Advertisement

ಸ್ಪೀಡ್‌ ಗೌರ್ನರ್‌ ಅಳವಡಿಕೆಯಲ್ಲಿ ಒಳ ಒಪ್ಪಂದ: ಪುಟ್ಟಣ್ಣ ಆರೋಪ

08:15 AM Feb 24, 2018 | Team Udayavani |

ವಿಧಾನ ಪರಿಷತ್ತು: ರಾಜ್ಯದಲ್ಲಿ ವಾಹನಗಳಿಗೆ “ಸ್ಪೀಡ್‌ ಗೌರ್ನರ್‌’ ಅಳವಡಿಕೆಯಲ್ಲಿ ಕೆಲವು ನಟೋರಿಯಸ್‌ ಅಧಿಕಾರಿಗಳು ಕಂಪೆನಿಗಳ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆಂದು ಜೆಡಿಎಸ್‌ ಸದಸ್ಯ ಪುಟ್ಟಣ್ಣ ಆರೋಪಿಸಿದರು.

Advertisement

ಪ್ರಶ್ನೋತ್ತರ ಅವಧಿಯಲ್ಲಿ, ಸ್ಪೀಡ್‌ ಗೌರ್ನರ್‌ ಅಳವಡಿಸಲು 19 ಕಂಪೆನಿಗಳನ್ನು ನಿಗದಿಪಡಿಸಬಹುದು ಎಂದು ಕೇಂದ್ರ ಸರ್ಕಾರ 
2016 ಮತ್ತು 2017ರಲ್ಲಿ ಹೇಳಿದೆ. ಆದರೆ, ರಾಜ್ಯ ಸರ್ಕಾರ 2 ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದೆ. ನ್ಯಾಯಾಲಯದ ನೆಪ
ಹೇಳಿ ಪರಿಷ್ಕೃತ ಮಾರ್ಗಸೂಚಿ ಬದಲು 2009ರ ಹಳೆಯ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದೆ. ನಮ್ಮ ರಾಜ್ಯದಲ್ಲಿ ಅಳವಡಿಸುವ ಅದೇ ಗುಣಮಟ್ಟದ ಸ್ಪೀಡ್‌ ಗೌರ್ನರ್‌ಗಳು ನೆರೆಯ ರಾಜ್ಯಗಳಲ್ಲಿ 1,300ರಿಂದ 2 ಸಾವಿರ ರೂ.ಗೆ ಸಿಕ್ಕರೆ ನಮ್ಮಲ್ಲಿ 8ರಿಂದ 9 ಸಾವಿರ ದರ ಇದೆ. ಈ ರೀತಿ ಕೆಲವು ನಟೋರಿಯಸ್‌ ಅಧಿಕಾರಿಗಳು ಕಂಪೆನಿಗಳ ಜೊತೆ ಸೇರಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, ರಾಜ್ಯದಲ್ಲಿ ಸ್ಪೀಡ್‌ ಗೌರ್ನರ್‌ ಅಳವಡಿಸಲು 10 ಕಂಪೆನಿಗಳು ಬಂದಿದ್ದವು. ಅದರಲ್ಲಿ ಮೆ. ಪಿಆರ್‌ಐಸಿಓಎಲ್‌ ಲಿಮಿಟೆಡ್‌ ಹಾಗೂ ಮೆ. ರೋಸ್‌ಮೆರ್ಟಾ ಆಟೋ ಟೆಕ್‌ ಪ್ರೈ. ಲಿ. ಕಂಪೆನಿಗಳಿಗೆ ಅನುಮತಿ ನೀಡಲಾಗಿದೆ.

ಆಯ್ಕೆಯಾಗದ ಕಂಪೆನಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು. ನ್ಯಾಯಾಲಯ ಎರಡು ಕಂಪೆನಿಗಳ ಪರ ತೀರ್ಪು ನೀಡಿದೆ. ಅದರಂತೆ ಆ ಎರಡು ಕಂಪೆನಿಗಳಿಗೆ ಅನುಮತಿ ನೀಡಲಾಗಿದೆ. ಈ ಕಂಪೆನಿಗಳನ್ನು ಟಾಟಾ ಮತ್ತು ಹೋಂಡಾ ಸಂಸ್ಥೆಗಳು 
ಪ್ರಮಾಣೀಕರಿಸಿವೆ. ಒಂದು ರಾಜ್ಯದಲ್ಲಿರುವ ಉಪಕರಣಗಳ ದರ ಇನ್ನೊಂದು ರಾಜ್ಯದೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. 9,500ರಿಂದ 13,500 ರೂ. ಇದ್ದ ದರಗಳನ್ನು 7,500ರಿಂದ 9.500 ರೂ.ಗೆ ಇಳಿಸಲಾಗಿದೆ ಎಂದು ಸರ್ಕಾರದ ನಿಲುವು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next