Advertisement

ಕರ್ನಾಟಕದಲ್ಲೀಗ ಭ್ರಷ್ಟಾಚಾರದ್ದೇ ಸದ್ದು

04:50 PM May 07, 2018 | Team Udayavani |

ದಾವಣಗೆರೆ: ಕರ್ನಾಟಕದಲ್ಲಿ ಈ ಹಿಂದೆ ಕಂಡು ಬರದೇ ಇದ್ದಂತಹ ಭ್ರಷ್ಟಾಚಾರ ಸದ್ದು ಮಾಡುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ದೂರಿದ್ದಾರೆ. ಭಾನುವಾರ ಚನ್ನಗಿರಿಯ ತಾಲೂಕು ಕ್ರೀಡಾಂಗಣದಲ್ಲಿ ಚನ್ನಗಿರಿ ಕ್ಷೇತ್ರದ ಮಹಿಮಾ ಪಟೇಲ್‌, ಮಾಯಕೊಂಡ ಮೀಸಲು ಕ್ಷೇತ್ರದ ಎಂ. ಬಸವರಾಜನಾಯ್ಕ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ
ಕರ್ನಾಟಕ ಅಭಿವೃದ್ಧಿಗೆ ಹೆಸರಾಗಿತ್ತು. ಇಂದು ಭ್ರಷ್ಟಾಚಾರಕ್ಕೆ ಹೆಸರಾಗಿದೆ. ಭ್ರಷ್ಟಾಚಾರವನ್ನು ಅಳಿಸಬೇಕಾದರೆ ಪ್ರಾಮಾಣಿಕರು ಅಧಿಕಾರಕ್ಕೆ ಬರಬೇಕು ಎಂದರು.

Advertisement

ದೇಶದಲ್ಲಿ ಹಾಲಿ ಇರುವ ರಾಜಕೀಯ ಪರಿಸ್ಥಿತಿ ಒಪ್ಪುವಂಥದ್ದಲ್ಲ. ರಾಜಕೀಯ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ, ವಾದ, ಪ್ರತಿವಾದ ಇರಬೇಕು. ಆದರೆ, ಈಗಿರುವ ವಾತಾವರಣ ಸದಾ ಸಂಘರ್ಷಕ್ಕೆ ಎಡೆಮಾಡಿಕೊಡುವಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
 
ಜಾತ್ಯತೀತತೆಯ ಬಗ್ಗೆ ಮಾತನಾಡುವಂತಹವರು ಹಿಂದುಳಿದರು, ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುವರು, ಅವರ ಅಭಿವೃದ್ಧಿಗೆ ಮಾಡಿದ್ದೇನು ಎಂಬುದು ಜಗಜ್ಜಾಹೀರಾಗಿದೆ. ಅಂತಹವರ ಹಿಂದೆ ಹೋದವರ ಸ್ಥಿತಿ ಇಂದಿಗೂ ಬದಲಾಗಿಲ್ಲ. ಈ ಎಲ್ಲವನ್ನೂ ಅರಿತು ಈ ಚುನಾವಣೆಯಲ್ಲಿ ಮತದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿಹಾರದಲ್ಲಿ ಮೈತ್ರಿ ಬಗ್ಗೆ ಕೆಲವರು ಆರೋಪ ಮಾಡುತ್ತಾರೆ. ನಾವು ಮಾಡಿಕೊಂಡಿರುವ ಮೈತ್ರಿ ಭ್ರಷ್ಟಾಚಾರ, ಸಾಮಾಜಿಕ, ಸಾಂಸ್ಕೃತಿಕ ಸಾಮರಸ್ಯಕ್ಕೆ ಧಕ್ಕೆ ಬರುವಂತಿಲ್ಲ. ಆ ರೀತಿಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ. ಆದರೂ, ಕೆಲವರು ಸುಳ್ಳು
ಆರೋಪ ಮಾಡುತ್ತಾರೆ ಎಂದು ದೂರಿದರು.

ಕರ್ನಾಟಕ ಕಂಡಂತಹ ಮಹಾನ್‌ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ರಲ್ಲಿದ್ದ ಸಾಮಾಜಿಕ ಚಿಂತನೆ, ಅಭಿವೃದ್ಧಿಯ ವಿಚಾರ, ಸಾಮಾಜಿಕ ಕಳಕಳಿ, ಬದ್ಧತೆ, ಎಲ್ಲ ಅಂಶಗಳು ಅವರ ಪುತ್ರ ಮಹಿಮಾ ಪಟೇಲರಲ್ಲಿವೆ. ಇಂದಿನ ರಾಜಕೀಯ ವಾತಾವರಣದಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆ ಆಗುತ್ತಿದೆ. ಅಂತಹ ವಾತಾವರಣದ ನಡುವೆ ಮಹಿಮಾ ಪಟೇಲ್‌ ಭಿನ್ನವಾಗಿ ಕಂಡು
ಬರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಮಾ ಪಟೇಲ್‌ ಎಲ್ಲ ವಿಷಯಗಳ ಕುರಿತು ಚಿಂತನೆ ಹೊಂದಿದ್ದಾರೆ. ಕೆರೆ, ಪ್ರಕೃತಿ, ಪ್ರತಿ ಕುಟುಂಬಕ್ಕೆ ಸಮರ್ಪಕ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದು, ವಿದ್ಯುತ್‌ ಪೂರೈಕೆ ಇಂತಹ ಜನಪರ ಚಿಂತನೆ ಹೊಂದಿದ್ದಾರೆ. ಅನೇಕ ವಿಚಾರಗಳ
ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ಬಿಹಾರದಂತೆ ಆ ಎಲ್ಲ ಚಿಂತನೆಗಳನ್ನು ಕರ್ನಾಟಕದಲ್ಲಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

Advertisement

ಮಹಿಮಾ ಪಟೇಲ್‌ ಸ್ಪರ್ಧಿಸುತ್ತಿರುವ ಚನ್ನಗಿರಿ ಕ್ಷೇತ್ರ ಕರ್ನಾಟಕದ ಮಧ್ಯ ಭಾಗದಲ್ಲಿದೆ. ತಾತ್ವಿಕ, ಸಾಮಾಜಿಕ ರಾಜಕಾರಣ ನೆಲೆ ಒದಗಿಸುವ ಕಾರ್ಯ ಚನ್ನಗಿರಿಯಿಂದಲೇ ಪ್ರಾರಭವಾಗಲಿ. ಮಹಿಮಾ ಪಟೇಲ್‌, ಮಾಯಕೊಂಡ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು. 

ಉತ್ತಮರ ಆಯ್ಕೆ ಇಂದಿನ ಅಗತ್ಯ: ಮಹಿಮಾ
ಚನ್ನಗಿರಿ:
ಕ್ಷೇತ್ರಕ್ಕೆ ನಾನು ಹೊರಗಿನವನು ಎಂದು ಹೇಳಲಾಗುತ್ತಿದೆ. ಕಳೆದ 90 ವರ್ಷಗಳಿಂದ ಚನ್ನಗಿರಿಯಲ್ಲಿ ನಮ್ಮ ಕುಟುಂಬ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದೆ. ಚನ್ನಗಿರಿ ನನ್ನ ಜಾಗ. ಇಲ್ಲಿ ನೆಲೆಸಿರುವ ಖದೀಮರು, ಕಳ್ಳರನ್ನು ಹೊಡೆದೋಡಿಸಿ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಿದೆ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಚನ್ನಗಿರಿ ವಿಧಾನಸಭಾ ಕ್ಷೇತ್ರದ
ಅಭ್ಯರ್ಥಿ ಮಹಿಮಾ ಪಟೇಲ್‌ ಹೇಳಿದರು. ಚನ್ನಮ್ಮಾಜಿ ಕ್ರೀಡಾಂಗಣದಲ್ಲಿ ಜೆಡಿಯು ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದ ಇಲಾಖೆಗಳಲ್ಲಿ ಬಡವರು, ದಿಧೀನ ದಲಿತರು, ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕಿದೆ. ನಿರ್ಭೀತಿಯಿಂದ ಜನ ಸರ್ಕಾರಿ ಕಚೇರಿಗೆ ಹೋಗಿ ತಮ್ಮ ಕೆಲಸ ಮಾಡಿಕೊಳ್ಳುವಂತಹ ವ್ಯವಸ್ಥೆ ಮೊದಲು ನಿರ್ಮಾಣವಾಗಬೇಕು ಎಂದರು. ಪ್ರಸ್ತುತ ರಾಜಕಾರಣಿಗಳು ಎಂದರೆ ದರೋಡೆಕೊರರು, ಕಳ್ಳರು ಎಂಬಂತೆ ಜನತೆ ನೋಡುತ್ತಿದ್ದಾರೆ. ಇಂತಹ ಕೆಟ್ಟ ಅಲೋಚನೆ ದೂರವಾಗಲು ಉತ್ತಮ ವ್ಯಕ್ತಿಗಳ ಆಯ್ಕೆ ಅವಶ್ಯವಿದೆ. ಆದ್ದರಿಂದ ಜನತೆ ಆಮಿಷಕ್ಕೆ ಬಲಿಯಾಗದೇ ಮತದಾನ ಮಾಡಬೇಕು. ತಮಗೆ ಯಾವ ರೀತಿಯ ಆಡಳಿತ ಬೇಕು ಎನ್ನುವುದು ಮತದಾರರ ಕೈಯ್ಯಲ್ಲಿಯೇ ಇದೆ ಎಂದರು.

ಬಿಹಾರ ಸಂಪೂರ್ಣ ಮದ್ಯಪಾನ ಮುಕ್ತ ರಾಜ್ಯವಾಗಿದೆ. ಅಲ್ಲಿನ ಜನತೆ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಅಲ್ಲಿನ
ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ದಕ್ಷ ಆಡಳಿತ ಎಂದರು.

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮುಂದಾಲೋಚನೆ ಈಗಿನ ಯಾವೊಬ್ಬ ರಾಜಕಾಣಿಯಲ್ಲೂ ಕಾಣಸಿಗುತ್ತಿಲ್ಲ.
ಕೈಗಾರಿಕೋದ್ಯಮ ಸೇರಿದಂತೆ ವಿವಿಧ ರೀತಿಯಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜೆಡಿಯು ಹೊಸ ಅಲೋಚನೆ ಇಟ್ಟುಕೊಂಡು ಬಂದಿದೆ. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ರಾಜ್ಯದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು
ಕಣದಲ್ಲಿದ್ದು ಅವರೆಲ್ಲರೂ ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next