Advertisement

ಜನವರಿಯಲ್ಲಿ ವಿವಿ ಸಾಗರಕ್ಕೆ ಭದ್ರಾ ನೀರು ಹರಿಸಿ

04:18 PM Dec 09, 2018 | Team Udayavani |

ಚಿತ್ರದುರ್ಗ/ಚಳ್ಳಕೆರೆ: ಭದ್ರಾ ಮೇಲ್ದಂಡೆ ಯೋಜನೆಯಡಿ ಹಿರಿಯೂರಿನ ವಿವಿ ಸಾಗರಕ್ಕೆ ಹೊಸ ವರ್ಷದ ಮೊದಲ ತಿಂಗಳಲ್ಲಿ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ಎನ್‌. ಚಂದ್ರಪ್ಪ, ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು.

Advertisement

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಶನಿವಾರ ಭೇಟಿ ನೀಡಿದ್ದ ಅವರು ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು. ನೀರು ಹರಿಸುವ ವಿಚಾರ ಪದೇ ಪದೇ ಮುಂದಕ್ಕೆ ಹೋಗುವುದು ಬೇಡ. ಈ ತಿಂಗಳಾಂತ್ಯದೊಳಗೆ ಎಲ್ಲ ರೀತಿಯ ಆಡಳಿತಾತ್ಮಕ ವಿಷಯಗಳಿಗೆ ಮತ್ತು ಬಾಕಿ ಇರುವ ವಿದ್ಯುತ್‌ ಮತ್ತು ರೈಲ್ವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ 2019ರ ಜನವರಿ ತಿಂಗಳಲ್ಲಿ ನೂರಕ್ಕೆ ನೂರಷ್ಟು ನೀರು ಹರಿಸುವ ಕಾರ್ಯ ಮಾಡಬೇಕು ಎಂದರು. ಭದ್ರಾ ಮೇಲ್ದಂಡೆ ಯೋಜನೆ ಅಡಿ ಬಯಲುಸೀಮೆಗೆ ಭದ್ರಾ ನೀರು ಹರಿದು ಬರುವುದಿಲ್ಲ ಎನ್ನುವ ಅನುಮಾನ ಕೆಲವರಲ್ಲಿ ವ್ಯಕ್ತವಾಗುತ್ತಿದೆ. ಆ ರೀತಿಯ ನಕಾರಾತ್ಮಕ ಮನಸ್ಥಿತಿ ಬೇಡ. ಭದ್ರಾ ನೀರನ್ನು ಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಭದ್ರಾ ಮೇಲ್ದಂಡೆ ನಾಲೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಯಲಿದೆ. ಅಲ್ಲದೆ ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಚಿತ್ರದುರ್ಗ, ಮೊಳಕಾಲ್ಮೂರು ಮತ್ತು ಪಾವಗಡ ತಾಲೂಕಿನ ಹಲವು ಭಾಗಗಳಿಗೆ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತದೆ. ತುಂಗಾ ನದಿಯಿಂದ 19 ಟಿಎಂಸಿ ನೀರನ್ನು ಎತ್ತಿ ಭದ್ರಾ ಡ್ಯಾಂಗೆ ಹಾಕುವ ಎರಡು ಲಿಫ್ಟ್‌ ಕಾಮಗಾರಿ ವೇಗವಾಗಿ ನಡೆಯಬೇಕು. 

ಮುತ್ತಿನಕೊಪ್ಪ ಬಳಿಯ ಕಾಮಗಾರಿಗೂ ವೇಗ ನೀಡಬೇಕು ಎಂದರು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಜಿಲ್ಲೆಯನ್ನು ನಿರಂತರವಾಗಿ ಬರ ಕಾಡುತ್ತಿರುವುದರಿಂದ ಭದ್ರಾ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ವಿದ್ಯುತ್‌ ಮತ್ತು ರೈಲ್ವೆ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಮಾಡಬೇಕು. ಜನವರಿಯೊಳಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ರೈಲ್ವೆ ಇಲಾಖೆಯವರಿಗೆ ಒತ್ತಡ ಹೇರಬೇಕು. ಕಾಮಗಾರಿಗಳು ಪೂರ್ಣಗೊಂಡರೆ ಜನವರಿ ಅಂತ್ಯದೊಳಗೆ ಭದ್ರಾ ನೀರು ವಿವಿ ಸಾಗರಕ್ಕೆ ಹರಿಯಲು ಯಾವುದೇ ಅಡ್ಡಿ, ಆತಂಕವಿಲ್ಲ ಎಂದು
ತಿಳಿಸಿದರು. ಅಜ್ಜಂಪುರ ಸಮೀಪದಲ್ಲಿನ ಸುರಂಗ ಮಾರ್ಗ, ರೈಲ್ವೆ ಕಾಮಗಾರಿ, ತುಂಗಾ ನದಿಯ ಸಮೀಪ ನಡೆಯುತ್ತಿರುವ ಕಾಮಗಾರಿ ಹಾಗೂ ವಿದ್ಯುತ್‌ ಕಾಮಗಾರಿಗಳನ್ನು ಸಂಸದರು ಹಾಗೂ ಶಾಸಕರು ವೀಕ್ಷಿಸಿದರು. ಹೊಸದುರ್ಗದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್‌ ಎಂ.ಜಿ. ಶಿವಕುಮಾರ್‌, ಅಧಿಧೀಕ್ಷಕ ಇಂಜಿನಿಯರ್‌ ಪಾಳೇಗಾರ್‌, ಕ್ಯಾದಿಗುಂಟೆ ನಾಗರಾಜ್‌, ಜಿಪಂ ಸದಸ್ಯರಾದ ಪ್ರಕಾಶ್‌ಮೂರ್ತಿ, ಕೃಷ್ಣಮೂರ್ತಿ, ಡಿ.ಎನ್‌. ಮೈಲಾರಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next