Advertisement
ರಾಮ-ಸೀತೆಯ ಜೋಡಿ ನಮಗೆಲ್ಲರಿಗೂ ಆದರ್ಶ. ಆದರೆ, ಕಲಿಯುಗದಲ್ಲಿ ಸೀತೆಗೆ ಯಾವಾಗಲೂ ರಾಮನೇ ಸಿಗುವುದಿಲ್ಲ ಹಾಗೆಯೇ ರಾಮನಿಗೆ ಸೀತೆ ಕೂಡ. ಈಗಿನ ದಿನಗಳಲ್ಲಿ ಮದುವೆಗೂ ಮುಂಚೆಯೇ ಮತ್ತಿನ್ಯಾರನ್ನೋ ಇಷ್ಟ ಪಡುವುದು, ನಂತರ ತಂದೆ-ತಾಯಿಯ ಒತ್ತಡಕ್ಕೆ ಬೇರೆಯವರನ್ನು ಮದುವೆಯಾಗುವುದು ಸಾಮಾನ್ಯವಾಗಿ ಹೋಗಿದೆ. ಬದುಕು ಆಧುನಿಕವಾದಷ್ಟೂ ಸಂಸಾರ ಪ್ರಾಯೋಗಿಕವಾಗತೊಡಗಿದೆ. ಒಂದೊಂದು ಮನೆಯಲ್ಲೂ, ಒಂದೊಂದು ಸಂಸಾರದಲ್ಲೂ, ಒಂದೊಂದು ಜೀವದಲ್ಲೂ ಒಂದೊಂದು ಕಥೆ. ಟೀವಿಯಲ್ಲಿ ಬರುವ ಎಲ್ಲಾ ಮೆಗಾ ಧಾರಾವಾಹಿಗಳಲ್ಲಿರುವುದು ಇಂಥವೇ ಮನೆಮನೆಗಳ ಮನಸುಗಳ ಕಥೆಗಳು. ಆದರೆ, ಧಾರಾವಾಹಿಗೂ ನಿಜ ಜೀವನಕ್ಕೂ ಬಹಳ ಅಂತರವಿದೆ. ಬದುಕು ಯಾರೋ ನಿರ್ದೇಶಿಸಿ ಮತ್ತಿನ್ಯಾರೋ ನಟಿಸಿದಂತೆ ನಡೆಯುವುದಿಲ್ಲ. ಅದನ್ನು ನಾವೇ ನಮ್ಮ ಕೈಯಾರೆ ರೂಪಿಸಿಕೊಳ್ಳಬೇಕು. ಮುನ್ನೆಡೆಸುವಾಗ ತೆಗೆದುಕೊಂಡ ನಿರ್ಧಾರಗಳು ದೃಢವಾಗಿರಬೇಕು. ಯಾವುದೋ, ಯಾರದೋ ಒತ್ತಡಕ್ಕೆ ಬೀಳದೆ ಮುಂದಿನ ದಿನಗಳ ದಾರಿಯ ಖಚಿತಪಡಿಸಿಕೊಂಡು ಸಾಗಬೇಕು.
Related Articles
Advertisement
ಪ್ರೀತಿ, ಪ್ರೇಮ, ಮದುವೆ ಎಂದು ಹದಿನೈದು-ಇಪ್ಪತ್ತರ ಹೊಸ್ತಿಲಲ್ಲಿ ಮಕ್ಕಳು ಬಡಬಡಿಸಿದರೆ ಹಿಡಿದು ಬುದ್ಧಿ ಹೇಳುವ, ಸರಿ ದಾರಿಗೆ ತರುವ ಆವಶ್ಯಕತೆ ಇರುತ್ತದೆ. ಆದರೆ ಬೆಳೆದು, ವಿದ್ಯಾಭ್ಯಾಸ ಮುಗಿಸಿ, ತನ್ನ ಕಾಲಮೇಲೆ ನಿಂತು ಪ್ರಪಂಚವನ್ನು, ಒಳ್ಳೆಯದು-ಕೆಟ್ಟದ್ದನ್ನು ಅರಿತ ಮಕ್ಕಳನ್ನು ತಮ್ಮ ಪ್ರತಿಷ್ಟೆಗಾಗಿ, ನಾಲ್ಕು ಜನರ ಮುಂದೆ ಅವಮಾನವಾಗುತ್ತದೆ ಎನ್ನುವ ಭಯಕ್ಕಾಗಿ ಮಕ್ಕಳ ಖುಷಿಯನ್ನು ಬಲಿಕೊಡುವುದು ಎಷ್ಟು ಸರಿ? ಇದನ್ನು ತಿಳಿಹೇಳಲು ಪ್ರಯತ್ನಿಸಿದರೂ ತಲೆಮಾರುಗಳಿಂದ ಒಗ್ಗಿಕೊಂಡು ಬಂದ ಮನಃಸ್ಥಿತಿ ಯನ್ನು ಬದಲಾಯಿಸುವುದು ಸುಲಭವಲ್ಲ. ನಿಜ ಹೇಳಬೇಕೆಂದರೆ ಪ್ರೀತಿಸಿದವರನ್ನು ಮದುವೆಯಾಗಿ ಬಾಳಲು ಸಹಕರಿಸಿದರೆ ಶೇ. 5% ರಷ್ಟು ವಿಚ್ಛೇದನಗಳು ಮತ್ತು ಶೇ. 4%ರಷ್ಟು ಆತ್ಮಹತ್ಯೆಗಳು ನಮ್ಮ ಭಾರತದಲ್ಲಿ ಕಡಿಮೆಯಾಗುತ್ತವೆ.
ಒಂದು ವೇಳೆ ಪ್ರೀತಿಸಿದವರನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ ನಿನ್ನೆಗಳ ಮರೆತು ಇಂದಿನೊಂದಿಗೆ ಜೀವಿಸಿ, ನಾಳೆಗಳ ಆಲಂಗಿಸಿ. ಸಿಕ್ಕಿರುವ ಬದುಕನ್ನೆ, ಜೊತೆಯಾದ ಸಂಗಾತಿಯನ್ನೆ ಅರಿತು, ಬೆರೆತು, ಹೊಂದಾಣಿಕೆ ಮಾಡಿಕೊಂಡು ಖುಷಿಯಿಂದ ಬದುಕುವುದ ಕಲಿಯಿರಿ. ಇದರ ಬದಲು ಹೆತ್ತವರು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಮದುವೆಯಾಗದೆ ಉಳಿದು ಬಿಡುವುದೋ ಅಥವಾ ಇಷ್ಟವಿಲ್ಲದ ಸಂಗಾತಿ ಎನ್ನುವ ಕಾರಣಕ್ಕೆ ಮೊಸರಲ್ಲಿ ಕಲ್ಲು ಹುಡುಕುವುದನ್ನು ಶುರು ಮಾಡುವುದೋ ಆದರೆ ಬದುಕು ಬವಣೆಯ ಬಣವೆಯಾಗುತ್ತದೆ. ಚಿಕ್ಕ ಚಿಕ್ಕ ತಪ್ಪುಗಳೂ ಬೃಹದಾಕಾರವಾಗಿ ಬೆಳೆಯುತ್ತವೆ. ಎರಡು ಹೃದಯಗಳ ಸನಿಹದ ಸದ್ದು ಕರ್ಕಶವಾಗಿ ಸಂಬಂಧದ ತಮಟೆ ಹರಿದುಬಿಡುತ್ತದೆ.
ಎಲ್ಲರ ದಾಂಪತ್ಯ ಬಂಡಿಯಲ್ಲಿ ಪ್ರೀತಿ, ವಿರಹ, ಕಷ್ಟ-ಕಾರ್ಪಣ್ಯ, ತ್ಯಾಗ, ಮೋಹ ಎಲ್ಲಕ್ಕೂ ಮಿಗಿಲಾಗಿ ಜೀವನವನ್ನು ಇಡಿಯಾಗಿ ಆಸ್ವಾದಿಸುವ ಸಾರ್ಥಕ ಕ್ಷಣಗಳ ಖಜಾನೆಯಿರುತ್ತದೆ. ಸಾಂಸಾರಿಕ ಜೀವನ ಹಿತವೆನ್ನಿಸಲು ಪ್ರೇಮ ವಿವಾಹವೇ ಆಗಬೇಕೆಂದಿಲ್ಲ. ಮೂರು ಗಂಟು ಬೆಸೆದ ಸಂಬಂಧ ಕೂಡ ಅವರನ್ನು ಅಂತರಂಗದ ಬಂಧುವನ್ನಾಗಿ ಮಾಡಬಲ್ಲದು. ಈ ಸಂಬಂಧದಲ್ಲಿ ಬಂಧಿಯಾದವರು ಆತ್ಮಸಖ-ಆತ್ಮಸಖೀಯರಾಗಿ ಬದುಕನ್ನು ಸೆಳೆಯಬೇಕು-ಸವೆಸಬೇಕು. ಆದರೆ, ಹೆಚ್ಚಿನವರು ಭಾವಿಸುವುದೇ ತಾವು ಶೂರ್ಪನಖೀಯನ್ನೋ/ಕೀಚಕನನ್ನೋ ಮದುವೆಯಾಗಿದ್ದೀವೆಂದು. ಅದಕ್ಕೇ ಒಟ್ಟಿಗೆ ಬಾಳುವ ಮನೆಯೆಂಬ ರಣರಂಗದಲ್ಲಿ ದಿನಬೆಳಗಾದರೆ ಯುದ್ಧದ್ದೇ ಮೇಲುಗೈ.
ಪ್ರೀತಿ ನಿರಂತರ ಪುಟಿಯುವ ಚಿಲುಮೆ. ಅದನ್ನು ಶೇಖರಿಸಿ, ಹಂಚಿ, ಖುಷಿಪಡುವ ವಿಶಾಲ ಮನೋಭಾವ ಬೆಳೆಯುತ್ತಲೇ ಇರಬೇಕು. ಪ್ರೀತಿಗೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ. ಇಷ್ಟಪಟ್ಟವರು ಜೊತೆಯಾದಾಗ ಯುಗವೊಂದು ಕ್ಷಣದಂತೆ ಸರಿದುಹೋಗುತ್ತದೆ. ಅದಕ್ಕೆ ಸಿಕ್ಕವರನ್ನು ಇಷ್ಟಪಡುವ ಅಥವಾ ಇಷ್ಟಪಟ್ಟವರನ್ನು ಸಿಗುವಂತೆ ನೋಡಿಕೊಳ್ಳುವ, ಪ್ರೀತಿಸುವ ದೊಡ್ಡ ಮನಸ್ಸು ನಮ್ಮದಾಗಬೇಕಷ್ಟೆ.
ಜಮುನಾರಾಣಿ ಹೆಚ್. ಎಸ್.