Advertisement

NASA; ಅಂತರಿಕ್ಷದಲ್ಲೇ ಅತಂತ್ರ! ಬಾಹ್ಯಾಕಾಶದಿಂದ ಅಮೆರಿಕದ ಗಗನಯಾತ್ರಿಗಳು ಮರಳೋದು ಯಾವಾಗ?

08:08 AM Jul 03, 2024 | Team Udayavani |

ಕೆಲವು ದಿನಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ನಾಸಾದ ಗಗನಯಾನಿಗಳು ಪ್ರಯಾಣದ ಅವಧಿ ಮುಗಿದರೂ ಅಂತರಿಕ್ಷದಲ್ಲೇ ಉಳಿದಿರುವುದು ಏಕೆ? ಬಾಹ್ಯಾಕಾಶ ನಿಲ್ದಾಣದಲ್ಲಿ ಆಗಿರುವ ತಾಂತ್ರಿಕ ತೊಂದರೆಯೇನು? ಸ್ಪೇಸ್‌ ಬಗ್‌ಗಳ ಬಗೆಗಿನ ಮಾಹಿತಿ, ಹೀಲಿಯಂ ಸೋರಿಕೆಯಿಂದಾಗುವ ಅಪಾಯವೇನು? ಯಾವಾಗ ಮರಳಿ ಬರ್ತಾರೆ ಸುನೀತಾ ವಿಲಿಯಮ್ಸ್‌ ಹಾಗೂ ತಂಡ…. ಇದೆಲ್ಲದರ ಕುರಿತು ಮಾಹಿತಿ ಇಲ್ಲಿದೆ.

Advertisement

ಜೂನ್‌ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ಪ್ರಯಾಣ ಬೆಳೆಸಿದ್ದ ಭಾರತ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಹಾಗೂ ಅಮೆರಿಕದ ಬ್ಯಾರಿ (ಬಚ್‌) ವಿಲ್ಮೋರ್‌ ಯಶಸ್ವಿಯಾಗಿ ನಿಲ್ದಾಣವನ್ನೇನೋ ತಲುಪಿದ್ದರು. ಆದರೆ ಸಂಶೋಧನೆ ಮುಗಿಸಿ ಜೂ.14ರಂದು ಮರಳಿ ಬರಬೇಕಿದ್ದ ಅವರು ಇನ್ನೂ  ಬಾರದಿ ರುವುದು ಇಡೀ ವಿಶ್ವದ ಆತಂಕಕ್ಕೆ ಕಾರಣವಾಗಿದೆ. ಅಂತರಿಕ್ಷ ಯಾನದಲ್ಲಿನ ಹಲವು ತಾಂತ್ರಿಕ ದೋಷಗಳಿಂದ ಅವರು ಮತ್ತೆ ತಮ್ಮ ಅಂತರಿಕ್ಷ ನೌಕೆಯಲ್ಲಿ ಪ್ರಯಾಣ ಬೆಳೆಸು ವುದು ಅಸಾಧ್ಯ ಎನ್ನುತ್ತಿದ್ದಾರೆ ತಜ್ಞರು. ನಾಸಾ ಕೂಡ ಅವರು ಯಾವಾಗ ಮರಳಿ ಬರುತ್ತಾರೆಂದೂ ಹೇಳುತ್ತಿಲ್ಲ.  ಈ ಅಂತರಿಕ್ಷ ಯಾನ ದುರಂತದಲ್ಲಿ ಏನಾದರೂ ಅಂತ್ಯವಾಗಬ ಹುದೇ ಎಂಬ ಆತಂಕ ಎಲ್ಲರಿಗೂ ಕಾಡುತ್ತಿದೆ.

ಬಾಹ್ಯಾಕಾಶದಲ್ಲಿ ಬ್ಯಾಕ್ಟೀರಿಯಾ ತಂದಿಟ್ಟ ಫ‌ಜೀತಿ!

ಸುನೀತಾ ಹಾಗೂ ವಿಲ್ಮೋರ್‌ ಅಂತಾರಾಷ್ಟ್ರೀಯ ಬಾಹ್ಯಾ ಕಾಶ ನಿಲ್ದಾಣಕ್ಕೆ ಹೋದ ಮೊದಲ ದಿನವೇ ಸ್ಪೇಸ್‌ ಬಗ್‌ಗಳು ಪತ್ತೆಯಾಗಿದ್ದವು. ಗಗನಯಾತ್ರಿಗಳ ಆರೋಗ್ಯಕ್ಕೆ ತೊಂದರೆ ಉಂಟುಮಾಡುವ ಬ್ಯಾಕ್ಟೀರಿಯಾವೊಂದು ಬಾಹ್ಯಾಕಾಶದಲ್ಲಿ ಪತ್ತೆಯಾಗಿತ್ತು. ವಿಜ್ಞಾನಿಗಳು ಇದಕ್ಕೆ “ಬುಗಾಂಡೆನ್ಸಿಸ್‌’ ಎಂದು ಹೆಸರಿಸಿದ್ದಾರೆ. ಇದು ಬಹುತೇಕ ಔಷಧಗಳಿಗೆ ಪ್ರತಿರೋಧ ಹೊಂದಿರುವಂತಹ ಬಲಶಾಲಿ ಬ್ಯಾಕ್ಟೀರಿಯಾ ಎಂಬ ಕಾರಣಕ್ಕೆ ವಿಜ್ಞಾನಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಈ ಸ್ಪೇಸ್‌ ಬಗ್‌ ಕಾಣಿಸಿಕೊಳ್ಳುವುದು ಮೊದಲ ಬಾರಿಯೇನಲ್ಲವಾದರೂ ಇದು ಸಮಸ್ಯೆಯನ್ನುಂಟುಮಾಡುತ್ತದೆಂಬ ಆತಂಕ ಇದ್ದೇ ಇತ್ತು. ಕಳೆದ 24 ವರ್ಷಗಳಿಂದ ಐಎಸ್‌ಎಸ್‌ನಲ್ಲಿ ವಿಕಸನ ಗೊಂಡಿರುವ ಈ ಬ್ಯಾಕ್ಟೀರಿಯಾದ 13 ತಳಿಗಳನ್ನು ಈಗಾಗಲೇ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೆ ಈ ಬಾರಿ ಪತ್ತೆಯಾದ ಸೂಕ್ಷ್ಮಜೀವಿ ಹೊಸ ರೂಪಾಂತರ. ಐಎಸ್‌ಎಸ್‌ನ ಮುಚ್ಚಿದ ವಾತಾವರಣದಲ್ಲೂ ಹೆಚ್ಚು ಶಕ್ತಿ ಪಡೆಯುತ್ತಿದೆ. ಸಾಕಷ್ಟು ಸಂಶೋಧಿಸಿದ ಬಳಿಕ ಇದಕ್ಕೆ ಪರಿಹಾರವನ್ನೂ ವಿಜ್ಞಾನಿಗಳು ಪತ್ತೆಹಚ್ಚಿ ಗಗನಯಾನಿಗಳ ಆತಂಕ ದೂರ ಮಾಡಿದರು.

ಬ್ಯಾಕ್ಟೀರಿಯಾ ಬಗ್‌ ಬಳಿಕ  ಹೀಲಿಯಂ ಸೋರಿಕೆ

Advertisement

ಸ್ಪೇಸ್‌ ಬಗ್‌ ಸಮಸ್ಯೆ ಪರಿಹರಿಸಿ ಸಂಶೋಧನೆ ಆರಂಭಿಸಿದವರಿಗೆ ಹೊಸ ಸಮಸ್ಯೆಯೊಂದು ಆರ‌ಂಭವಾಯಿತು. ಸುನೀತಾ ಪಯಣ ಬೆಳೆಸಿದ್ದ ಬೋಯಿಂಗ್‌ ನಿರ್ಮಿತ ಸ್ಟಾರ್‌ಲೈನರ್‌ ಸ್ಪೇಸ್‌ಕ್ರಾಫ್ಟ್ನಲ್ಲಿ ಹೀಲಿಯಂ ಸೋರಿಕೆಯಾ ಗುತ್ತಿರುವುದು ತಿಳಿದುಬಂದಿದೆ. ಸ್ಪೇಸ್‌ಶಿಪ್‌ನಲ್ಲಿ ಹೀಲಿಯಂ ನಿರ್ದಿಷ್ಟ ಪ್ರಮಾಣದ ಒತ್ತಡ ಉಂಟುಮಾಡದೇ ಹೋದಲ್ಲಿ ನೌಕೆಗೆ ಬೇಕಾಗುವಷ್ಟು ಇಂಧನ ಹೊರಬರುವುದಿಲ್ಲ. ಇಲ್ಲಿ ಹೀಲಿಯಂ ಈ ನೌಕೆಯ ಇಂಧನವಲ್ಲ. ಆಕ್ಸಿಜನ್‌ ಹಾಗೂ ಹೈಡ್ರೋಜನ್‌ ಬಳಸಿ ಚಲಿಸುವ ಸ್ಪೇಸ್‌ ಶಿಪ್‌ನ ಎಂಜಿನ್‌ಗೆ ಇಂಧನ ತಲುಪಲು ನಿರ್ದಿಷ್ಟ ಪ್ರಮಾಣದ ಹೀಲಿಯಂ ಆವಶ್ಯಕತೆ ಇರುತ್ತದೆ. ಹೀಗಾಗಿ ಜೂ.14ರಂದೇ ಮರಳಿ ಬರಬೇಕಿದ್ದ ಗಗನಯಾನಿಗಳ ತಂಡ ಇನ್ನೂ ಅಲ್ಲೇ ಉಳಿದಿದೆ. ಒಂದು ವೇಳೆ ಹೀಲಿಯಂ ಸೋರಿಕೆಯ ನಡುವೆಯೇ ಸ್ಟಾರ್‌ಲೈನರ್‌ನಲ್ಲಿ ಗಗನಯಾನಿಗಳು ಮರಳಿದಲ್ಲಿ ಅಪಾಯ ಎದುರಾಗುವುದು ನಿಶ್ಚಿತ.

45 ದಿನದಲ್ಲಿ ಗಗನಯಾನಿಗಳು  ಬರದಿದ್ದರೆ ಏನಾಗಬಹುದು?

ಭುಮಿಯಿಂದ 400 ಕಿ.ಮೀ ದೂರದಲ್ಲಿರುವ ಐಎಸ್‌ಎಸ್‌ಗೆ ಪ್ರಯಾಣ ಮಾಡುವ ಗಗನಯಾನಿಗಳು ತಿಂಗಳುಗಟ್ಟಲೇ ಅಲ್ಲೇ ಉಳಿಯುವಷ್ಟು ವ್ಯವಸ್ಥೆ ಮಾಡಲಾಗಿರುತ್ತದೆ. ಐಎಸ್‌ಎಸ್‌ನಲ್ಲಿ ಗಗನಯಾನಿಗಳಿಗೆ ಊಟ, ವಸತಿ, ಚಿಕಿತ್ಸೆ, ಮನರಂಜನೆ ಸೇರಿ ಎಲ್ಲ ಮೂಲಭೂತ ವ್ಯವಸ್ಥೆಗಳಿವೆ. ಕನಿಷ್ಟ 45 ದಿನಗಳು ಯಾವುದೇ ತೊಂದರೆಯಿಲ್ಲದೇ ಗಗನಯಾನಿಗಳು ಇಲ್ಲಿರಬಹುದು. ಈಗ ದೋಷಯುಕ್ತ ಸ್ಟಾರ್‌ಲೈನರ್‌ ಸ್ಪೇಸ್‌ಶಿಪ್‌ನಲ್ಲಿ ಸುನೀತಾ ಹಾಗೂ ಬಚ್‌ ಪ್ರಯಾಣ ಮಾಡಿ ಅಪಾಯಕ್ಕೀಡಾಗುವ ಬದಲು ಪರ್ಯಾಯ ಯೋಜನೆ ಸಿದ್ಧವಾಗುವವರೆಗೂ ಅವರು ಐಎಸ್‌ಎಸ್‌ನಲ್ಲೇ ಉಳಿಯುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ ತಜ್ಞರು.

ಮತ್ತೊಂದು ಅಂತರಿಕ್ಷ ನೌಕೆಯನ್ನು ಕಳಿಸುತ್ತಾ ನಾಸಾ?

ನಾಸಾ ದೋಷಪೂರಿತ ಸ್ಟಾರ್‌ಲೈನರ್‌ ಸ್ಪೇಸ್‌ಶಿಪ್‌ನಲ್ಲೇ ಈ ಗಗನಯಾನಿಗಳನ್ನು ಮರಳಿ ಕರೆತಂದರೆ ತೊಂದರೆ ಕಟ್ಟಿಟ್ಟ ಬುತ್ತಿ. ಈಗ ನಾಸಾಗೆ ಪರ್ಯಾಯ ಪರಿಹಾರವೆಂದರೆ ಭೂಮಿಯಿಂದ ಮತ್ತೂಂದು ಸ್ಪೇಸ್‌ಶಿಪ್‌ ಅನ್ನು ಐಎಸ್‌ಎಸ್‌ಗೆ ಕಳುಹಿಸಿ, ಅದರ ಮೂಲಕ ಇವರನ್ನು ಕರೆತರುವುದು. ಆದರೆ ನಾಸಾ ಈ ಬಗ್ಗೆ ಏನು ನಿರ್ಧಾರ ಕೈಗೊಳ್ಳಲಿದೆ ಕಾದುನೋಡಬೇಕು.

ಸ್ಪೇಸ್‌ ಎಕ್ಸ್‌ನ ಸಹಾಯ: ನಾಸಾ ತನ್ನ ದೊಡ್ಡಸ್ತಿಕೆ ಸರಿಸಿ ಎಲಾನ್‌ ಮಸ್ಕ್ ಮಾಲಕತ್ವದ ಸ್ಪೇಸ್‌ ಎಕ್ಸ್‌ನ ಸಹಾಯ ಪಡೆಯಬಹುದಾದ ಆಯ್ಕೆ ಇದೆ. ಆದರೆ ನಾಸಾ ಇದನ್ನು ಮಾಡಲಿದೆಯೇ ಎಂಬುದು ಪ್ರಶ್ನೆ. ಈಗಾಗಲೇ 4 ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ ಎಕ್ಸ್‌ ನ ಕ್ರೂéಡ್‌ ಡ್ರ್ಯಾಗನ್‌ ಷಟಲ್‌ ಸ್ಪೇಸ್‌ಶಿಪ್‌ ಐಎಸ್‌ಎಸ್‌ ತಲುಪಿದ್ದು ಕೆಲವು ದಿನಗಳಲ್ಲೇ ಮರಳಿಬರಲಿದೆ. ಈ ಸ್ಪೇಸ್‌ಶಿಪ್‌ನಲ್ಲಿ 4 ಜನರ ಜತೆ ಇನ್ನಿಬ್ಬರನ್ನು ಕರೆತರಬಹುದಾದ ಸೌಲಭ್ಯ ಇದೆ. ಆದರೆ ನಾಸಾ ಈ ಆಯ್ಕೆಯನ್ನು ಪರಿಗಣಿಸುವುದೇ ಕಾದುನೋಡಬೇಕು.

ಸುನೀತಾ ಬರೆದ ದಾಖಲೆಗಳು

ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ ದಶಕಗಳಿಂದ ನಾಸಾ ಸಂಸ್ಥೆಯಲ್ಲಿ ಗಗನಯಾನಿಯಾಗಿದ್ದಾರೆ. 2006-07ರಲ್ಲಿ ಮೊದಲ ಬಾರಿಗೆ ಗಗನಯಾನ ಬೆಳೆಸಿದ್ದ ಸುನೀತಾ, ದಾಖಲೆ ಬರೆದಿದ್ದರು. ಬಾಹ್ಯಾಕಾಶದಲ್ಲೇ 4 ಗಂಟೆ 24 ನಿಮಿಷ ಟ್ರೆಡ್‌ ಮಿಲ್‌ ಮೇಲೆ ಮ್ಯಾರಥಾನ್‌ ಓಡಿ ದಾಖಲೆ ಬರೆದಿದ್ದರು. ಈ ರೀತಿ ಮ್ಯಾರಥಾನ್‌ ಓಡಿದ ಮೊದಲ ಮಹಿಳೆ ಇವರಾಗಿದ್ದು, ಈ ದಾಖಲೆ ಇಲ್ಲಿಯವರೆಗೂ ಯಾರೂ ಮುರಿದಿಲ್ಲ. ಜತೆಗೆ 7 ಯಶಸ್ವಿ ಬಾಹ್ಯಾಕಾಶ ನಡಿಗೆಗಳನ್ನು ಸುನೀತಾ ಮಾಡಿದ್ದು ಒಟ್ಟು 50 ಗಂಟೆ 40 ನಿಮಿಷಗಳನ್ನು ಈ ನಡಿಗೆಯಲ್ಲಿ ಕಳೆದಿದ್ದಾರೆ.

ದುರಂತ ಕಂಡ ಕಲ್ಪನಾ ಚಾವ್ಲಾ

2003ರಲ್ಲಿ  ಕಲ್ಪನಾ ಚಾವ್ಲಾ ಇತರರು ಬಾಹ್ಯಾಕಾಶ ನಿಲ್ದಾಣಕ್ಕೆ ಕೊಲಂ ಬಿಯಾ ಗಗನನೌಕೆಯಲ್ಲಿ ಪ್ರಯಾಣ ಬೆಳೆಸಿದ್ದ ಈ ತಂಡ ಮರಳಿ ಬರುವಾಗ ನೌಕೆ ಸ್ಫೋಟಗೊಂಡು ಅದರಲ್ಲಿದ್ದವರು ಮೃತರಾಗಿದ್ದರು.

ಜು.6ಕ್ಕೆ ಹಿಂದಿರುಗುವ ಪ್ಲ್ರಾನ್‌?

ಹೀಲಿಯಂ ಸೋರಿಕೆಯನ್ನು ತಡೆಗಟ್ಟಲು ನಾಸಾ ಎಲ್ಲ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು, ಜುಲೈ 6ರಂದು ಗಗನಯಾತ್ರಿಗಳನ್ನು ವಾಪಸ್ಸು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ಹೇಳುತ್ತಿವೆ. ಆದರೆ ನಾಸಾ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈಗಾಗಲೇ ಈ ಯೋಜನೆ 2 ಬಾರಿ ಮುಂದೂಡಲ್ಪಟ್ಟಿತ್ತು. ಈ ಬಾರಿ ಯಾವುದೇ ಅಡಚಣೆಯಿಲ್ಲದೇ ಯೋಜನೆ ನಡೆಯಬೇಕೆಂಬ ಮಹತ್ವಾಕಾಂಕ್ಷೆ ನಾಸಾಗಿತ್ತು. ಆದರೆ ಇದೀಗ ಹಂತ ಹಂತದಲ್ಲೂ ತೊಂದರೆಗಳು ಎದುರಾಗುತ್ತಿದ್ದು, ನಾಸಾ ಸರಿಯಾಗಿ ಯೋಚಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.

ತೇಜಸ್ವಿನಿ ಸಿ. ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next