Advertisement

ಐದೇ ವರ್ಷದಲ್ಲಿ ರಾಜ್ಯದಲ್ಲಿ ಡಬಲ್‌ ಪ್ರಮಾಣದಲ್ಲಿ ಚುನಾವಣಾ ಅಕ್ರಮ ಪತ್ತೆ

08:24 PM Mar 27, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಡಬಲ್‌ ಪ್ರಮಾಣದಲ್ಲಿ ಚುನಾವಣಾ ಅಕ್ರಮ ಪತ್ತೆಯಾಗಿದೆ.

Advertisement

2019ರ ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದ ನಾಮಪತ್ರ ಸಲ್ಲಿಕೆಯ ಆರಂಭದವರೆಗೆ 26.54 ಕೋಟಿ ರೂ. ಚುನಾವಣಾ ಅಕ್ರಮ ಪತ್ತೆಯಾಗಿದ್ದರೆ ಈ ಸಲ ಇದೇ ಅವಧಿಯಲ್ಲಿ 55.76 ಕೋಟಿ ರೂ. ಮೌಲ್ಯದ ಚುನಾವಣಾ ಅಕ್ರಮ ಪತ್ತೆಯಾಗಿದೆ. ಈ ಹಿಂದಿನ ಲೋಕಸಭಾ ಚುನಾವಣೆಗಿಂತ ಶೇ.110ರಷ್ಟು ಹೆಚ್ಚು ಅಕ್ರಮ ವರದಿ ಆದಂತಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆ ಭಾರೀ ಬಿರುಸಿನ ಪೈಪೋಟಿಯಿಂದ ಕೂಡಿರಲಿದೆ ಎಂದು ರಾಜಕೀಯ ಪಂಡಿತರು ಈಗಾಗಲೇ ಭವಿಷ್ಯ ನುಡಿದಿದ್ದು ಪತ್ತೆಯಾಗುತ್ತಿರುವ ಅಕ್ರಮದ ಪ್ರಮಾಣ ಈ ಹೇಳಿಕೆಯನ್ನು ಪುಷ್ಟಿಕರಿಸುವಂತಿದೆ.

ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಚಿನ್ನ ಜಪ್ತಿ ಮಾಡಲಾಗಿದೆ. ಉಚಿತ ಕೊಡುಗೆಗಳು, ನಗದಿನ ಜಪ್ತಿ ಪ್ರಮಾಣವು ಹೆಚ್ಚಿದೆ.

ಕಳೆದ 24 ಗಂಟೆಯಲ್ಲಿ 7.20 ಕೋಟಿ ರೂ. ಅಕ್ರಮ ಪತ್ತೆ:
ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸುವ ತಂಡಗಳು 7.20 ಕೋಟಿ ರೂ. ಮೌಲ್ಯದ ಚುನಾವಣಾ ಅಕ್ರಮವನ್ನು ಪತ್ತೆ ಹಚ್ಚಿವೆ.

Advertisement

1.30 ಕೋಟಿ ರೂ ನಗದು, 19.44 ಲಕ್ಷ ಉಚಿತ ಉಡುಗೊರೆಗಳು, 1.27 ಕೋಟಿ ರೂ ಮೌಲ್ಯದ 53,265 ಲೀಟರ್‌ ಮದ್ಯ, 4.96 ಲಕ್ಷ ರೂ ಮೌಲ್ಯದ 15.22 ಕೆಜಿ ಮಾದಕ ವಸ್ತು, 4.19 ಕೋಟಿ ರೂ ಮೌಲ್ಯದ 7.66 ಕೆಜಿ ಚಿನ್ನ, 2.47 ಲಕ್ಷ ಮೌಲ್ಯದ 1.87 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.

ಈವರೆಗೆ ಒಟ್ಟು 847 ಎಫ್ಐಆರ್‌ ದಾಖಲಿಸಲಾಗಿದೆ. 92,664 ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಲಾಗಿದೆ. ಅಬಕಾರಿ ಇಲಾಖೆ 848 ಗಂಭೀರ ಪ್ರಕರಣಗಳನ್ನು ದಾಖಲಿಸಿದೆ.

4.21 ಕೋಟಿ ರೂ. ಚಿನ್ನಾಭರಣ ವಶಕ್ಕೆ:
ಹಾಸನದ ಶ್ರವಣಬೆಳಗೊಳದ ಚೆಕ್‌ಪೋಸ್ಟ್‌ನಲ್ಲಿ 56.89 ಲಕ್ಷ ರೂ ನಗದು, ಚಿತ್ರದುರ್ಗದ ಪಿಳ್ಳೆಕೆರನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ 20.35 ಲಕ್ಷ ರೂ ನಗದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ತರೀಕೆರೆಯ ಎಂಸಿ ಹಳ್ಳಿ ಚೆಕ್‌ ಪೋಸ್ಟ್‌ನಲ್ಲಿ 4.21 ಕೋಟಿ ರೂ ಮೌಲ್ಯದ ಚಿನ್ನ, ಬೆಳ್ಳಿ, ವಜ್ರವನ್ನು ವಶಕ್ಕೆ ಪಡೆಯಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next