ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂಕೊರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಹಣಕಾಸು ದುರುಪಯೋಗ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಅಕ್ಟೋಬರ್ 22ರಂದು ಚಿದಂಬರಂಗೆ ಸಿಬಿಐ ಪ್ರಕರಣದಲ್ಲಿ ಜಾಮೀನು ದೊರಕಿತ್ತು. ಆದರೆ ಇ.ಡಿ ಪ್ರಕರಣದಲ್ಲಿ ಜಾಮೀನು ಸಿಗಲಿಲ್ಲವಾಗಿತ್ತು.
ಚಿದಂಬರಂಗೆ ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ನ ನೂತನ ಸಿಜೆಐ ಎಸ್ .ಎ.ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿರುವುದಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.
ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿ ಕಳೆದ ವಾರ ಹೈಕೋರ್ಟ್ ನಲ್ಲಿ ವಜಾಗೊಂಡಿರುವುದಾಗಿ ಸಿಬಲ್ ಸುಪ್ರೀಂಗೆ ತಿಳಿಸಿದರು. ಕಳೆದ 90ದಿನಗಳಿಂದ ಚಿದಂಬರಂ ಜೈಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಮೇಲ್ಮನವಿಯನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಎಂದು ಸಿಜೆಐ ಬೋಬ್ಡೆ ನೇತೃತ್ವದ ಜಸ್ಟೀಸ್ ಬಿಆರ್ ಗವಾಯಿ ಹಾಗೂ ಜಸ್ಟೀಸ್ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠಕ್ಕೆ ಸಿಬಲ್ ಮನವಿ ಮಾಡಿಕೊಂಡರು.
ಚಿದಂಬರಂ ಜಾಮೀನು ಅರ್ಜಿ ಕುರಿತು ಸಲ್ಲಿಕೆಯಾದ ಮೇಲ್ಮನವಿಯನ್ನು ಮಂಗಳವಾರ ಅಥವಾ ಬುಧವಾರ ಕೈಗೆತ್ತಿಕೊಳ್ಳುವುದಾಗಿ ಸಿಜೆಐ ಬೋಬ್ಡೆ ಈ ಸಂದರ್ಭದಲ್ಲಿ ತಿಳಿಸಿದರು.