Advertisement
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದ.ಕ. ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಆದ ಒಟ್ಟು 35,972 ಹೆರಿಗೆಗಳ ಪೈಕಿ 12,960 ಸಿಸೇರಿಯನ್ ಆಗಿದೆ. ಬಹುತೇಕ ಹೆತ್ತವರು ಸಹಜ ಹೆರಿಗೆಯನ್ನೇ ಇಷ್ಟಪಡುತ್ತಾರೆ. ಆದರೆ ಅಧಿಕ ಅಪಾಯ, ಅಧಿಕ ರಕ್ತದೊತ್ತಡ, ಹೆರಿಗೆ ಸಂದರ್ಭ, ಇತರ ಅನಾರೋಗ್ಯದ ಕಾರಣಗಳಿಂದಾಗಿ ತಾಯಿ, ಮಗುವಿನ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸಿಸೇರಿಯನ್ ಮಾಡಬೇಕು ಎನ್ನುವುದು ವೈದ್ಯರ ಮಾತು.
ಆರು ವರ್ಷಗಳ ಅವಧಿಯಲ್ಲಿ ಆಗಿರುವ ಒಟ್ಟು 1,78,909 ಹೆರಿಗೆಗಳ ಪೈಕಿ 55,443 ಸಿಸೇರಿಯನ್ ಹೆರಿಗೆಗಳಾಗಿವೆ. ಇದರಲ್ಲೂ 2018-19ನೇ ಸಾಲಿನಲ್ಲಿ ಈ ವರ್ಷಗಳಲ್ಲೇ ಅತ್ಯಧಿಕ ಸಿಸೇರಿಯನ್ ಹೆರಿಗೆ ಆಗಿದೆ. 2013-14ರಲ್ಲಿ ಒಟ್ಟು 27,860 ಹೆರಿಗೆಗಳ ಪೈಕಿ 7,459 ಸಿಸೇರಿಯನ್, 2014-15ರಲ್ಲಿ 27,398 ಹೆರಿಗೆ ಪೈಕಿ 7,393 ಸಿಸೇರಿಯನ್, 2015-16ರಲ್ಲಿ 27,120ರಲ್ಲಿ 7,207 ಸಿಸೇರಿಯನ್, 2,017-18ರಲ್ಲಿ 33,167ರಲ್ಲಿ 11,588 ಸಿಸೇರಿಯನ್ ಹೆರಿಗೆ ಉಂಟಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ರಾಜೇಶ್ ಮಾಹಿತಿ ನೀಡಿದ್ದಾರೆ. ಸಂಖ್ಯೆಗಳು ಸಹಜ ಹೆರಿಗೆಗಿಂತ ಕಡಿಮೆ ಇದ್ದರೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡಿಸಿಕೊಳ್ಳುವುದು ಉತ್ತಮವಲ್ಲ ಎಂಬುದು ಸಾರ್ವಜನಿಕವಾಗಿ ಕೇಳಿ ಬರುವ ಮಾತು.
Related Articles
ಜಿಲ್ಲೆಯಲ್ಲಿ 2013-14ರಲ್ಲಿ ಶೇ.26.77ರಷ್ಟಿದ್ದ ಸಿಸೇರಿಯನ್ ಹೆರಿಗೆ ಪ್ರಮಾಣ 2018-19ರಲ್ಲಿ ಶೇ.36ಕ್ಕೇರಿದೆ. ನಗರದ ಸರಕಾರಿ ಲೇಡಿಗೋಶನ್‌ನಲ್ಲಿ ವಾರ್ಷಿಕ ಅಂದಾಜು 6 ಸಾವಿರ ಹೆರಿಗೆಗಳಾಗುತ್ತಿದ್ದು, ಈ ಪೈಕಿ ಶೇ. 46ರಷ್ಟು ಸಿಸೇರಿಯನ್ ಹೆರಿಗೆಯಾಗುತ್ತಿವೆ. ದ.ಕ. ಮಾತ್ರವಲ್ಲದೆ, ಉಡುಪಿ, ಹೊನ್ನಾವರ, ಉತ್ತರ ಕನ್ನಡ, ಚಿತ್ರದುರ್ಗ, ಮಡಿಕೇರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಭಾಗಗಳಿಂದಲೂ ಹೈ ರಿಸ್ಕ್ ಪ್ರಕರಣಗಳು ಲೇಡಿಗೋಶನ್ ಆಸ್ಪತ್ರೆಗೆ ಬರುತ್ತಿರುವುದರಿಂದ ಸಿಸೇರಿಯನ್ ಹೆರಿಗೆಯನ್ನೇ ಮಾಡಿಸಬೇಕಾದ ಅನಿವಾರ್ಯವಿದೆ. ಅಧಿಕ ರಕ್ತದೊತ್ತಡ, ಕನ್ವರ್ಷನ್ (ಫಿಟ್ಸ್ ಮಾದರಿಯಲ್ಲಿ) ಮತ್ತು ಇತರ ಅಧಿಕ ಅಪಾಯದ ಸಂಭವಗಳಿದ್ದಾಗ ಸಹಜ ಹೆರಿಗೆಗೆ ಕಾಯಲಾಗುವುದಿಲ್ಲ. ಸಿಸೇರಿಯನ್ ಮೂಲಕ ಮಗುವನ್ನು ಹೊರ ತೆಗೆಯುವುದೇ ಅದಕ್ಕಿರುವ ಪರಿಹಾರ ಎನ್ನುತ್ತಾರೆ ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷರು.
Advertisement
ಸಾಮಾನ್ಯ ಹೆರಿಗೆ ಹಿತಕರಮಗು ಅಧಿಕ ತೂಕ ಹೊಂದಿದ್ದರೆ ಸಾಮಾನ್ಯ ಹೆರಿಗೆ ಕಷ್ಟವಾಗುತ್ತದೆ. ಗರ್ಭದಲ್ಲಿ ಮಗು ತಲೆ ಕೆಳಗಾಗಿದ್ದರೆ ಅಥವಾ ಇನ್ನಿತರ ಸ್ಥಿತಿಯಲ್ಲಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯ. ಗರ್ಭಿಣಿ ತೂಕದಲ್ಲಿ ಕಡಿಮೆಯಾದರೆ, 7-8ನೇ ತಿಂಗಳಲ್ಲಿ ಗರ್ಭದಲ್ಲಿ ಸಮಸ್ಯೆ ಉಂಟಾದರೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆಯಬೇಕಾಗುತ್ತದೆ. ಆದರೆ ಇಂತಹ ಅನಿವಾರ್ಯಗಳನ್ನು ಹೊರತುಪಡಿಸಿ ಫ್ಯಾನ್ಸಿ ಜನ್ಮ ದಿನಾಂಕದ ಮೋಹಕ್ಕೊಳಗಾಗಿಯೋ, ನೋವು ಇಲ್ಲ ಎಂಬ ಕಾರಣಕ್ಕಾಗಿಯೋ ಶಸ್ತ್ರಚಿಕಿತ್ಸೆಯ ಮೊರೆ ಹೋಗುವುದು ಹಿತವಲ್ಲ ಎನ್ನುತ್ತದೆ ವೈದ್ಯಲೋಕ. ಗಾಯ ಬೇಗ ವಾಸಿಯಾಗದೇ ಇರುವುದು, ತಿಂಗಳುಗಟ್ಟಲೆ ವಿಶ್ರಾಂತಿ, ಸೊಂಟ ನೋವು ಮುಂತಾದವು ಸಿಸೇರಿಯನ್ ಹೆರಿಗೆಯ ಅನಂತರದಲ್ಲಿ ಕಾಣಿಸಿಕೊಳ್ಳುವ ಸಂಭವ ಜಾಸ್ತಿಯಿದೆ ಎನ್ನುವುದು ವೈದ್ಯರ ಮಾತು. ಅನಿವಾರ್ಯCesarean
ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲ ಹೈ ರಿಸ್ಕ್ ಪ್ರಕರಣಗಳೇ ಬರುವುದರಿಂದ ಪ್ರತಿ ವರ್ಷ ಅಂದಾಜು ಶೇ. 46ರಷ್ಟು ಸಿಸೇರಿಯನ್ ಹೆರಿಗೆಯಾಗುತ್ತದೆ. ಅಧಿಕ ರಕ್ತದೊತ್ತಡ, ಕನ್ವರ್ಷನ್, ಅವಧಿಪೂರ್ವ ಶಿಶು ಜನನ ಮುಂತಾದವು ಸಹಜ ಹೆರಿಗೆಗೆ ಅಡ್ಡಿಯಾಗುತ್ತದೆ. ಅಂತಹ ಪ್ರಕರಣಗಳನ್ನು ಮಗು ಮತ್ತು ತಾಯಿಯ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಸಿಸೇರಿಯನ್ ಮೂಲಕ ಮಗುವನ್ನು ಹೊರ ತೆಗೆಯಲಾಗುತ್ತದೆ.
– ಡಾ| ಸವಿತಾ, ಅಧೀಕ್ಷಕಿ, ಸರಕಾರಿ ಲೇಡಿಗೋಶನ್ ಆಸ್ಪತ್ರೆ – ಧನ್ಯಾ ಬಾಳೆಕಜೆ