Advertisement

ಕುಂದಗೋಳದಲ್ಲಿ ಅನುಕಂಪ ಅನುಕಂಪ

11:19 AM Apr 29, 2019 | Suhan S |

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಖಾಡ ಸಜ್ಜುಗೊಂಡಿದೆ. ಸದ್ಯದ ರಾಜಕೀಯ ಸ್ಥಿತಿ ಗಮನಿಸಿದರೆ ಕ್ಷೇತ್ರದಲ್ಲಿ ಅನುಕಂಪ ವರ್ಸಸ್‌ ಅನುಕಂಪ ಎಂಬ ಪರಿಸ್ಥಿತಿ ಸೃಷ್ಟಿಯಾಗಿದ್ದು, ಇದೇ ಆಧಾರದಲ್ಲಿ ಮತಬೇಟೆ ನಡೆಯುವ ಸಾಧ್ಯತೆ ಅಧಿಕವಾಗಿದೆ.

Advertisement

ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಶಿವಳ್ಳಿ ಹಾಗೂ ಬಿಜೆಪಿಯ ಎಸ್‌.ಐ.ಚಿಕ್ಕನಗೌಡ್ರ ಇಬ್ಬರೂ ಅನುಕಂಪ ಗಿಟ್ಟಿಸಿಕೊಳ್ಳಲು, ಆ ಮೂಲಕವೇ ಮತದಾರರ ಮೇಲೆ ಪ್ರಭಾವ ಬೀರುವ ಮೂಲಕ ಮತಬೇಟೆಗೆ ಮುಂದಾಗಲು ಯೋಜಿಸಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ತನ್ನ ಅಧಿಪತ್ಯ ಮುಂದುವರಿಸಲು ಕಾಂಗ್ರೆಸ್‌, ಮತ್ತೆ ಹಿಡಿತ ಹೊಂದಲು ಬಿಜೆಪಿ ತೀವ್ರ ಸೆಣೆಸಾಟಕ್ಕಿಳಿದಿವೆ. ಎರಡು ರಾಷ್ಟ್ರೀಯ ಪಕ್ಷಗಳು ಅನೇಕ ವಿಷಯ, ಆರೋಪ-ಪ್ರತ್ಯಾರೋಪಗಳ ಶಸ್ತ್ರಗಳನ್ನು ಸಜ್ಜುಗೊಳಿಸಿ ಕೊಂಡಿವೆಯಾದರೂ ಪ್ರಮುಖವಾಗಿ ಅನುಕಂಪದ ಅಸ್ತ್ರವನ್ನು ಪ್ರಯೋಗಿಸಲು ಎರಡೂ ಕಡೆಯ ಅಭ್ಯರ್ಥಿಗಳು ಸನ್ನದ್ಧರಾಗಿದ್ದಾರೆ.

ಕಾಂಗ್ರೆಸ್‌ ಅಸ್ತ್ರ; ಪತಿಯನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ ಕುಸುಮಾವತಿ ಶಿವಳ್ಳಿ ಅವರು, ಪತಿ ಸಿ.ಎಸ್‌.ಶಿವಳ್ಳಿ ಅವರ ಅನುಕಂಪದ ಅಲೆಯನ್ನು ಮತಗಳನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ತೀವ್ರ ಯತ್ನ ನಡೆಸುವ ಸಾಧ್ಯತೆ ಇದೆ. ಶಿವಳ್ಳಿ ಅವರು ಶಾಸಕರಾಗಿರಲಿ, ಇಲ್ಲದಿರಲಿ ಜನರೊಂದಿಗೆ ನೇರ ಸಂಪರ್ಕದಲ್ಲಿರುತ್ತಿದ್ದರು. ಸಚಿವರಾದ ನಂತರವೂ ಜನರೊಂದಿಗಿನ ನಂಟು ಬದಲಾಗಿರಲಿಲ್ಲ. ನೆರವು ಬೇಡಿ ಬಂದ ಜನರಿಗೆ ಕೈಲಾದ ಮಟ್ಟಿಗೆ ನೆರವು ನೀಡುತ್ತಿದ್ದರು ಎಂಬುದು ಕ್ಷೇತ್ರದ ಅನೇಕರ ಅನಿಸಿಕೆ. ಈ ಬಾಂಧವ್ಯವೇ ತನ್ನ ಪಕ್ಷದ ಅಭ್ಯರ್ಥಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್‌ ಹೊಂದಿದೆ.

ಈ ಕಾರಣಕ್ಕಾಗಿಯೇ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿಗೆ ಟಿಕೆಟ್ ನೀಡಲು ಕಾಂಗ್ರೆಸ್‌ ನಿರ್ಧರಿಸಿತ್ತು. ಕಾಂಗ್ರೆಸ್‌ನಿಂದ ಸುಮಾರು 18 ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ಕಾಂಗ್ರೆಸ್‌ ವರಿಷ್ಠರು ಶಿವಳ್ಳಿ ಅವರ ಪತ್ನಿಯನ್ನು ಅಭ್ಯರ್ಥಿಯಾಗಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆ, ಧಾರವಾಡ ಜಿಲ್ಲೆಯ ಕಾಂಗ್ರೆಸ್‌ ಮುಖಂಡರ ಒತ್ತಾಸೆಯೂ ಇದರ ಹಿಂದೆ ಬಹುದೊಡ್ಡ ರೀತಿಯಲ್ಲಿ ಕೆಲಸ ಮಾಡಿದೆ.

ಬಿಜೆಪಿ ಅಸ್ತ್ರ: ಕಾಂಗ್ರೆಸ್‌ ಅಭ್ಯರ್ಥಿ ಅನುಕಂಪವನ್ನು ಹೆಚ್ಚಿನ ರೀತಿಯಲ್ಲಿ ನೆಚ್ಚಿಕೊಂಡಿದ್ದರಿಂದ ಇದಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಎಸ್‌. ಐ.ಚಿಕ್ಕನಗೌಡ್ರ ಸಹ ಅನುಕಂಪದ ಅಸ್ತ್ರವನ್ನೇ ಬಳಸಿಕೊಳ್ಳಲು ಮುಂದಾಗಿ ದ್ದಾರೆ. ಸತತ ಎರಡು ಬಾರಿ ಸೋಲುಂಡಿದ್ದು, ತಮ್ಮ ಕೈ ಹಿಡಿಯುವ ಮೂಲಕ ರಾಜಕೀಯ ಪುನರ್ಜನ್ಮ ನೀಡುವಂತೆ ಮತದಾರರ ಮೇಲೆ ಅನುಕಂಪದ ಅಸ್ತ್ರ ಪ್ರಯೋಗಿಸಲು ತೀವ್ರ ಯತ್ನ ನಡೆಸಿದ್ದಾರೆ. ಕಲಘಟಗಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಎಸ್‌. ಐ.ಚಿಕ್ಕನಗೌಡ್ರ, ಕ್ಷೇತ್ರ ಪುನರ್‌ವಿಂಗಡಣೆಯಿಂದಾಗಿ 2008ರಲ್ಲಿ ಕುಂದಗೋಳ ಕ್ಷೇತ್ರಕ್ಕೆ ವಲಸೆ ಬಂದಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಗೆಲುವು ಸಾಧಿಸಿದ್ದರು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆ ಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ಸಿ.ಎಸ್‌.ಶಿವಳ್ಳಿ ಎದುರು ಸೋತಿದ್ದರೂ, ಎರಡನೇ ಸ್ಥಾನ ಪಡೆಯುವ ಮೂಲಕ ಬಿಜೆಪಿಯನ್ನು 3ನೇ ಸ್ಥಾನಕ್ಕೆ ತಳ್ಳುವಂತೆ ಮಾಡಿದ್ದರು.

Advertisement

2018ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್‌.ಐ.ಚಿಕ್ಕನಗೌಡ್ರ, ಸಿ.ಎಸ್‌.ಶಿವಳ್ಳಿ ಅವರ ವಿರುದ್ಧ ಕೇವಲ 634 ಮತಗಳ ಅಂತರದಿಂದ ಸೋಲು ಕಂಡಿದ್ದರು. ಎಸ್‌.ಐ.ಚಿಕ್ಕನಗೌಡ್ರ ಸತತ ಎರಡು ಬಾರಿ ಸೋಲುಂಡಿದ್ದರೆ, ಸಿ.ಎಸ್‌.ಶಿವಳ್ಳಿಯವರು ಸುಮಾರು 56 ವರ್ಷಗಳ ನಂತರ ಸತತ ಎರಡು ಬಾರಿ ಗೆದ್ದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿರುವ ಎಸ್‌.ಐ.ಚಿಕ್ಕನಗೌಡ್ರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದ ಸೋಲು ಕಂಡಿದ್ದೇನೆ. ನನಗೆ ಈ ಬಾರಿ ಗೆಲುವು ನೀಡಿ ಎಂಬ ಅನುಕಂಪದ ದಾಳ ಉರುಳಿಸಲು ಮುಂದಾಗಿದ್ದಾರೆ.

● ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next