Advertisement

ಸೆಪ್ಟೆಂಬರ್‌ನಲ್ಲಿ ಡಾ. ವಿಷ್ಣುವರ್ಧನ್‌ ರಾಷ್ಟ್ರೀಯ ಉತ್ಸವ

06:36 PM Aug 01, 2018 | Sharanya Alva |

ಡಾ. ವಿಷ್ಣು ಸೇನಾ ಸಮಿತಿಯವರು ಕಳೆದ ವರ್ಷ ನವದೆಹಲಿಯಲ್ಲಿ ಡಾ. ವಿಷ್ಣುವರ್ಧನ್‌ ರಾಷ್ಟ್ರೀಯ ಉತ್ಸವವನ್ನು ಆಯೋಜಿಸಿದ್ದು ನೆನಪಿರಬಹುದು. ಈ ಉತ್ಸವವನ್ನು ಮುಂದುವರೆಸಿಕೊಂಡು ಹೋಗಲು ಸಮಿತಿ ನಿರ್ಧರಿಸಿದ್ದು, ಈ ಬಾರಿ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಉತ್ಸವವನ್ನು ಆಯೋಜಿಸಲು ಉದ್ದೇಶಿಸಿದೆ.

Advertisement

ಈ ವರ್ಷದ ಡಾ. ವಿಷ್ಣುವರ್ಧನ ರಾಷ್ಟ್ರೀಯ ಉತ್ಸವವು ಸೆಪ್ಟೆಂಬರ್‌ 16, 17 ಮತ್ತು 18ರಂದು ಕೆ.ಆರ್‌. ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿದೆ. ಸೆಪ್ಟೆಂಬರ್‌ 16ರಂದು ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕುವೆಂಪು ಕಲಾಕ್ಷೇತ್ರದವರೆಗೆ ಬೃಹತ್‌ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು, ಸಿನಿಮಾ ಕಲಾವಿದರು ಮತ್ತು 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಲಿದ್ದಾರೆ. ಈ ಉದ್ಘಾಟನ ಸಮಾರಂಭವನ್ನು ಖ್ಯಾತ ಸಾಹಿತಿಗಳು ಮತ್ತು ಮಠಾಧೀಶರು ಉದ್ಘಾಟಿಸಲಿದ್ದು, ಅಂದು ವಿಷ್ಣುವರ್ಧನ್‌ ಅವರನ್ನು ಕುರಿತ ಮೂರು ಪುಸ್ತಕಗಳು ಬಿಡುಗಡೆಯಾಗಲಿವೆ.

ವಿಶೇಷವೆಂದರೆ, ಈ ಬಾರಿ “ವೀರಪ್ಪನಾಯ್ಕ’ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ಗೆಟಪ್‌ನ ಪುತ್ಥಳಿಯನ್ನು ಅನಾವರಣ ಮಾಡಲಾಗುತ್ತಿದೆ. ಅದಲ್ಲದೆ ಡಾ. ವಿಷ್ಣು ಅವರ ಬದುಕು ಮತ್ತು ಸಾಧನೆಗಳನ್ನು ಚಿತ್ರಗಳಲ್ಲಿ ಕಟ್ಟಿಕೊಡುವ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನವ ವಿತರಿಸಲಾಗುವುದು. ಜೊತೆಗೆ ಡಾ. ವಿಷ್ಣುವರ್ಧನ್‌ ಅವರ ಛಾಯಾಚಿತ್ರ ಪ್ರದಶಘನವನ್ನು ಹಮ್ಮಿಕೊಳ್ಳುವುದರ ಜೊತೆಗೆ ಡಾ. ವಿಷ್ಣು ಅವರೊಂದಿಗೆ ನಟಿಸಿದ ನಟಿಯರು ಮತ್ತು ಯುವ ನಟರನ್ನೊಳಗೊಂಡ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. 

ಇದೆಲ್ಲದರ ಜೊತೆಗೆ ಪ್ರತಿ ದಿನವೂ ಸಂಜೆಗೆ ಡಾ. ವಿಷ್ಣು ಗೀತೆಗಳ ಸಂಗೀತ ಸಂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲನೇ ದಿನ ವಿಷ್ಣು ಅವರ ಯುಗಳ ಗೀತೆಗಳು, ಎರಡನೇ ದಿನ ಕನ್ನಡಪರ ಗೀತೆಗಳು ಮತ್ತು ಮೂರನೇ ದಿನ ವಿಷ್ಣು ಅಭಿಮಾನದ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು. ಈ ಸಮಾರಂಭದಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದ್ದು, ಅಮೇರಿಕಾ, ದುಬೈ ಮತ್ತು ಆಸ್ಟ್ರೇಲಿಯಾದಿಂದ ಅಭಿಮಾನಿಗಳು ಈ ಉತ್ಸವದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಡಾ. ವಿಷ್ಣುವರ್ಧನ ರಾಷ್ಟ್ರೀಯ ಉತ್ಸವದ ಉತ್ಸವ ಗೀತೆಗೆ ಕೆ. ಕಲ್ಯಾಣ ಅವರು ಸಾಹಿತ್ಯ ಮತ್ತು ಸಂಗೀತವನ್ನು ನೀಡುತ್ತಿದ್ದು, ಭಾರತೀ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬವಾದ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next