Advertisement

ಕೋವಿಡ್ ಗೆ ಈ ಆಯುರ್ವೇದ ಮದ್ದು ರಾಮಬಾಣ, ನೆಲ್ಲೂರಿನಲ್ಲಿ ಉಚಿತ ಔಷಧಕ್ಕೆ ಮುಗಿಬಿದ್ದ ಜನರು!

02:45 PM May 21, 2021 | Team Udayavani |

ನೆಲ್ಲೂರು(ಆಂಧ್ರಪ್ರದೇಶ): ಕೋವಿಡ್ 19 ಸೋಂಕು ಗುಣಪಡಿಸಲು ಇಡೀ ಜಗತ್ತು ಆಧುನಿಕ ಔಷಧಿಯ ಮೂಲಕ ಪರಿಹಾರ ಕಂಡುಹಿಡಿಯಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುತ್ತಮುತ್ತಲಿನ ಸಾವಿರಾರು ಜನರು ಆಯುರ್ವೇದ ಔಷಧಕ್ಕೆ ಆದ್ಯತೆ ನೀಡಿದ್ದು,  50 ಸಾವಿರಕ್ಕೂ ಅಧಿಕ ಜನರು ಔಷಧಕ್ಕಾಗಿ ಮುಗಿಬೀಳುತ್ತಿರುವ  ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.

Advertisement

ಇದನ್ನೂ ಓದಿ:ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿ ನೇತಾರ ಸುಂದರ್ ಲಾಲ್ ಕೋವಿಡ್ ನಿಂದ ನಿಧನ

ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಕೋವಿಡ್ ಗುಣಪಡಿಸುವ ಔಷಧ ನೀಡಲಾಗುತ್ತದೆ ಎಂಬ ಭರವಸೆ ಹಿನ್ನೆಲೆಯಲ್ಲಿ ನೆಲ್ಲೂರ್ ನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾವಿರಾರು ಮಂದಿ ಸೇರುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಕೋವಿಡ್ ಗುಣಪಡಿಸಲು ಉಚಿತ ಆಯುರ್ವೇದ ಔಷಧ ಸಿಗುತ್ತಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಸೂಕ್ತ ಕ್ರಮ ಜರಗಿಸಲು ಮುಂದಾಗಿತ್ತು. ಅದರಂತೆ ಅಧಿಕಾರಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಆಯುರ್ವೇದ ಚಿಕಿತ್ಸೆ ಬಗ್ಗೆ ಜನರು ಪಾಸಿಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ವಾಪಸ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಶೀಘ್ರವಾಗಿ ಪೂರ್ಣ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Advertisement

ಬೋಗಿನಿ ಆನಂದಯ್ಯ ಉಚಿತ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದು, ಸಂಘಟಕರ ಹೇಳಿಕೆ ಪ್ರಕಾರ ದಿನದಿಂದ ದಿನಕ್ಕೆ ಔಷಧ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ 20ಸಾವಿರಕ್ಕೂ ಅಧಿಕ ಮಂದಿಗೆ ಔಷಧ ಹಂಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಾವು ಔಷಧಕ್ಕಾಗಿ ಗಿಡಮೂಲಿಕೆಯನ್ನು ಉಪಯೋಗಿಸುತ್ತಿದ್ದೇವೆ. ಇದು ಕೋವಿಡ್ ಮುಂಜಾಗ್ರತಾ ಹಾಗೂ ಗುಣಪಡಿಸಲು ಉಪಯೋಗವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ಆಯುರ್ವೇದ ಔಷಧ ನೀಡುತ್ತಿದ್ದೇನೆ. ನನ್ನ ಮಗ ಆರಂಭಿಕವಾಗಿ ಒಂದು ಲಕ್ಷ ರೂ. ನೀಡಿದ್ದ, ಇದೀ ಗ ಗಿಡಮೂಲಿಕೆ ಹಾಗೂ ಇತರ ಅಗತ್ಯವಸ್ತುಗಳಿಗಾಗಿ ಜನರು ದೇಣಿಗೆ ನೀಡುತ್ತಿದ್ದಾರೆ ಎಂದು ಆನಂದಯ್ಯ ತಿಳಿಸಿದ್ದಾರೆ.

ಆಯುರ್ವೇದ ಔಷಧ ನೀಡುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿ ಧನಲಕ್ಷ್ಮೀ, ಆರ್ ಡಿಒ ಸುವರ್ಣಮ್ಮ, ನೆಲ್ಲೂರ್ ಗ್ರಾಮೀಣ ಡಿಎಸ್ ಪಿ ವೈ.ಹರನಾಥ್ ರೆಡ್ಡಿ ಮತ್ತು ಆಯುಷ್ ವೈದ್ಯರು ಭೇಟಿ ನೀಡಿದ್ದರು. ಅಲ್ಲದೇ ಸ್ಯಾಂಪಲ್ಸ್ ಅನ್ನು ಪಡೆದುಕೊಂಡಿದ್ದರು.

ಔಷಧಕ್ಕೆ ಉಪಯೋಗಿಸುವ ಗಿಡಮೂಲಿಕೆಯ ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದು ಆಯುಷ್ ವೈದ್ಯರು ತಿಳಿಸಿದ್ದಾರೆ. ಜನರು ಔಷಧ ತೆಗೆದುಕೊಳ್ಳುವಾಗ ಕೋವಿಡ್ ನಿಯಮ ಪಾಲಿಸುವಂತೆ ಧನಲಕ್ಷ್ಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next