Advertisement
ಇದೇ ವೇಳೆ, ಯಾವುದೇ ರೀತಿಯಲ್ಲೂ ರಿಲಯನ್ಸ್ ಅನ್ನು ಫ್ರಾನ್ಸ್ ಆಯ್ಕೆ ಮಾಡಿಕೊಂಡಿಲ್ಲ ಎಂದು ಒಲಾಂದ್ ಶನಿವಾರ ಹೇಳಿದ್ದಾರೆ. ರಿಲಯನ್ಸ್ ಮತ್ತು ಡಸಾಲ್ಟ್ ಜಂಟಿಯಾಗಿ ಕಾರ್ಯನಿರ್ವಹಿಸುವಂತೆ ಭಾರತವೇ ಒತ್ತಡ ಹೇರಿತ್ತೇ ಎಂಬ ಪ್ರಶ್ನೆಗೆ, “ಈ ಬಗ್ಗೆ ಡಸಾಲ್ಟ್ ಮಾತ್ರವೇ ಹೇಳಿಕೆ ನೀಡಲು ಸಾಧ್ಯ’ ಎಂದಿದ್ದಾರೆ.
“ರಫೇಲ್ ಡೀಲ್ ವಿಚಾರದಲ್ಲಿ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಒಲಾಂದ್ ನಿಮ್ಮನ್ನು ಕಳ್ಳ ಅನ್ನುತ್ತಿದ್ದಾರೆ, ನೀವು ಏನು ಹೇಳುತ್ತೀರಿ?’ ಇದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಅವರಲ್ಲಿ ಕೇಳಿದ ಪ್ರಶ್ನೆ. ಒಲಾಂದ್ ಅವರು, ಭಾರತ ಸರ್ಕಾರ ರಿಲಯನ್ಸ್ ಬಿಟ್ಟರೆ ನಮಗೆ ಬೇರೆ ಆಯ್ಕೆಯನ್ನೇ ನೀಡಲಿಲ್ಲ ಎಂದಿದ್ದಾರೆ. ಈ ಮೂಲಕ ನಿಮ್ಮನ್ನು ಕಳ್ಳ ಎಂದು ಕರೆದಿದ್ದಾರೆ. ನೀವು ಇದನ್ನು ಒಪ್ಪಿಕೊಳ್ಳಿ ಅಥವಾ ಒಲಾಂದ್ ಸುಳ್ಳು ಹೇಳಿದ್ದಾರೆ, ಸತ್ಯವಾದ ವಿಚಾರ ಇದು ಎಂಬುದನ್ನು ಜನತೆಯ ಮುಂದಿಡಿ ಎಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಮೌನವೇಕೆ ಎಂದು ಪ್ರಶ್ನಿಸಿದ್ದಾರೆ. ಖಂಡಿತವಾಗಿಯೂ ಇದೊಂದು ಬಹುದೊಡ್ಡ ಭ್ರಷ್ಟಾಚಾರ. ಮೋದಿಯವರೇ ಭಾಗಿಯಾಗಿದ್ದಾರೆ. ಈ ಸಂಬಂಧ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸಬೇಕು, ಒಲಾಂದ್ ಅವರನ್ನೂ ಕರೆಸಬೇಕು ಎಂದು ಆಗ್ರಹಿಸಿದರು. ಬೆಳಗ್ಗೆಯೇ ಟ್ವೀಟ್ ಮೂಲಕ ಸಮರ ಸಾರಿದ್ದ ಅವರು, ಇದು ಮೋದಿ ಮತ್ತು ಅಂಬಾನಿ ಸೇರಿ ರಕ್ಷಣಾ ಪಡೆಗಳ ಮೇಲೆ ನಡೆಸಿದ 1.30 ಲಕ್ಷ ಕೋಟಿ ರೂ.ಗಳ ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಿದ್ದರು. ಮೋದಿ ಅವರು ಭಾರತೀಯ ಯೋಧರ ರಕ್ತಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ರಾಹುಲ್ ಚೀನಾ, ಪಾಕ್‌ನ ಏಜೆಂಟ್
ಪ್ರಧಾನಿ ಮೋದಿ ವಿರುದ್ಧದ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಒಬ್ಬ ಪ್ರಧಾನಿ ವಿರುದ್ಧ ಎಂಥಾ ಭಾಷೆ ಬಳಕೆ ಮಾಡಬೇಕು ಎಂಬುದೇ ಅವರಿಗೆ ಗೊತ್ತಿಲ್ಲ. ಚೀನಾ ಮತ್ತು ಪಾಕ್‌ನ ಏಜೆಂಟ್‌ರಂತೆ ವರ್ತಿಸುತ್ತಿರುವ ರಾಹುಲ್, ರಫೇಲ್ ಕುರಿತ ವಿವರ ಬಹಿರಂಗಗೊಳಿಸು ವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ತಪ್ಪು ಮಾಹಿತಿಯುಳ್ಳ ವ್ಯಕ್ತಿಯ ಅಹಂಕಾರ ತಣಿಸಲು ಜಂಟಿ ಸಂಸದೀಯ ಸಮಿತಿ ರಚನೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಯುಪಿಎ ಸರ್ಕಾರ ಡೀಲ್ ಅನ್ನು ಅಂತಿಮಗೊಳಿಸದೇ ಇರಲು “ಲಂಚದ ವಿಷಯ’ವೇ ಕಾರಣ. ಜತೆಗೆ, ರಿಲಯನ್ಸ್ ಮತ್ತು ಡಸಾಲ್ಟ್ 2012ರಲ್ಲೇ ಒಪ್ಪಂದ ಮಾಡಿಕೊಂಡಿದ್ದವು ಎಂದೂ ತಿಳಿಸಿದ್ದಾರೆ.
Related Articles
ಫ್ರಾನ್ಸ್ ಸರ್ಕಾರದಂತೆಯೇ, ಡಸ್ಸಾಲ್ಟ್ ಏವಿಯೇಶನ್ ಕೂಡ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಸಂಸ್ಥೆ ನಮ್ಮ ಆಯ್ಕೆಯಾಗಿತ್ತು ಎಂದು ಹೇಳುವ ಮೂಲಕ ಒಲಾಂದ್ ಅವರ ಹೇಳಿಕೆಯನ್ನು ತಳ್ಳಿಹಾಕಿದೆ. 2016ರ ರಕ್ಷಣಾ ಖರೀದಿ ನಿಯಮಗಳಂತೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತದ ಮೇಕ್ ಇನ್ ಇಂಡಿಯಾ ನೀತಿಗೆ ಒಳಪಟ್ಟಂತೆ ಡಸ್ಸಾಲ್ಟ್ ಏವಿಯೇಶನ್ ರಿಲಯನ್ಸ್ ಯನ್ನೇ ಆರಿಸಿಕೊಂಡಿತು. ಇದು ಖಂಡಿತವಾಗಿಯೂ ನಮ್ಮದೇ ಆಯ್ಕೆ ಎಂದು ಕಂಪನಿ ಹೇಳಿದೆ. ಅಲ್ಲದೆ ನಮಗೆ ರಿಲಯನ್ಸ್ ಒಂದೇ ಆಯ್ಕೆಯಾಗಿರಲಿಲ್ಲ. ಬದಲಾಗಿ, ಬಿಟಿಎಸ್‌ಎಲ್, ಡಿಇಎಫ್ಎಸ್‌ವೈಎಸ್, ಕೈನೆಟಿಕ್, ಮಹೀಂದ್ರಾ, ಮೈನಿ ಮತ್ತು ಸ್ಯಾಮ್‌ಟೆಲ್ ಕೂಡ ಇದ್ದವು. ಅಲ್ಲದೆ ಇನ್ನೂ 100 ಕಂಪನಿಗಳ ಜತೆ ನಾವು ಮಾತುಕತೆ ನಡೆಸಿದ್ದೆವು ಎಂದು ಹೇಳಿದೆ.
Advertisement
ಸರ್ಕಾರದ ಪಾತ್ರ ವಿಲ್ಲ: ಕೇಂದ್ರ ಸ್ಪಷ್ಟನೆಭಾರತದಲ್ಲಿ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆರಿಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ಯಾವುದೇ ಪಾತ್ರ ವಹಿಸಿರಲಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಅದು ಡಸ್ಸಾಲ್ಟ್ ಕಂಪನಿಯ ಆಯ್ಕೆಯಾಗಿದೆ, ಈ ಬಗ್ಗೆ ಅನಾವಶ್ಯಕ ವಿವಾದ ಎಬ್ಬಿಸಲಾಗುತ್ತಿದೆ ಎಂದು ಸರ್ಕಾರವೇ ಅಧಿಕೃತವಾಗಿ ಹೇಳಿದೆ. ಈ ಮಧ್ಯೆ ಸಚಿವ ಪ್ರಕಾಶ್ ಜಾವಡೇಕರ್, ಫ್ರಾನ್ಸ್ ಸರ್ಕಾರ ಮತ್ತು ಡಸ್ಸಾಲ್ಟ್ ಏವಿಯೇಶನ್‌ನ ಸ್ಪಷ್ಟನೆಗಳನ್ನು ಟ್ವೀಟ್ ಮಾಡಿ, ಸಾಕ್ಷಿ ಸಾಕೇ ಎಂದು ರಾಹುಲ್‌ಗೆ ಕೇಳಿದ್ದಾರೆ. ಫ್ರಾನ್ಸ್ ಸರ್ಕಾರ ಹೇಳಿದ್ದೇನು?
ರಫೇಲ್ ಡೀಲ್ ವಿಚಾರದಲ್ಲಿ ಭಾರತದ ಕಂಪನಿಗಳನ್ನು ಆರಿಸಿಕೊಳ್ಳಲು ಫ್ರಾನ್ಸ್‌ನ ಕಂಪನಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಭಾರತದ ಸ್ವಾಧೀನ ಪ್ರಕ್ರಿಯೆಯ ನಿಯಮದಂತೆ ಫ್ರಾನ್ಸ್ ಕಂಪನಿಗಳಿಗೆ ತಮಗೆ ಬೇಕಾದ ಕಂಪನಿಗಳನ್ನು ಆರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ನಂತರ ಭಾರತ ಸರ್ಕಾರ ಒಪ್ಪಂದಕ್ಕೆ ಒಪ್ಪಿದ ಬಳಿಕ, ಫ್ರಾನ್ಸ್‌ನ ಕಂಪನಿಗಳು ಭಾರತದ ಕಂಪನಿ ಜತೆಗೂಡಿ ಬೇಕಾದ ಬೇಡಿಕೆಯನ್ನು ಪೂರೈಸುತ್ತವೆ ಎಂದಿದೆ. ಈ ಬಗ್ಗೆ ಒಲಾಂದ್ ಅವರು ಹೇಳಿಕೆ ಹೊರಡಿಸಿದ ಬೆನ್ನಲ್ಲೇ ಫ್ರಾನ್ಸ್ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಫ್ರಾನ್ಸ್ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಸ್ಪಷ್ಟನೆ ಪ್ರಕಟಗೊಂಡಿದೆ.