ಹೊಸದಿಲ್ಲಿ: ಭಾರತದ “ರಕ್ಷಣ ರಫ್ತು’ ಯೋಜನೆಯಲ್ಲಿ ಮಹತ್ವದ ಬೆಳವಣಿಗೆ ಎಂಬಂತೆ, ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಲು ಫಿಲಿಪ್ಪೀನ್ಸ್ ಮುಂದೆ ಬಂದಿದೆ. ಫಿಲಿಪ್ಪೀನ್ಸ್ ನೌಕಾಪಡೆಗೆ ನೌಕಾ ನಿಗ್ರಹ ಕ್ಷಿಪಣಿ ವ್ಯವಸ್ಥೆಯನ್ನು ಪೂರೈಕೆ ಮಾಡುವಂಥ 2,770 ಕೋಟಿ ರೂ.ಗಳ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಚೀನ ಸಮುದ್ರದಲ್ಲಿ ಚೀನವು ಪದೇ ಪದೆ ಫಿಲಿಪ್ಪೀನ್ಸ್ ಜತೆ ಕಾಲುಕೆರೆದುಕೊಂಡು ಬರುತ್ತಿರುವ ಸಂದರ್ಭದಲ್ಲೇ ಈ ಪುಟ್ಟ ದ್ವೀಪರಾಷ್ಟ್ರವು ತನ್ನ ಭೂಪ್ರದೇಶದ ರಕ್ಷಣೆಗಾಗಿ ಭಾರತದಿಂದ ಬ್ರಹ್ಮೋಸ್ ಖರೀದಿಗೆ ನಿರ್ಧರಿಸಿದೆ.
ಇನ್ನೊಂದೆಡೆ, ಭಾರತ ಕೂಡ ಇಂಡೋಪೆಸಿಫಿಕ್‌ನಲ್ಲಿ ಚೀನದ ಆಕ್ರಮಣಕಾರಿ ನೀತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆಸಿಯಾನ್ ದೇಶಗಳೊಂದಿಗೆ ಸೇನಾ ಸಂಬಂಧವನ್ನು ಬಲಪಡಿಸುತ್ತಿದೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದು ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದ್ದು, ಅದನ್ನು ಜಲಾಂತರ್ಗಾಮಿಗಳು, ನೌಕೆಗಳು, ವಿಮಾನ ಅಥವಾ ಭೂಪ್ರದೇಶದಿಂದಲೂ ಉಡಾಯಿಸಬಹುದಾಗಿದೆ.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇವಲ 24,000 ಪ್ರೇಕ್ಷಕರಿಗೆ ಮಾತ್ರ ಅವಕಾಶ
ರಕ್ಷಣ ರಫ್ತಿಗೆ ಶಕ್ತಿ
-ಬ್ರಹ್ಮೋಸ್ ಸಿಕ್ಕಿರುವ ಆರ್ಡರ್ ಭಾರತದ ಮೊದಲ ಪ್ರಮುಖ ಸೇನಾ ರಫ್ತು ಪ್ರಕ್ರಿಯೆ ಆಗಲಿದೆ
-ವಿಯೆಟ್ನಾಂ, ಇಂಡೋನೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ಇನ್ನೂ ಹಲವು ದೇಶಗಳಿಂದ ಬ್ರಹ್ಮೋಸ್ ಖರೀದಿಗೆ ಆಸಕ್ತಿ
-ಈ ಕ್ಷಿಪಣಿ ವ್ಯವಸ್ಥೆ ಮಾರಾಟ ಕುರಿತು ಯುಎಇ ಸೇರಿದಂತೆ ನೆರೆಯ ಹಲವು ದೇಶ ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಭಾರತ