Advertisement

ಕಳೆದುಹೋದ ಮುಖ್ಯಮಂತ್ರಿ ಹುಡುಕಾಟದಲ್ಲಿ …

10:43 AM Mar 02, 2018 | |

ರಾಜಕೀಯ ವಿಡಂಬನೆ ಕುರಿತು ಈಗಾಗಲೇ ಹಲವು ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “ಮುಖ್ಯಮಂತ್ರಿ ಕಳೆದೋದ್ನಪ್ಪೊ’ ಕೂಡ ಸೇರಿದೆ. ಈ ಚಿತ್ರ ಮಾರ್ಚ್‌ 9 ರಂದು ರಾಜ್ಯಾದ್ಯಂತೆ ತೆರೆಗೆ ಬರಲು ಅಣಿಯಾಗಿದೆ. ಈ ಚಿತ್ರದ ಮೂಲಕ ಶಿವಕುಮಾರ್‌ ಭದ್ರಯ್ಯ ನಿರ್ದೇಶಕರಾಗುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಸ ಮತ್ತು ನಿರ್ಮಾಣದ ಜತೆಯಲ್ಲಿ ಚಿತ್ರದಲ್ಲೊಂದು ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ.

Advertisement

ಸಾಮಾನ್ಯವಾಗಿ ಸರ್ಕಾರದ ಮಂತ್ರಿಗಳು ಯಾವುದೇ ಕ್ಷೇತ್ರಕ್ಕೆ ಹೋಗದೆ, ಜನರನ್ನು ಭೇಟಿ ಮಾಡದೆ ಇದ್ದಾಗ, ವಿರೋಧ ಪಕ್ಷದವರು, ಸಿಎಂ ಕಳೆದುಹೋಗಿದ್ದಾರೆ ಅಂತ ಬೊಬ್ಬೆ ಹಾಕುವುದು ಗೊತ್ತೇ ಇದೆ. ಅಂತಹ ಹಲವು ಘಟನೆಗಳನ್ನು ಇಟ್ಟುಕೊಂಡು ಮಾಡಿರುವ ಮೊದಲ ಸಿನಿಮಾ ಮತ್ತು ಅದರ ಅಂಶಗಳ ಕುರಿತು ಶಿವಕುಮಾರ್‌ ಮಾತನಾಡಿದ್ದಾರೆ.

ಸಮಾಜ ಕಳಕಳಿಯ ಚಿತ್ರ: “ಇದು ರಾಜಕೀಯ ವಾಸ್ತವತೆ ಕುರಿತಾದ ಚಿತ್ರ. ಇಲ್ಲಿ ಚುನಾವಣೆ ಬಗ್ಗೆ ಹೇಳಲಾಗಿದೆ. ಮತದಾರರಿಗೂ ಒಂದು ಸಂದೇಶವಿದೆ. ಸಮಾಜದಲ್ಲಾಗುತ್ತಿರುವ ಭ್ರಷ್ಟತೆ, ಮೌಡ್ಯತೆ ತೋರಿಸಲಾಗಿದೆ. ಕೆಟ್ಟ ರಾಜಕಾರಣಿಗಳು ಹೇಗೆಲ್ಲಾ ಜನರನ್ನು ವಂಚಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಒಂದು ಶೌಚಾಲಯಕ್ಕೆ ಸಂಬಂಧಿಸಿದಂತೆ ನಡೆಯುವ ಹಗರಣವೊಂದು ದೊಡ್ಡ ಸುದ್ದಿಯಾದಾಗ, ಇದ್ದಕ್ಕಿದ್ದಂತೆಯೇ ಮುಖ್ಯಮಂತ್ರಿ ಕಳೆದು ಹೋಗುತ್ತಾನೆ.

ಆಮೇಲೆ ಏನೆಲ್ಲಾ ಆಗುತ್ತೆ ಎಂಬುದೇ ಕಥಾಹಂದರ. ಕಥೆಗೆ ಪೂರಕವಾಗಿ ಹಾಡುಗಳಿವೆ. ಇಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಬಾಬು ಹಿರಣ್ಣಯ್ಯ ಅವರಿಲ್ಲಿ ಮುಖ್ಯಮಂತ್ರಿಯಾಗಿ ನಟಿಸಿದ್ದಾರೆ. ಇಲ್ಲಿ ಇನ್ನೊಬ್ಬ ಮುಖ್ಯಮಂತ್ರಿ ಇದ್ದಾರೆ. ಅದು ಸಿನಿಮಾದಲ್ಲೇ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಕಮ್‌ ನಿರ್ಮಾಪಕ ಶಿವಕುಮಾರ್‌. “ಮಾರ್ಚ್‌ 9ರಂದು ರಾಜ್ಯಾದ್ಯಂತ ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ನಾವೇ ಸ್ವತಃ ಚಿತ್ರವನ್ನು ವಿತರಣೆ ಮಾಡುತ್ತಿದ್ದೇವೆ. ಸೆನ್ಸಾರ್‌ ಮಂಡಳಿಯು ವೀಕ್ಷಿಸಿ, ಚಿತ್ರಕ್ಕೆ “ಯು’ ಪ್ರಮಾಣ ಪತ್ರ ನೀಡಿದೆ. ಆದರೆ, ಚಿತ್ರ ನೋಡಿ ಜನರು ಕೊಡುವ ತೀರ್ಮಾನ ನಮಗೆ ಮುಖ್ಯ. ಸಮಾಜದ ಕಳಕಳಿ ಇಟ್ಟುಕೊಂಡು ಮಾಡಿರುವ ಚಿತ್ರವಾಗಿರುವುದರಿಂದ ಇಲ್ಲಿ ಸಾಕಷ್ಟು ವಿಷಯಗಳಿವೆ. ಚುನಾವಣೆ ಕುರಿತಾದ ಅಂಶಗಳಿವೆ. ಜನರು ಎಂಥವರಿಗೆ ಮತ ಹಾಕಬೇಕು, ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತು ಇಲ್ಲಿ ಹೇಳಲಾಗಿದೆ.

Advertisement

ಚುನಾವಣೆ ಕೇವಲ ಅಧಿಕಾರಿಗಳಿಂದ ಆಗುವುದಿಲ್ಲ. ಜನರ ಸಹಕಾರವೂ ಮುಖ್ಯ ಎಂಬುದನ್ನಿಲ್ಲಿ ಹೇಳಿದ್ದೇನೆ. ಇನ್ನೊಂದು ವಿಷಯವೆಂದರೆ, ಸಿನಿಮಾ ಮುಗಿದ ಬಳಿಕ ಕಥೆ, ಒಂದು ಫೈಟ್‌ ಅನ್ನು ಡಿಮ್ಯಾಂಡ್‌ ಮಾಡಿತ್ತು. ಹಾಗಾಗಿ ಒಂದು ಸಾಹಸವನ್ನೂ ನಾನೇ ಸಂಯೋಜಿಸಿದ್ದೇನೆ. ಇಲ್ಲಿ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ನಟನೆ, ನಿರ್ಮಾಣ ಎಲ್ಲದರ ಜತೆಗೆ ಸಾಹಸ ಕೂಡ ಮಾಡಿದ್ದೇನೆ. ಆಸಕ್ತಿ, ಶ್ರದ್ಧೆ ಇದ್ದರೆ ಏನು ಬೇಕಾದರೂ ಮಾಡಬಹುದು’ ಎನ್ನುತ್ತಾರೆ ಶಿವಕುಮಾರ್‌.

ಹೊಸಬರ ಹೊಸತನದ ಪ್ರಯತ್ನ: “ಇನ್ನು, ನನ್ನ ಮಗ ಭರತ್‌ ಭದ್ರಯ್ಯ ಚೆನ್ನಾಗಿ ನಟನೆ ಮಾಡಿದ್ದಾನೆ. ಫೈಟ್‌ ವಿಷಯದಲ್ಲಂತೂ ಯಾವುದೇ ಡೂಪ್‌ ಇಲ್ಲದೆ ರಿಸ್ಕೀ ಸ್ಟಂಟ್‌ ಮಾಡಿದ್ದಾನೆ. ಇಡೀ ಸಿನಿಮಾ ಕಥೆಯನ್ನು ನಾನೇ ಬರೆದಿರುವುದರಿಂದ ನನಗೆ ಕೆಲವು ಕಡೆ ಬದಲಾವಣೆ ಬೇಕು ಅಂತ ಅನಿಸಿದ್ದು ನಿಜ. ಆಗ, ಎರಡು ಸೀನ್‌ ಕೈ ಬಿಟ್ಟಿದ್ದನ್ನು ಪುನಃ ಸೇರಿಸಿಕೊಂಡೆ.

ಇಡೀ ಸಿನಿಮಾ ಅವಧಿ 2.05 ಗಂಟೆಯಲ್ಲಿ ಮೂಡಿಬಂದಿದೆ. ನೋಡುಗರಿಗೆ ಎಲ್ಲೂ ಕೂಡ ಬೋರ್‌ ಎನಿಸದಂತೆ ಕೆಲಸ ಮಾಡಿದ್ದೇವೆ. ಇಲ್ಲಿ ಎಲ್ಲರೂ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಜನರು ಕೊಡುವ ಫ‌ಲಿತಾಂಶ ಅಂತಿಮ ಎನ್ನುವ ಶಿವಕುಮಾರ್‌, ಇಲ್ಲಿ ತಮ್ಮ ಪುತ್ರ ಭರತ್‌ ಅವರು ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಅಮೂಲ್ಯರಾಜ್‌ ಎಂಬ ಹೊಸ ಹುಡುಗಿ ನಾಯಕಿಯಾಗಿದ್ದಾರೆ.

ಇಡೀ ಚಿತ್ರದ ತೂಕ ಹೆಚ್ಚಿಸಿರುವುದು ಬಾಬು ಹಿರಣ್ಣಯ್ಯ ಅವರು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಚಿತ್ರ ಮಾಡಿವೆ. ಸಿನಿಮಾ ಗೊತ್ತಿಲ್ಲದ ಮಂದಿ ಸೇರಿಕೊಂಡು ಹೊಸ ಬಗೆಯ ಚಿತ್ರ ಮಾಡಿರುವುದು ನನ್ನ ಹೆಮ್ಮೆ. ಚಿತ್ರವನ್ನು ಎಂಟು ರಾಜ್ಯಗಳಲ್ಲಿ ಚಿತ್ರೀಕರಿಸಿರುವುದು ಚಿತ್ರದ ಇನ್ನೊಂದು ವಿಶೇಷತೆಯಂತೆ. ಚಿತ್ರಕ್ಕೆ ನವೀನ್‌ ಸಂಗೀತವಿದೆ. ಹರೀಶ್‌ ಛಾಯಾಗ್ರಹಣವಿದೆ. ನಾಗೇಂದ್ರಪ್ರಸಾದ್‌, ಮಂಜು ಕವಿ ಸಾಹಿತ್ಯವಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

“ಚಿತ್ರದಲ್ಲಿ ಮುಖ್ಯವಾಗಿ ಅಧಿಕಾರ ಸಿಕ್ಕಾಗ ಜನಪ್ರತಿನಿಧಿಗಳು ಹೇಗೆಲ್ಲಾ ಜನರನ್ನು ಯಾಮಾರಿಸುತ್ತಾರೆ, ಈಗಿನ ಯೂತ್ಸ್, ನಾಯಕ, ನಾಯಕಿ ಆಗಬೇಕು ಅಂತ ಹೇಗೆಲ್ಲಾ ಹಂಬಲಿಸುತ್ತಾರೆ ಎಂಬಿತ್ಯಾದಿ ವಿಷಯಗಳಿವೆ. ಜಾತಿ ಪಿಡುಗು ತೊಲಗಬೇಕು, ಒಬ್ಬ ವ್ಯಕ್ತಿಯ ಹಿಂದೆ ಸಮಾಜ ಹೋಗಬಾರದು. ಇಂತಹ ಪರಿಕಲ್ಪನೆಗಳು ಚಿತ್ರದ ಹೈಲೈಟ್‌ ಆಗಿವೆ. ಇದೊಂದು ಹೊಸಬರೇ ಸೇರಿ ಮಾಡಿರುವ ಚಿತ್ರ.

ಇಲ್ಲಿ ಸ್ಟಾರ್‌ಗಳಿಲ್ಲದಿದ್ದರೂ, ನಮ್ಮ ಕಥೆಯೇ ಸ್ಟಾರ್‌. ಹಾಗಾಗಿ, ಎಲ್ಲಾ ವರ್ಗ ಕೂಡ ಕುಳಿತು ನೋಡಬಹುದಾದ, ನೋಡಿ, ತಿಳಿದುಕೊಳ್ಳಬಹುದಾದ ವಿಷಯಗಳು ಇಲ್ಲಿ ಹೇರಳವಾಗಿವೆ.  ನಾಯಕ ಭರತ್‌ ಭದ್ರಯ್ಯ ಮತ್ತು ನಾಯಕಿ ಅಮೂಲ್ಯ ರಾಜ್‌ ಅವರಿಗೆ ಇದು ಮೊದಲ ಚಿತ್ರವಾದರೂ, ಅನುಭವ ನಟ,ನಟಿಯರಂತೆ ಕ್ಯಾಮೆರಾ ಮುಂದೆ ಕೆಲಸ ಮಾಡಿದ್ದಾರೆ. ಹೊಸಬರೇ ತುಂಬಿದ್ದರೂ, ಚಿತ್ರದಲ್ಲಿ ಹೊಸತನವಿದೆ’ ಎಂಬುದು ನಿರ್ದೇಶಕ ಶಿವಕುಮಾರ್‌ ಭದ್ರಯ್ಯ ಅವರ ಮಾತು.

ಮಗನ ಪ್ರತಿಭೆಗೆ ಮಾಡಿದ ಚಿತ್ರ!: ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಮಕ್ಕಳ ಮೇಲಿನ ಪ್ರೀತಿಯಿಂದ ಅದೆಷ್ಟೋ ಮಂದಿ ಸಿನಿಮಾಗೆ ಹಣ ಹಾಕುವ ಮೂಲಕ ತಮ್ಮ ಪ್ರೀತಿಯ ಮಗನನ್ನು ಹೀರೋ ಮಾಡಿದ ಉದಾಹರಣೆಗಳಿವೆ. ಆ ಸಾಲಿಗೆ “ಮುಖ್ಯಮಂತ್ರಿ ಕಳೆದೋದ್ನಪೋ’ ಚಿತ್ರವೂ ಹೊಸ ಸೇರ್ಪಡೆ ಎನ್ನಬಹುದೇನೋ? ಹೌದು, ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿರುವ ಶಿವಕುಮಾರ್‌ ಭದ್ರಯ್ಯ,

ಈ ಚಿತ್ರದ ಮೂಲಕ ತಮ್ಮ ಪುತ್ರ ಭರತ್‌ ಭದ್ರಯ್ಯ ಅವರನ್ನು ಹೀರೋ ಮಾಡಿದ್ದಾರೆ ಎಂಬುದೇ ವಿಶೇಷ. ಮಗ ಎಂಬ ಕಾರಣಕ್ಕೆ ಅವರಿಲ್ಲಿ ನಿರ್ಮಾಣ ಮಾಡಿಲ್ಲ. ಮಗನಲ್ಲಿ ಒಳ್ಳೆಯ ಪ್ರತಿಭೆ ಇದೆ ಎಂಬುದನ್ನು ಅವರು ಮನಗಂಡ ಬಳಿಕ, ಒಳ್ಳೆಯ ಚಿತ್ರದ ಮೂಲಕವೇ ತನ್ನ ಮಗನನ್ನು ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡಿಸಬೇಕು ಎಂಬ ಆಶಯದಿಂದ ಭರತ್‌ ಭದ್ರಯ್ಯ ಅವರನ್ನು ಪಕ್ಕಾ ತಯಾರಿ ಮಾಡಿಸಿ, ನಾಯಕರನ್ನಾಗಿಸಿದ್ದಾರೆ.

ಈಗಾಗಲೇ ಹೇಳುವಂತೆ ಇದು ರಾಜಕೀಯ ವಿಡಂಬನೆ ಕುರಿತು ಮೂಡಿಬಂದಿರುವ ಚಿತ್ರ.  ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟತೆ ಮತ್ತು ಮುಗ್ಧತೆಯನ್ನು ಇಲ್ಲಿ ತೋರಿಸಲಾಗಿದೆ. ಜನರು ಎಲ್ಲಿಯವರೆಗೆ ಮೋಸ ಹೋಗುತ್ತಾರೋ, ಅಲ್ಲಿಯವರೆಗೂ ಕೆಟ್ಟ ರಾಜಕಾರಣಿಗಳು ಅವರನ್ನು ಮೋಸ ಮಾಡುತ್ತಲೇ ಇರುತ್ತಾರೆ ಎಂಬ ಅಂಶ ಈ ಚಿತ್ರದಲ್ಲಿದೆಯಂತೆ. ಸಾಮಾನ್ಯವಾಗಿ, ಚುನಾವಣೆ ಬಂದಾಗ, ಯಾರೂ ಹೆಚ್ಚು ಗಮನ ಹರಿಸುವುದಿಲ್ಲ.

ಅಧಿಕಾರಿಗಳು ಸಾಕಷ್ಟು ಎಚ್ಚರವಹಿಸಿದರೂ, ಚುನಾವಣೆಗಳಲ್ಲಿ ಒಂದಷ್ಟು ಎಡವಟ್ಟುಗಳಾಗುತ್ತವೆ. ಆದರೆ, ಜನರು ಮಾತ್ರ ತಮಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ. ಚುನಾವಣೆ ಅಂದಾಕ್ಷಣ, ಅದು ಕೇವಲ ಅಧಿಕಾರಿಗಳಿಗಷ್ಟೇ ಸೀಮಿತ ಅಂತ ತಿಳಿದುಕೊಳ್ಳದೆ, ಪ್ರತಿಯೊಬ್ಬರೂ ತಮ್ಮ ದೇಶದ, ರಾಜ್ಯದ, ಗ್ರಾಮದ ಮತ್ತು ಮುಂದಿನ ನಮ್ಮ ಪೀಳಿಗೆಯ ಭವಿಷ್ಯ ಇದೆ

ಅಂದುಕೊಂಡು, ಎಲ್ಲರೂ ಚುನಾವಣೆ ಬಗ್ಗೆ ಕಾಳಜಿ ವಹಿಸಬೇಕು, ಅರ್ಹರಿಗೇ ಮತ ಹಾಕಬೇಕು ಎಂಬದನ್ನೂ ಇಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರಂತೆ ನಿರ್ಮಾಪಕ ಕಮ್‌ ನಿರ್ದೇಶಕ ಶಿವಕುಮಾರ್‌ ಭದ್ರಯ್ಯ.  ಚಿತ್ರದ ನಾಯಕ ಭರತ್‌ ಭದ್ರಯ್ಯ ಅವರಿಗೆ ಇದು ಮೊದಲ ಚಿತ್ರವಾದರೂ, ಅನುಭವಿ ನಟರಂತೆಯೇ ಕೆಲಸ ಮಾಡಿದ್ದಾರೆ ಎಂಬುದು ಶಿವಕುಮಾರ್‌ ಮಾತು.

ಆರಂಭದಲ್ಲಿ ಚಿತ್ರಕ್ಕೆ ಫೈಟ್‌ ಇರಲಿಲ್ಲವಂತೆ. ಆದರೆ, ಎಲ್ಲವೂ ಮುಗಿಸಿದ ಬಳಿಕ ಒಂದು ಫೈಟ್‌ ಅಗತ್ಯವಾಗಿದೆ ಎಂದೆನಿಸಿ, ಒಂದು ಭರ್ಜರಿ ಸಾಹಸವನ್ನೂ ಇಟ್ಟಿದ್ದಾರೆ ನಿರ್ದೇಶಕರು. ವಿಶೇಷವೆಂದರೆ, ಅವರೇ ಆ ಸಾಹಸವನ್ನು ಸಂಯೋಜನೆ ಮಾಡಿದ್ದಾರಂತೆ. ಚಿತ್ರದ ಕಥೆಯನ್ನು ಅವರೇ ಆಸಕ್ತಿ ವಹಿಸಿ ಬರೆದಿರುವುದರಿಂದ ಕೆಲವು ಕಡೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಸೇರಿಸಿ ಮಾಡಿದ್ದಾರೆ. ಆರಂಭದಲ್ಲಿ ಬಿಟ್ಟ ಕೆಲವು ಸೀನ್‌ಗಳನ್ನು ಸಹ ಇಲ್ಲಿ ಸೇರ್ಪಡೆ ಮಾಡಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next