Advertisement

ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಕ್ರಮವಹಿಸಿ: ಜಿಲ್ಲಾಧಿಕಾರಿ

03:30 PM May 03, 2019 | pallavi |

ಮೈಸೂರು: ಜಿಲ್ಲೆಯಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಲು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು.

Advertisement

ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ನಡೆಸಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಾಧಿಕಾರ ಸಹಕಾರ: ಬಾಲ್ಯ ವಿವಾಹ ಸಮಾಜದ ಅಭಿವೃದ್ಧಿಯನ್ನು ಕುಂದಿಸುತ್ತದೆ. ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿ, ಬಾಲ್ಯ ವಿವಾಹ ತಡೆಗಟ್ಟಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಿ. ಪ್ರಾಧಿಕಾರದಲ್ಲಿರುವ ಸಂಪನ್ಮೂಲ ವ್ಯಕ್ತಿಗಳು ಸಹಾ ಭಾಗವಹಿಸಿ ಸಾರ್ವಜನಿಕರಿಗೆ ಬಾಲ್ಯವಿವಾಹದ ಕಾನೂನು ಗಳ ಬಗ್ಗೆ ತಿಳಿಸಿಕೊಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ. ದೇವಮಾನೆ ಹೇಳಿದರು.

ಮೈಸೂರಿನ ಯಾವ್ಯಾವ ಭಾಗದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ ಎಂಬುದನ್ನು ಪಟ್ಟಿ ಮಾಡಿಕೊಂಡು, ಅಂತಹ ಭಾಗಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸಬೇಕು. ವಿಶೇಷವಾಗಿ ಗಿರಿಜನ ಹಾಡಿಗಳಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಅರಿವು ಕಾರ್ಯಕ್ರಮಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜೊತೆ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ಸಹಾ ಕಳುಹಿಸುತ್ತೇವೆ ಎಂದರು.

ಶಿಕ್ಷಕರಿಗೆ ಅರಿವು: ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಜಿ. ಮಾತನಾಡಿ, ಅನೇಕ ಭಾಗಗಳಲ್ಲಿ ಹೆಣ್ಣು ಮಕ್ಕಳನ್ನು ಆರ್ಧದಲ್ಲೇ ಶಾಲೆ ಬಿಡಿಸಿ ಬಾಲ್ಯವಿವಾಹ ಮಾಡಿ ಅವರ ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಶಾಲಾ ಮಕ್ಕಳಲ್ಲಿ ಬಾಲ್ಯವಿವಾಹದ ಅರಿವು ಮೂಡಿಸಲು ಶಿಕ್ಷಕರಿಗೆ ತಿಳಿಸಬೇಕು ಹಾಗೂ ಪ್ರತಿಯೊಂದು ಶಾಲೆ ಗಳಲ್ಲೂ ಮಕ್ಕಳ ಸಹಾಯವಾಣಿ ಸಂಖ್ಯೆ-1098 ಅಳವಡಿಸಿರಬೇಕು ಎಂದು ಹೇಳಿದರು.

Advertisement

ಇಂದಿನ ಮಕ್ಕಳು 8ನೇ ತರಗತಿಯಲ್ಲೇ ಪ್ರೀತಿ-ಪ್ರೇಮದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಶಿಕ್ಷಕರು ಕ್ರಮ ಕೈಗೊಳ್ಳಬೇಕು. ಅವರಿಗೆ ಪಠ್ಯ ಚಟುವಟಿಕೆಯ ಜೊತೆಗೆ ಮುಂದಿನ ಜೀವನ ಶೈಲಿಯ ಬಗ್ಗೆ ಕೂಡ ಪಾಠ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಕೌಟುಂಬಿಕ ಕಲಹದಿಂದ ಮಹಿಳೆಯರನ್ನು ಕಾಪಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಧ್ಯವಿದೆ. ಸಮಸ್ಯೆ ಹೇಳಿ ಕೊಂಡು ಬರುವ ಮಹಿಳೆಯರಿಗೆ ನ್ಯಾಯ ಒದ ಗಿಸುವ ಕಾರ್ಯ ಮಾಡಲು ಸದಾ ಸಿದ್ಧರಿರಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್‌ ಆರ್‌. ಹಾಗೂ ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next