ಮುಂಬೈ: ಹಣ ವರ್ಗಾವಣೆಯಲ್ಲಿ ಶಾಮೀಲಾಗಿರುವುದಾಗಿ ಆರೋಪಿಸಿ 26 ವರ್ಷದ ಯುವತಿಗೆ ಡಿಜಿಟಲ್ ಅರೆಸ್ಟ್( Digital Arrest) ಮಾಡಿರುವುದಾಗಿ ವಿಡಿಯೋ ಕರೆ ಮೂಲಕ ಬೆದರಿಸಿ, ದೇಹ ಪರಿಶೀಲನೆ ನಡೆಸಬೇಕೆಂದು ತಿಳಿಸಿ 1.7 ಲಕ್ಷ ರೂಪಾಯಿಯನ್ನು ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಯುವತಿ ನೀಡಿದ ದೂರಿನ ಮೇರೆಗೆ ದಹಿಸರ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಅಂಧೇರಿ ಪೊಲೀಸರಿಗೆ ವರ್ಗಾಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊರಿವಲಿ ನಿವಾಸಿಯಾಗಿರುವ ಯುವತಿ ಫಾರ್ಮಾಸ್ಯೂಟಿಕಲ್ ಕಂಪನಿಯ ಉದ್ಯೋಗಿಯಾಗಿದ್ದು, ವಂಚಕರು ನವೆಂಬರ್ 19ರಂದು ತಾವು ದೆಹಲಿ ಪೊಲೀಸ್ ಅಧಿಕಾರಿಗಳೆಂದು ಹೇಳಿ ಮೊಬೈಲ್ ಕರೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಜೈಲಿನಲ್ಲಿರುವ ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್ ಅವರ ಹಣಕಾಸು ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಯುವತಿಯ ಹೆಸರು ಕೇಳಿಬಂದಿರುವುದಾಗಿ ತಿಳಿಸಿ ಬೆದರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿಗೆ ಬಲವಂತದಿಂದ ಹೋಟೆಲ್ ರೂಂ ಬುಕ್ ಮಾಡಲು ಹೇಳಿ, ವಿಡಿಯೋ ಕಾಲ್ ಸಂಭಾಷಣೆಯ ನೆಪದಲ್ಲಿ ಆಕೆಯನ್ನು ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ತಿಳಿಸಿ, ವಿವಸ್ತ್ರಗೊಳಿಸಿ 1.7 ಲಕ್ಷ ರೂಪಾಯಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.