Advertisement

ಉನ್ನತ ಶಿಕ್ಷಣದಲ್ಲಿ ಕನ್ನಡ ಕಡತಗಳಿಗಷ್ಟೇ ಸೀಮಿತ

11:26 PM Oct 29, 2019 | Lakshmi GovindaRaju |

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯ ಬಳಕೆ ಕಡತಗಳಿಗೆ ಸೀಮಿತವಾಗಿದ್ದು, ಬೋಧನೆ ಮತ್ತು ಅಧ್ಯಯನದಲ್ಲಿ ಕನ್ನಡ ಮಾಯವಾಗುತ್ತಿದೆ.

Advertisement

ಮಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ ಹಾಗೂ ಉತ್ತರ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯ, ರಾಜ್ಯ ಕಾನೂನು ವಿಶ್ವವಿದ್ಯಾಲಯ, ಕೃಷ್ಣದೇವರಾಯ ವಿಶ್ವವಿದ್ಯಾಲಯ, ಮಹಿಳಾ ವಿಶ್ವವಿದ್ಯಾಲಯ ಸೇರಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಬರುವ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಲಾ ಮತ್ತು ಶಿಕ್ಷಣ ವಿಭಾಗ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಹತ್ತಾರು ಬಗೆಯ ಸ್ನಾತಕೋತ್ತರ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಕೆಲವೇ ಕೆಲವು ವಿಷಯಗಳನ್ನು ಹೊರತುಪಡಿಸಿ (ಪ್ರಾಯೋಗಿಕ ವಿಷಯ) ಬೇರೆಲ್ಲ ವಿಷಯಗಳನ್ನು ಕನ್ನಡದಲ್ಲಿ ಬೋಧಿಸಲು ಅವಕಾಶವಿದೆ. ಆದರೆ, ಬೋಧನೆ ಮಾಡಲು ಪ್ರಾಧ್ಯಾಪಕರೇ ಮುಂದೆ ಬರುವುದಿಲ್ಲ. ಎಲ್ಲ ವಿಷಯದ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿ ಮುದ್ರಿಸುತ್ತಾರೆ, ಕನ್ನಡದಲ್ಲಿ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆದರೆ, ಕನ್ನಡದಲ್ಲಿ ಉತ್ತರ ಬರೆಯುವ ವಿದ್ಯಾರ್ಥಿಗಳನ್ನು ಬೇರೆಯೇ ವರ್ಗಕ್ಕೆ ಸೇರಿಸುವ ಪ್ರವೃತ್ತಿಯೂ ವಿಶ್ವವಿದ್ಯಾಲಯದಲ್ಲಿ ಬೆಳೆದು ಬಿಟ್ಟಿದೆ. ಇದು ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗೂ ಅರಿವಿದೆ.

ಗ್ರಾಮೀಣ ಭಾಗದಲ್ಲಿ ಪಿಯು, ಪದವಿ ಪೂರೈಸಿ, ಸ್ನಾತಕೋತ್ತರ ಕೋರ್ಸ್‌ಗೆ ವಿಶ್ವವಿದ್ಯಾಲಯ ಸೇರುವ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ಕನ್ನಡ ಬೋಧನೆ ಅಗತ್ಯವೆನಿಸಿರುತ್ತದೆ. ಆದರೆ, ನಗರ ಪ್ರದೇಶದಲ್ಲಿ ಪಿಯು, ಪದವಿ ಪೂರೈಸಿದ ವಿದ್ಯಾರ್ಥಿಗಳಲ್ಲಿ ಬಹುತೇಕರು ಕನ್ನಡದಿಂದ ದೂರ ಇರುವುದರಿಂದ ಕನ್ನಡ ಬೋಧನೆಗೆ ಅವಕಾಶ ಇದ್ದರೂ, ಪ್ರಾಧ್ಯಾಪಕರು ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲೇ ಬೋಧನಾ ಪ್ರಕ್ರಿಯೆ ನಡೆಸುತ್ತಾರೆ. ಪರೀಕ್ಷೆ ಕನ್ನಡದಲ್ಲಿ ಬರೆಯಬಹುದೆಂದು ತರಗತಿ ಆರಂಭದ ದಿನಗಳಲ್ಲೇ ಸೂಚಿಸುತ್ತಾರೆ.

ಆದರೆ, ಕನ್ನಡದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಂತೆ ಸಮಾನರಾಗಿ ನೋಡುವುದಿಲ್ಲ. ಇಂಗ್ಲಿಷ್‌ನಲ್ಲಿ ಉತ್ತರ ಬರೆಯುವ ವಿದ್ಯಾರ್ಥಿಗಳತ್ತ ಪ್ರಾಧ್ಯಾಪಕರ ಗಮನವೇ ಹೆಚ್ಚಿರುತ್ತದೆ. ಇಷ್ಟು ಮಾತ್ರವಲ್ಲ, ವಿದ್ಯಾರ್ಥಿಗಳಲ್ಲೂ ಕನ್ನಡ ಎಂದರೆ ಒಂದು ರೀತಿಯ ಕೀಳರಿಮೆ ಇದ್ದೇ ಇದೆ. ಉದ್ಯೋಗಾವಕಾಶಕ್ಕೆ ಇಂಗ್ಲಿಷ್‌ ಬರಲೇ ಬೇಕೆಂಬ ಮಾನಸಿಕತೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಇರುವುದರಿಂದ ಸ್ನಾತಕೋತ್ತರ ಪದವಿಯಲ್ಲಿ ಕನ್ನಡದಲ್ಲಿ ಅಧ್ಯಯನ ಮಾಡಲು ಮತ್ತು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳೇ ಹಿಂದೇಟು ಹಾಕುವುದು ಉಂಟು.

Advertisement

ರಾಜ್ಯದ ಎಲ್ಲ ವಿಶ್ವವಿದ್ಯಾಲಯದಲ್ಲೂ ಕನ್ನಡಕ್ಕೆ ಆದ್ಯತೆಯಿದೆ. ಎಲ್ಲ ವಿಭಾಗದ ಕಡತ ಮತ್ತು ಪತ್ರ ವ್ಯವಹಾರಗಳನ್ನು ಇಂಗ್ಲಿಷ್‌ನಲ್ಲಿ ನಡೆಸುತ್ತಾರೆ. ಉನ್ನತ ಶಿಕ್ಷಣ ಪರಿಷತ್‌, ಉನ್ನತ ಶಿಕ್ಷಣ ಇಲಾಖೆಯಲ್ಲಿ ಕನ್ನಡವು ಕಡತದಲ್ಲಿದೆ. ಆದರೆ, ವಿಶ್ವವಿದ್ಯಾಲಯದ ಪಠ್ಯ, ಪಠ್ಯಕ್ರಮ, ಬೋಧನಾ ವಿಧಾನ ಮತ್ತು ಅಧ್ಯಯನ ಸಾಮಗ್ರಿಗಳಲ್ಲಿ ಕನ್ನಡ ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಕನ್ನಡದಲ್ಲಿ ಸರಿಯಾದ ಪಠ್ಯ ವಿಶ್ವವಿದ್ಯಾಲಯದ ಗ್ರಂಥಾಲಯಗಳಲ್ಲಿ ಲಭ್ಯವಿಲ್ಲದೇ ಇರುವುದರಿಂದ ಬಹುತೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಹಿಂಜರಿಯುತ್ತಿದ್ದಾರೆ.

ಇಂಗ್ಲಿಷ್‌ನಲ್ಲಿ ಸಿಗುವಷ್ಟು ಪಠ್ಯ ಸಾಮಗ್ರಿ ಕನ್ನಡದಲ್ಲಿ ಲಭ್ಯವಿಲ್ಲ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಮತ್ತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಕೂಡ ಈ ಹಿಂದೆ ಉನ್ನತ ಶಿಕ್ಷಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಾಕಷ್ಟು ಒತ್ತಡ ತಂದಿತ್ತು, ಕಡತ ಕನ್ನಡವಾಗಿದೆ. ಆದರೆ, ತರಗತಿ ಕೊಠಡಿಯಲ್ಲಿ ಕನ್ನಡದ ಅನುಷ್ಠಾನ ಇನ್ನೂ ಆಗಿಲ್ಲ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಇನ್ನಾದರೂ ಯೋಚಿಸಬೇಕು. ಇಂಗ್ಲಿಷ್‌ ಇರಬೇಕು, ಆದರೆ ಅನಿವಾರ್ಯ ಎಂಬ ಪರಿಸ್ಥಿತಿ ವಿವಿಗಳಲ್ಲಿ ನಿರ್ಮಾಣವಾಗಿದೆ. ಇದನ್ನು ನಿವಾರಿಸಿ, ಕನ್ನಡ ಅನಿವಾರ್ಯವಾಗಿ ಅನುಷ್ಠಾನವಾಗಬೇಕು.

ವಿವಿಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತೇವೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಬರೆಯವುದು ಅಥವಾ ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ. ಬೋಧನೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಡುವ ಸಾಕಷ್ಟು ಪ್ರಾಧ್ಯಾಪಕರು ಎಲ್ಲ ವಿವಿಗಳಲ್ಲೂ ಇದ್ದಾರೆ. ವಿಷಯಾಧಾರಿತವಾಗಿ ಬೋಧನೆ ವಿಧಾನ ಬದಲಾಗುತ್ತದೆ.
-ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕುಲಪತಿ ಬೆಂಗಳೂರು ವಿವಿ

ಪದವಿ ತರಗತಿಗಳಲ್ಲಿ ಕನ್ನಡದಲ್ಲಿ ಬೋಧನೆ ಹೆಚ್ಚಿರುತ್ತದೆ. ಸ್ನಾತಕೋತ್ತರದಲ್ಲಿ ಇಂಗ್ಲಿಷ್‌ನಲ್ಲಿ ಬೋಧನೆ ಜಾಸ್ತಿ ಇರುತ್ತದೆ. ಆದರೆ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇದೆ. ಅದನ್ನು ಆರಂಭದಲ್ಲೇ ನಮೂದಿಸಬೇಕು. ಉತ್ತರ ಪತ್ರಿಕೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡನ್ನೂ ಬಳಸುವಂತಿಲ್ಲ.
-ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಮಂಗಳೂರು ವಿವಿ ಕುಲಪತಿ

ವಿದ್ಯಾರ್ಥಿಗಳು ಯಾವ ಭಾಷೆಯಲ್ಲಿ ಅಧ್ಯಯನ ಸಾಮಗ್ರಿ ಕೇಳುತ್ತಾರೋ ಅದೇ ಭಾಷೆಯಲ್ಲಿ ನೀಡುತ್ತೇವೆ. ಅಸೈನ್ಮೆಂಟ್‌ ಕೂಡ ಕನ್ನಡದಲ್ಲಿ ಬರೆಯಲು ಮುಕ್ತ ಅವಕಾಶ ಇದೆ. ಒಂದು ವಾರದ ತರಗತಿ ಕೂಡ ಕನ್ನಡದಲ್ಲೇ ಹೆಚ್ಚಾಗಿ ನಡೆಸುತ್ತೇವೆ.
-ಡಾ.ಎಸ್‌.ವಿದ್ಯಾಶಂಕರ್‌, ಕುಲಪತಿ, ರಾಜ್ಯ ಮುಕ್ತ ವಿವಿ

ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್‌ ಬೇಕು, ಹಾಗಂತ ವಿಶ್ವವಿದ್ಯಾಲಯ ದಲ್ಲಿ ಮಾತೃಭಾಷೆಯ ಕಡೆಗಣನೆ ಸರಿಯಲ್ಲ. ವಿವಿಗಳಲ್ಲಿ ಮಾತೃಭಾಷೆ ಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕ್ರಮ ಆಗಬೇಕು ಮತ್ತು ಅದಕ್ಕೆ ಬೇಕಾದ ಅವಕಾಶವನ್ನು ಕಲ್ಪಿಸಬೇಕು. ಜಾಗತಿಕ ವಾಗಿ ವಿದ್ಯಾರ್ಥಿಗಳು ಬೆಳೆಯಲು ಅನುಕೂಲ ಮಾಡಿಕೊಡಬೇಕು.
-ಹರ್ಷ ನಾರಾಯಣ, ಎಬಿವಿಪಿ ರಾಜ್ಯ ಕಾರ್ಯದರ್ಶಿ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next