ಕೊಪ್ಪಳ: ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕೇವಲ ನಾಲ್ಕೇ ದಿನದಲ್ಲಿ 14 ಟಿಎಂಸಿ ಅಡಿ ನೀರು ಹರಿದು ಬಂದಿದ್ದು, ಡ್ಯಾಂನ ಒಳ ಹರಿವಿನಲ್ಲಿ 1,02,444 ಕ್ಯೂಸೆಕ್‌ನಷ್ಟು ಹೆಚ್ಚಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರದಲ್ಲಿ ಖುಷಿ ತಂದಿದ್ದು, ಭತ್ತ ನಾಟಿಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಕಾಲುವೆಗಳಿಗೆ ನೀರನ್ನೂ ಹರಿ ಬಿಡಲಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ನೀರಿನ ಭೋರ್ಗರೆತ ಹೆಚ್ಚಾಗಿದೆ. ವಿವಿಧ ಜಲಾಶಯಗಳಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿ ಬಿಡಲಾಗುತ್ತಿದೆ. ತುಂಗಭದ್ರಾ ಡ್ಯಾಂನ ಅಧೀನದ ತುಂಗಾ ಮತ್ತು ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹವೂ ಹೆಚ್ಚಾಗಿದೆ. ಇನ್ನೂ ಶಿವಮೊಗ್ಗ ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ಡ್ಯಾಂನಿಂದ ನೀರು ಹರಿ ಬಿಡಲಾಗುತ್ತಿದ್ದು, ತುಂಗಭದ್ರಾ ಡ್ಯಾಂಗೆ ಬುಧವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ತುಂಗಭದ್ರಾ ಜಲಾಶಯ 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಜಲಾಶಯದ ಒಡಲಲ್ಲಿ 33 ಟಿಎಂಸಿ ಅಡಿ ಹೂಳು ತುಂಬಿಕೊಂಡಿದ್ದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಪ್ರಸ್ತುತ 100 ಟಿಎಂಸಿ ಅಡಿಗೆ ಬಂದು ತಲುಪಿದೆ. ಕಳೆದ ಕೆಲವು ವರ್ಷದಿಂದ ರಾಜ್ಯದಲ್ಲಿ ಮಳೆಯ ಅಭಾವದಿಂದ ಡ್ಯಾಂನಲ್ಲೂ ನೀರು ಸಂಗ್ರಹಣೆ ಕಡಿಮೆಯಾಗಿತ್ತು. ಆದರೆ ಕಳೆದ ವರ್ಷ ಕರಾವಳಿ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಆಗಸ್ಟ್ ಮೊದಲ ವಾರದಲ್ಲೇ ತುಂಗಭದ್ರಾ ಜಲಾಶಯ ಭರ್ತಿಯಾಗಿ ಹರಿದಿತ್ತು. ಒಂದು ಡ್ಯಾಂನಷ್ಟು ನೀರನ್ನು ನದಿ ಪಾತ್ರಗಳಿಗೆ ಹರಿದು ಬಿಡಲಾಗಿತ್ತು. ಅಷ್ಟಾದರೂ ಎರಡನೇ ಬೆಳೆಗೆ ಕಳೆದ ವರ್ಷ ನೀರು ಕೊನೆಯ ಹಂತಕ್ಕೆ ಹರಿಸಲಾಗಲಿಲ್ಲ. ಇದರಿಂದ ರೈತರಲ್ಲಿ ಭಾರಿ ನಿರಾಶೆ ಮೂಡಿಸಿದ್ದಲ್ಲದೇ ನೀರು ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗುಡುಗಿದ್ದರು.
ಪ್ರಸಕ್ತ ವರ್ಷವೂ ರೈತರು ರಾಜ್ಯದೆಲ್ಲೆಡೆ ಮಳೆಯಬ್ಬರ ನೋಡಿ ತುಂಗಭದ್ರಾ ಡ್ಯಾಂ ಈ ಭಾರಿ ಭರ್ತಿಯಾಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಅವರ ನಿರೀಕ್ಷೆಯಂತೆ ಕೇವಲ ನಾಲ್ಕೇ ದಿನದಲ್ಲಿ ಜಲಾಶಯಕ್ಕೆ ಬರೊಬ್ಬರಿ 14 ಟಿಎಂಸಿ ಅಡಿ ನೀರು ಹರಿದು ಬಂದಿದ್ದು ಅಚ್ಚುಕಟ್ಟು ಪ್ರದೇಶದ ರೈತರಿಗೆ ಖುಷಿಯ ಭಾವನೆ ಮತ್ತಷ್ಟು ಇಮ್ಮಡಿಗೊಂಡಿದೆ. ಆಗಸ್ಟ್ 5ರಂದು ಡ್ಯಾಂನಲ್ಲಿ 34 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ, ಒಳ ಹರಿವು 16,736 ಕ್ಯೂಸೆಕ್‌ನಷ್ಟಿತ್ತು. ಆ.6ರಂದು 36 ಟಿಎಂಸಿ ಅಡಿಯಷ್ಟಿದ್ದರೆ, ಒಳ ಹರಿವು 23,052 ಕ್ಯೂಸೆಕ್‌ನಷ್ಟಿತ್ತು. ಇನ್ನೂ ಆ.7ರಂದು ಡ್ಯಾಂನಲ್ಲಿ 40 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಒಳ ಹರಿವು 40,781 ಕ್ಯೂಸೆಕ್‌ನಷ್ಟಿತ್ತು. ಗುರುವಾರ ಡ್ಯಾಂನಲ್ಲಿ 48 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ, ಒಳ ಹರಿವಿನಲ್ಲಿ 1,02,444 ಕ್ಯೂಸೆಕ್‌ನಷ್ಟು ಹೆಚ್ಚಾಗಿದೆ. ಸಂಜೆಯ ವೇಳೆ ಡ್ಯಾಂನ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಾಗಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಚ್ಚುಕಟ್ಟು ರೈತರಿಗೆ ಖುಷಿಯೋ ಖುಷಿ: ತುಂಗಭದ್ರಾ ಡ್ಯಾಂ ನೀರು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಹರಿಯಲಿದ್ದು, ಲಕ್ಷಾಂತರ ರೈತರು ಇದೇ ನೀರನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ವರ್ಷದಂತೆ ಈ ವರ್ಷ ಡ್ಯಾಂ ಭರ್ತಿಯಾಗಲಿ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದು, ಡ್ಯಾಂನ ನೀರು ನಿರ್ವಹಣೆ ಸರಿಯಾಗಿ ನಡೆಯಲಿ ಎಂದು ಒತ್ತಾಯ ಮಾಡಿದ್ದಾರೆ.
ಕಾಲುವೆಗೆ ನೀರು ಬಿಡುಗಡೆ: ತುಂಗಭದ್ರಾ ಡ್ಯಾಂನಲ್ಲಿ ವಾಡಿಕೆಯಂತೆ 48 ಟಿಎಂಸಿ ಅಡಿ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ರೈತರ ಮೊದಲ ಬೆಳೆಗೆ ನೀರು ಪೂರೈಸಬೇಕಾದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಡ್ಯಾಂಗೆ ಪೂಜೆ ಸಲ್ಲಿಸಿ ನೀರು ಹರಿಸಿದ್ದರು. ಜೊತೆಗೆ ಗುರುವಾರ ಡ್ಯಾಂಗೆ ಮತ್ತೆ ಪೂಜೆ ಸಲ್ಲಿಸುವ ಮೂಲಕ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕಾಲುವೆಗೆ ನೀರು ಹರಿಸಿದರು.
•ದತ್ತು ಕಮ್ಮಾರ