್ತಿನಹೊಳೆ ಯೋಜನೆ ಜಾರಿಯಾಗದೆ ಇರುವುದಿಲ್ಲ. ಡಿ. 26ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳ ಸಲಹೆಯನ್ನು ಒಪ್ಪಿಕೊಂಡು ಬಂದ ಕೆಲವು ಹೋರಾಟಗಾರರು ರಾಜಕೀಯ ಅಸ್ತಿತ್ವ
ಕೋಸ್ಕರ ಅಮಾಯಕರ ಮೇಲೆ ಆರೋಪ ಹೊರಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೋರಾಟಗಾರರ ಮನವಿಯ ಮೇರೆಗೆ ಚರ್ಚೆಗೆ ಅವಕಾಶ ನೀಡುವಂತೆ ನಾನೇ ಮುಖ್ಯಮಂತ್ರಿಗಳ ಬಳಿ ಕೇಳಿದ್ದೆ. ಅದರಂತೆ ಸುಮಾರು ಒಂದೂವರೆ ತಾಸು ಕಾಲ ಸಭೆ ನಡೆದು ವಿಷಯ ತಜ್ಞರ ಜತೆ ಚರ್ಚಿಸುವಂತೆ ಸಿಎಂ ಅವರ ಹೇಳಿಕೆಗೆ ಸಂಸದ ನಳಿನ್‌, ವಿಧಾನ ಪರಿಷತ್‌ ಸದಸ್ಯ ಕಾರ್ಣಿಕ್‌ ಸಹಿತ ಹೋರಾಟಗಾರರು ಒಪ್ಪಿಗೆ ಸೂಚಿಸಿದ್ದರು ಎಂದರು.

ಯಾರನ್ನೂ ಬೈದಿಲ್ಲ ಸಭೆಯಲ್ಲಿ ನಾನು ಹಿಂದಿನ ವಿಚಾರ ಮಾತನಾಡುವ ವೇಳೆ ಹಿಂದಿನ ವಿಚಾರ ಬೇಡ ಎಂದಾಗ ಯಾಕೆ
ಎಂದು ಕೇಳಿ ಚರ್ಚೆ ನಡೆದಿತ್ತೇ ವಿನಃ ನಾನು ಯಾರನ್ನೂ ಬೈದಿಲ್ಲ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ನ ಸಣ್ಣ ಕಾರ್ಯಕರ್ತನಿಂದ ಹಿಡಿದು ದೊಡ್ಡ ನಾಯಕರ ವರೆಗೆ ವೈಯಕ್ತಿಕವಾಗಿ ಹಿಂದೆಯೂ ದೂರಿಲ್ಲ, ಮುಂದೆಯೂ ದೂರುವುದಿಲ್ಲ. ಆದರೆ ಇಂದು ನನ್ನ ಜತೆಗೆ ಓದಿ ಬೆಳೆದವರೇ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಾಗಿ ಅದಕ್ಕೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದರು.

ತಪ್ಪು ಮಾಹಿತಿ ರವಾನೆ
ಸಭೆಯಲ್ಲಿ ಮುಖ್ಯಮಂತ್ರಿಗಳ ಸಲಹೆಗೆ ಒಪ್ಪಿಗೆ ಸೂಚಿಸಿದವರು ಹೊರಗೆ ಬಂದು ರಾಜಕೀಯ ಲಾಭಕೋಸ್ಕರ ಏನೂ ಚರ್ಚೆ ನಡೆದಿಲ್ಲ ಎಂದಿದ್ದಾರೆ. ಈ ಮೂಲಕ ಸಮಾಜಕ್ಕೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಜಿ.ಪಂ. ಚುನಾವಣೆಯ ಸಂದರ್ಭದಲ್ಲೂ ಎತ್ತಿನಹೊಳೆ ಯೋಜನೆಯ ಜಾರಿಯ ಕುರಿತು ಚುನಾವಣಾ ಪ್ರಣಾಳಿಕೆಯಲ್ಲೂ ತಿಳಿಸಿತ್ತು. ಯೋಜನೆ ಜಾರಿಯ ಕುರಿತು ವಿಷಯ ತಜ್ಞ ರಾಮ್‌ಪ್ರಸಾದ್‌ ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ರೈ ತಿಳಿಸಿದರು.

2012ರ ಜೂನ್‌ 13ರಂದು ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ಅಂದು ಯಾರೂ ಸಭೆ ನಡೆಸಿಲ್ಲ. ಕೆಲವರು ಯೋಜನೆಯ ಕುರಿತು ಒಂದೊಂದು ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಯೋಜನೆಯ ಕುರಿತ ಅನುಮಾನ ನಿವಾರಿಸಲು ವಿಷಯ ತಜ್ಞ ರಾಮ್‌ಪ್ರಸಾದ್‌ ಅವರನ್ನು ಜಿಲ್ಲೆಗೆ ಕರೆಸಿ ಮಾತುಕತೆಗೆ ಅವಕಾಶ ನೀಡುತ್ತೇನೆ ಎಂದು ರೈ ತಿಳಿಸಿದರು.

Advertisement

ಅನುಮತಿ ಬೇಕಿಲ್ಲ
ಮರಗಳನ್ನು ಕಡಿಯಲು ಅನುಮತಿ ನೀಡಿಲ್ಲ ಎಂಬ ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿ ಸಿದ ಸಚಿವ ರೈ ಅವರು, ಕುಡಿಯುವ ನೀರಿನ ಯೋಜನೆಗೆ ಮರ ಕಡಿಯಲು ಕೇಂದ್ರದ ಅನುಮತಿ ಬೇಕಿಲ್ಲ. ಈ ಕುರಿತು ಕೇಂದ್ರ ಸಚಿವರಿಗೂ ತಿಳಿದಿದೆ. ಅವರು ಒಪ್ಪಿಗೆ ನೀಡದೇ ಇದ್ದರೆ ಯೋಜನೆಯನ್ನು ನಿಲ್ಲಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಮೊದಿನ್‌ ಬಾವಾ, ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷ ಕೋಡಿಜಾಲ್‌ ಇಬ್ರಾಹಿಂ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಮೇಯರ್‌ ಹರಿನಾಥ್‌, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಕಾರ್ಪೊರೇಟರ್‌ಗಳಾದ ಶಶಿಧರ್‌ ಹೆಗ್ಡೆ, ಕವಿತಾ ಸನಿಲ್‌, ಎ.ಸಿ. ವಿನಯರಾಜ್‌, ಅಶೋಕ್‌ ಕುಮಾರ್‌, ಕೆಎಸ್‌ಆರ್‌ಟಿಸಿ ನಿರ್ದೇಶಕ ಟಿ.ಕೆ. ಸುಧೀರ್‌, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಆರ್‌.ಕೆ. ಪೃಥ್ವಿರಾಜ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next