Advertisement

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ  

02:39 PM May 06, 2021 | Team Udayavani |

ಭೋಪಾಲ್ : ಆಸ್ಪತ್ರೆಗಳಿಗೆ ತೆರಳಲು ಭಯಪಟ್ಟು ಹೊಲಗಳಲ್ಲಿ ಮರಗಳ ಕೆಳಗೆ ಹಳ್ಳಿಗಳ ವೈದ್ಯರಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸನ್ನಿವೇಶ ಮಧ್ಯಪ್ರದೇಶದಲ್ಲಿ ನಡೆದಿದೆ.

Advertisement

ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯ ಹಳ್ಳಿಗಳಲ್ಲಿ ರಸ್ತೆಯ ಪಕ್ಕದಲ್ಲಿಯೇ ಕೋವಿಡ್ ಸೋಂಕಿತರು ಮಲಗಿದ್ದಾರೆ, ಮರಗಳ ರೆಂಬೆಗೆ ಡ್ರಿಪ್ ಬಾಟಲಿಗಳನ್ನು ತೂಗಿಹಾಕಿ ಸ್ಥಳೀಯ ವೈದ್ಯರು ( ಪರವಾನಗಿ ಪಡೆಯದ ವೈದ್ಯರು) ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಹೋಗಲು ಭಯ :

ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜ್ವರ ಹಾಗೂ ನೆಗಡಿ ವ್ಯಾಪಕವಾಗಿ ಹರಡಿದೆ. ಆದರೆ, ಜನರು ಮಾತ್ರ ಸರ್ಕಾರಿ ಆಸ್ಪತ್ರೆಗೆ ತೆರಳಲು ಹಿಂಜರಿಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ, ಅದಕ್ಕಾಗಿ ನಾವು ಹೋಗುವುದಿಲ್ಲ. ಸ್ಥಳೀಯ ವೈದ್ಯರಿಂದಲೇ ಚಿಕಿತ್ಸೆ ಪಡೆಯುತ್ತೇವೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೆದ್ದಾರಿಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಕಿತ್ತಳೆ ತೋಪಿನಲ್ಲಿ ಕಾರ್ಡ್‌ಬೋರ್ಡ್ ಶೀಟ್‌ಗಳನ್ನು ಹಾಕಿ ರೋಗಿಗಳು ಮಲಗಿದ್ದಾರೆ. ಸುಮಾರು 10 ಹಳ್ಳಿಗಳಿಂದ ಜನರು ಚಿಕಿತ್ಸೆಗೆಂದು ಇಲ್ಲಿಗೆ ಧಾವಿಸುತ್ತಿದ್ದಾರೆ. ಹೀಗೆ ಬಯಲು ಪ್ರದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಬ್ಲಾಕ್ ಆರೋಗ್ಯಾಧಿಕಾರಿ ಮನಿಶ್ ಕುರ್ಲಿ, ಸ್ಥಳೀಯ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೂ ನೆಗಡಿ-ಕೆಮ್ಮು ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ವೈದ್ಯರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದ್ದಾರೆ.

ಮುಖ್ಯ ಆರೋಗ್ಯಾಧಿಕಾರಿ ಸಮಾಂದರ್ ಸಿಂಗ್ ಮಾಲ್ವಿಯಾ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಆದರೆ, ಈ ವೇಳೆ ಅಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next