Advertisement

ಸುಷ್ಮಾ ಸ್ವರಾಜ್ ವಿದೇಶಾಂಗ ಇಲಾಖೆಯ ಮಾನವೀಯ ಮುಖ

09:21 AM Aug 08, 2019 | Hari Prasad |

ವಿದೇಶಾಂಗ ಇಲಾಖೆ ಎಂದರೆ ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯ ವೃದ್ಧಿ ಮಾತ್ರವೇ ಅಲ್ಲ, ಅದಕ್ಕೊಂದು ಮಾನವೀಯ ಮುಖ, ಈ ಮೂಲಕ ಅನಿವಾಸಿ ಭಾರತೀಯರಿಗೆ ಸಮಸ್ಯೆ ಬಂದಾಗಲೆಲ್ಲ ನೆರವಿನ ಹಸ್ತ ಚಾಚಿ, ಹೆತ್ತಮ್ಮನಂತೆ ಕಾಳಜಿ ವಹಿಸುತ್ತಿದ್ದವರು ಸುಷ್ಮಾ ಸ್ವರಾಜ್‌ ಅವರು. ಸುಷ್ಮಾ ಸ್ವರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿಎರಡನೇ ಬಾರಿಗೆ ವಿದೇಶಾಂಗ ಸಚಿವೆ ಆಗಲ್ಲ ಎಂದಾಗಲೆಲ್ಲ ಬೇಸರಿಸಿದವರು ಹಲವು ಮಂದಿ. ಅವರು ವಿದೇಶಾಂಗ ಸಚಿವೆ ಹುದ್ದೆ ತೊರೆದಿದ್ದರೂ, ನೆರವು ನೀಡಿಎಂದು ಹಲವಾರು ಜನ ಅವರಲ್ಲಿ ಕೇಳಿದ್ದುಂಟು. ಈ ಬಗ್ಗೆ ಟ್ವೀಟ್‌ಗಳು ದಂಡಿಯಾಗಿ ಬರುತ್ತಿದ್ದವು. ಇದ್ಯಾವುದಕ್ಕೂ ಸುಷ್ಮಾ ಇಲ್ಲ ಎನ್ನುತ್ತಿರಲಿಲ್ಲ. ತಮ್ಮ ಹಳೆಯ ಸಂಪರ್ಕ ಬಳಸಿ ಕೆಲಸ ಮಾಡಿಕೊಡುತ್ತಿದ್ದರು.

Advertisement

ಟ್ವೀಟ್‌ ಗಳಿಗೆ ತ್ವರಿತ ಸ್ಪಂದನೆ
ಯಾರೇ ಸಹಾಯ ಕೇಳಿ ಟ್ವೀಟ್ ಮಾಡಲಿ ಅದಕ್ಕೆ ಕೂಡಲೇ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದವರು ಸುಷ್ಮಾ. ಇವರು ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದುದರಿಂದ ಪ್ರಧಾನಿ ಮೋದಿ ಸಂಪುಟದ ಇತರ ಸಚಿವರಿಗೂ ಅವರು ಒಂದು ರೀತಿಯಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟರು. ಇದರಿಂದಾಗಿ ಇತರ ಸಚಿವರೂ ತಮ್ಮ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಸ್ವೀಕರಿಸುವ, ಪರಿಹಾರವನ್ನು ಒದಗಿಸುವ ಪ್ರಯತ್ನವನ್ನು ಮಾಡುತ್ತಿದ್ದುದಂತೂ ಸತ್ಯ.

ಅಷ್ಟೇ ಅಲ್ಲ, ಟ್ವೀಟರ್ ಕೆಲವು ನೆಟ್ಟಿಗರು ಕೇಳುತ್ತಿದ್ದ ಮೊನಚಾದ ಪ್ರಶ್ನೆಗೆ ಅಷ್ಟೇ ತೀಕ್ಷ್ಣ ಉತ್ತರವನ್ನೂ ಕೊಟ್ಟು ಮನ ಗೆದ್ದವರು ಸುಷ್ಮಾ. ಓರ್ವ ವ್ಯಕ್ತಿಯಂತೂ ನೆರವು ಕೇಳುವ ಭರದಲ್ಲಿ ನಮ್ಮ ಮನೆಯಲ್ಲಿ ಫ್ರಿಡ್ಜ್ ಸರಿ ಇಲ್ಲ ಎಂದು ಬಿಟ್ಟ. ಸುಷ್ಮಾ ಬಿಡುತ್ತಾರೆಯೇ? ಕೂಡಲೇ ಪ್ರತಿಕ್ರಿಯಿಸಿ, ನಾನು ಜನರ ಸಮಸ್ಯೆ ಪರಿಹರಿಸುವಲ್ಲೇ ನಿರತಳಾಗಿದ್ದೇನೆ. ಫ್ರಿಡ್ಜ್ ‌ರಿಪೇರಿ ಮಾಡುವ ಅವಕಾಶವಿಲ್ಲ ಎಂದುಬಿಟ್ಟರು.

ಸರಕಾರ ಅತ್ಯಂತ ಪ್ರತಿಕ್ರಿಯಾತ್ಮಕವಾಗಿರಬೇಕು. ಜನರ ಪ್ರತಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸುಷ್ಮಾ ಹೇಳುತ್ತಿದ್ದರು. ಇದಕ್ಕಾಗಿ ಅವರು ವಿದೇಶಾಂಗ ಇಲಾಖೆಯ ಪ್ರತಿಯೊಬ್ಬರನ್ನೂ ಕೈ ಅಳತೆ ದೂರದಲ್ಲಿ ಇಟ್ಟುಕೊಂಡಿದ್ದರು. ಇದೇ ಕಾರಣಕ್ಕೆ ಎಲ್ಲ ರಾಜಕೀಯ ಪಕ್ಷಗಳ ಮೆಚ್ಚುಗೆಗೆ ಪಾತ್ರರಾದರು. ಆರಂಭದಲ್ಲಿ ಇಷ್ಟು ದೊಡ್ಡ ಖಾತೆಯನ್ನು ಹೇಗೆ ನಿಭಾಯಿಸುತ್ತಾರೋ ಎಂದಿತ್ತು.

ಆದರೆ, ಘಟಾನುಘಟಿ ರಾಜಕಾರಣಿಗಳನ್ನು ಹುಬ್ಬೇರಿಸುವಂತೆ ವಿದೇಶಾಂಗ ಖಾತೆಯನ್ನು ಕೌಶಲಪೂರ್ಣವಾಗಿ ನಿಭಾಯಿಸಿದ್ದು ಸುಷ್ಮಾ ಹೆಚ್ಚುಗಾರಿಕೆ. 2015ರಲ್ಲಿ ಪ್ರಧಾನಿ ಮೋದಿಯವರ ಪಾಕಿಸ್ಥಾನ ಬೇಟಿ, 2018ರ ಚೀನಾ ಭೇಟಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಕುಲಭೂಷಣ್ ಪ್ರಕರಣವನ್ನೂಅವರು ನಿಭಾಯಿಸಿದ್ದರು. ವಿಶ್ವಸಂಸ್ಥೆಯಲ್ಲಿ ಪಾಕ್ ಮುಟ್ಟಿ ನೋಡುವಂತೆ ಭಾಷಣವನ್ನೂ ಮಾಡಿದ್ದರು.

Advertisement

ಆಪರೇಷನ್ ಹಿಂದಿನ ಅಮ್ಮ
ಯುದ್ಧ ಸಂತ್ರಸ್ತ ಪ್ರದೇಶಗಳಲ್ಲಿ ಭಾರತೀಯರು ಸಿಕ್ಕಾಗ ನೆರವಿಗೆ ಬಂದಿದ್ದು ಸುಷ್ಮಾ. ಇದಕ್ಕಾಗಿ ಇಡೀ ಸರಕಾರದ ಹಿರಿಯ ಅಧಿಕಾರಿಗಳನ್ನು ಸಮರ್ಥವಾಗಿ ದುಡಿಸಿಕೊಂಡರು. 2015ರಲ್ಲಿ ಮೊದಲ ಬಾರಿಗೆ ಯೆಮೆನ್‌ನಲ್ಲಿ 4 ಸಾವಿರ ಭಾರತೀಯರು ಸಿಲುಕಿದ್ದಾಗ ಯುದ್ಧ ಹಡಗುಗಳನ್ನು ಕಳಿಸಿ 11 ದಿನ ಕಾರ್ಯಾಚರಣೆ ನಡೆಸಲಾತು. ಏಡೆನ್ ಬಂದರಿನಲ್ಲಿ ಹಡಗು ನಿಲ್ಲಿಸಿ, ಈ ಕಾರ್ಯಾಚರಣೆ ನಡೆಸಿತ್ತು.

ಅದರ ನಂತರ ವಿಶ್ವಾದ್ಯಂತ ಹಲವು ಅನಿಶ್ಚಿತತೆಗಳಾದಾಗ ಸುಷ್ಮಾ ಭಾರತೀಯರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಭಾರೀಯರು ವಿದೇಶದಲ್ಲಿ ಕಾನೂನಾತ್ಮಕ ಸಮಸ್ಯೆಗಳಿಂದ ಸಿಲುಕಿದ್ದಾಗ, ಪಾಸ್ ಪೋರ್ಟ್ ಕಳವು ಇತ್ಯಾದಿ ಸಮಸ್ಯೆಯಾದಾಗಲೂ ತ್ವರಿತವಾಗಿ ಸ್ಪಂದಿಸಿದರು.

ಕೆಲಸ ಮಾಡಿಕೊಡಲು ಅರ್ಜಿಯೇ ಬೇಡ!
ಅರ್ಜಿ ಕೊಟ್ಟು ವರ್ಷವಾದರೂ ಸರಕಾರದ ಕೆಲಸವಾಗಲ್ಲ ಎಂಬಂತಿರುವ ಸ್ಥಿತಿಯಲ್ಲಿ ಒಂದು ಟ್ವೀಟ್ ಮಾಡಿದರೆ ಸಾಕು ಕೆಲಸ ಪಕ್ಕಾ ಎಂಬ ಸ್ಥಿತಿಗೆ ಬಂದಿದ್ದು ಸುಷ್ಮಾ ಅವರಿಂದಾಗಿ. ವಿದೇಶಾಂಗ ಇಲಾಖೆ ಕುರಿತಾಗಿ ಯಾರೇ ಟ್ವೀಟ್ ಮಾಡಿದರೂ ಅದು ನೆರವೇರುತ್ತಿತ್ತು. ಭಾರತೀಯರೇಕೆ ವಿದೇಶೀಯರಿಗೂ ಈ ನೆರವು ಇತ್ತು. ಹೌತಿಯ ಬಂಡುಕೋರರಿಂದ ವಿವಿಧ ದೇಶಗಳ ಪ್ರಜೆಗಳನ್ನು ಆ ದೇಶಗಳ ಟ್ವೀಟ್ ಮನವಿ ಮೇರೆಗೆಅವರು ಪಾರು ಮಾಡಿದ್ದರು.

ಪಾಕಿಸ್ಥಾನೀಯರು ಭಾರತದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಮೊದಲು ಸುಷ್ಮಾಗೆ ಟ್ವೀಟ್ ಮಾಡುವಂತಾಯ್ತು. ಭಾರತ – ಪಾಕ್ ಸಂಬಂಧ ಹದಗೆಟ್ಟಿದ್ದರೂ ಅಲ್ಲಿನವರು ಭಾರತಕ್ಕೆ ಚಿಕಿತ್ಸೆಗೆ ಆಗಮಿುಸುವುದಾದರೆ ನಮ್ಮ ಮಾನವೀಯ ಕಳಕಳಿ ಇದ್ದೇ ಇದೆಎಂಬುದನ್ನೂ ಸುಷ್ಮಾ ಅವರು ಸಾರಿದರು. ಇದಕ್ಕಾಗಿ ಹಲವಾರು ಸಂದರ್ಭಗಳಲ್ಲಿ ಅವರು ಆಸ್ಪತ್ರೆ ವ್ಯವಸ್ಥೆಯನ್ನೂ ಮಾಡುವಲ್ಲಿವರೆಗೆ ಮುಂದುವರಿದಿದೆ. ಈ ಕಾರಣಕ್ಕಾಗಿಯೇ ಅವರು ಎಲ್ಲರ ಮಾನವೀಯ ಮುಖದ ಸಚಿವೆಯಾಗಿ ಮಿಂಚಿದರು.

– ಈಶ

Advertisement

Udayavani is now on Telegram. Click here to join our channel and stay updated with the latest news.

Next