ಬೆಳಗಾವಿ: ನಮ್ಮ ಕಾಲದಲ್ಲಿ ಮಾನವೀಯತೆಯ ಆಧಾರದ ಮೇಲೆ ಚುನಾವಣೆ ನಡೆಯುತ್ತಿತ್ತು. ಮತದಾರರು ಅಭ್ಯರ್ಥಿಯ ಸಂಸ್ಕಾರ, ಸಂಸ್ಕೃತಿ, ನಡತೆ ನೋಡಿ ಮತ ಹಾಕುತ್ತಿದ್ದರು. ಆದರೆ ಈಗ ದುಡ್ಡೇ ದೊಡ್ಡಪ್ಪ. ಇದರ ಮುಂದೆ ಯಾವ ಸಂಸ್ಕಾರ, ಸಂಸ್ಕೃತಿ ಹಾಗೂ ನಿಷ್ಠೆಗೆ ಗೌರವ ಮತ್ತು ಬೆಲೆ ಇಲ್ಲ. ಕಾಲ ಬದಲಾದಂತೆ ಮತದಾರರೂ ಬದಲಾಗಿದ್ದಾರೆ. ಪಕ್ಷದ ತಣ್ತೀ-ಸಿದ್ಧಾಂತಗಳು ಸಹ ಬದಲಾಗಿವೆ.
Advertisement
ಇದು ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಶಾಸಕ ಎಂ.ಎಲ್.ಮುತ್ತೆಣ್ಣವರ ಅವರ ವಿಷಾದದ ಮಾತು. ಮೊದಲು ಜನತಾ ಪಕ್ಷದಲ್ಲಿದ್ದು ಅನಂತರ ಬಿಜೆಪಿ ನಾಯಕರಾಗಿ ಗುರುತಿಸಿಕೊಂಡಿದ್ದಲ್ಲದೆ ಗೋಕಾಕ ಕ್ಷೇತ್ರದಿಂದ ಆರು ಬಾರಿ ಚುನಾವಣೆ ಎದುರಿಸಿ ಸತತ ಎರಡು ಬಾರಿ ಶಾಸಕರಾಗಿದ್ದ ಮುತ್ತೆಣ್ಣವರ ಈಗಿನ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಮಾತನಾಡಲು ಬಹಳ ಆಲೋಚನೆ ಮಾಡುತ್ತಾರೆ.
Related Articles
Advertisement
ವಿಶೇಷವೆಂದರೆ ಆಗ ಪ್ರತೀ ಊರಲ್ಲಿ ಜನರು ಮರ್ಯಾದೆ ಕೊಡುತ್ತಿದ್ದರು. ಪ್ರಚಾರದಲ್ಲಿ ಯಾವುದೇ ಟೀಕೆ ಅಥವಾ ಆರೋಪಗಳನ್ನು ಮಾಡುತ್ತಿರಲಿಲ್ಲ. ಅದು ಚುನಾವಣೆಯ ವಿಷಯವೂ ಆಗಿರಲಿಲ್ಲ. ಜನರ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ನೀಡುವುದು ನಮ್ಮ ಪ್ರಚಾರದ ವಿಷಯಗಳಾಗಿದ್ದವು. ಎರಡು ಬಾರಿ ಶಾಸಕರಾಗಿ 33 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಗುಡ್ಡದ ಮೇಲಿನ 17 ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದನ್ನು ಜನರು ಈಗಲೂ ಮರೆತಿಲ್ಲ. ಮತದಾರರು ಆಗ ನಾವು ಮಾಡಿದ ಕೆಲಸ, ವ್ಯಕ್ತಿಯ ನಡತೆ, ಒಳ್ಳೆಯ ಗುಣಗಳನ್ನು ನೋಡಿ ಲೆಕ್ಕ ಹಾಕುತ್ತಿದ್ದರು.
ಇನ್ನು ಕಾರ್ಯಕರ್ತರ ಪಡೆ ನಿಜಕ್ಕೂ ಅದ್ಭುತ. ಪ್ರತಿ ಯೊಬ್ಬರೂ ತಮ್ಮದೇ ಚುನಾವಣೆ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. 1985ರ ಚುನಾವಣೆ ಯಲ್ಲಿ ನನ್ನ ಚುನಾವಣ ವೆಚ್ಚ 1.5 ಲಕ್ಷದ ಗಡಿ ದಾಟಿರಲಿಲ್ಲ. ಆದರೆ ವಿಪಕ್ಷದವರು ಆಗಲೇ 32 ಲಕ್ಷ ರೂ. ಖರ್ಚು ಮಾಡಿದ್ದರು. ನನ್ನನ್ನು ಸೋಲಿಸಬೇಕು ಎಂದು ಆಗ ಕಾಂಗ್ರೆಸ್ ನಾಯಕ ರಾಜೀವ ಗಾಂಧಿ ಗೋಕಾಕಕ್ಕೆ ಬಂದು ತಮ್ಮ ಅಭ್ಯರ್ಥಿ ರಮೇಶ್‌ಜಾರಕಿಹೊಳಿ ಪರ ಪ್ರಚಾರ ಮಾಡಿದ್ದರು. ಆಗ ನನ್ನ ಬಳಿ ಒಂದು ಗಾಡಿಯೂ ಇರಲಿಲ್ಲ. ಪಕ್ಷದ ಕಚೇರಿ ತೆರೆಯಲು ವಿರೋಧಿಗಳು ಬಿಡಲಿಲ್ಲ. ಮನೆಯಲ್ಲೇ ಕಚೇರಿ ತೆರೆದೆ. ಅದರ ಮೂಲಕವೇ ಚುನಾವಣೆ ಮಾಡಿದೆ. ಸುಮಾರು ಆರು ಸಾವಿರ ಮತಗಳ ಅಂತರದಿಂದ ಗೆದ್ದು ಬಂದೆ.
ಈಗ ಚುನಾವಣೆಯ ದಿಕ್ಕೇ ಬದಲಾಗಿದೆ. ಒಂದು ಕ್ಷೇತ್ರದಲ್ಲಿ ಕನಿಷ್ಠ 25ರಿಂದ 30 ಕೋಟಿ ಖರ್ಚು ಮಾಡಬೇಕು. ದುಡ್ಡಿದ್ದವರಿಗೆ ಮರ್ಯಾದೆ, ಗೌರವ. ನಿಷ್ಠೆ, ತಣ್ತೀ, ಸಿದ್ಧಾಂತಗಳಿಗೆ ಪ್ರಾಧಾನ್ಯ ಕಡಿಮೆಯಾಗಿದೆ. ಮುಖ್ಯವಾಗಿ ಹೈಕಮಾಂಡ್ ಸಹ ಅದೇ ರೀತಿ ನಡೆದುಕೊಳ್ಳುತ್ತಿದೆ. ದುಡ್ಡು ಇದ್ದವರಿಗೆ ಕಣ್ಣುಮುಚ್ಚಿ ಮಣೆ ಹಾಕುತ್ತಿದೆ. ಅಂತಹ ಸಾಮರ್ಥ್ಯ ನಮ್ಮಲ್ಲಿ ಇಲ್ಲ. ಹೀಗಾಗಿ ಚುನಾವಣೆಯಿಂದ ದೂರ ಉಳಿದಿದ್ದೇವೆ.
-ಕೇಶವ ಆದಿ