Advertisement

ಉಸ್ತುವಾರಿಗಳು: ತಣಿಯದ ಅಸಮಾಧಾನ

10:22 PM Jan 29, 2022 | Team Udayavani |

ಉಡುಪಿ: ಜಿಲ್ಲಾ ಉಸ್ತುವಾರಿಗಳ ಆಯ್ಕೆಯಲ್ಲಿ ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ವಹಿಸಿಕೊಡದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿರುವ ಜತೆಗೆ ಮುಂದಿನ ವಿಧಾನಸಭಾ ಚುನಾವಣ ಸಿದ್ಧತೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

Advertisement

ಜಿಲ್ಲೆಯಿಂದ ಆಯ್ಕೆಯಾದ ಇಬ್ಬರು ಜನಪ್ರತಿನಿಧಿ ಗಳು ಸಚಿವ ಸಂಪೂಟದಲ್ಲಿದ್ದರೂ, ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಅವರಿಗೆ ದಕ್ಷಿಣ ಕನ್ನಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ. ದ.ಕ. ಜಿಲ್ಲೆಯ ಎಸ್‌.ಅಂಗಾರ ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈಗ ನಡೆಯುತ್ತಿರುವ ಉತ್ತರ ಪ್ರದೇಶ, ಪಂಜಾಬ್‌ ಮೊದಲಾದ ರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯಲ್ಲೂ ವಿಧಾನಸಭೆ ಚುನಾವಣೆ ಮೂಡ್‌ ಆರಂಭವಾಗಲಿದೆ. ಅಭ್ಯರ್ಥಿಗಳ ಆಯ್ಕೆ, ಕಾರ್ಯಕರ್ತರ ಸಭೆ ಇತ್ಯಾದಿ ಶುರುವಾಗಲಿದೆ.

ಸ್ಥಳೀಯ ಸಚಿವರೇ ಜಿಲ್ಲಾ ಉಸ್ತುವಾರಿಗಳಾಗಿದ್ದರೆ ಚುನಾವಣ ಸಿದ್ಧತೆ ನಿಭಾಯಿಸುವ ಜತೆಗೆ ಕಾರ್ಯಕರ್ತ ರೊಂದಿಗೆ ನಿರಂತರ ಸಂಪರ್ಕ ಹೊಂದಲು ಅನುಕೂಲ ವಾಗುತ್ತಿತ್ತು. ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾದಾಗ ಕೇವಲ ಜಿಲ್ಲಾ ಮಟ್ಟದ ಸಭೆ, ಸರಕಾರಿ ಕಾರ್ಯಕ್ರಮಕ್ಕೆ ಸೀಮಿತವಾಗಿ ಬಿಡುತ್ತಾರೆ.
ಕಾರ್ಯಕರ್ತರೊಂದಿಗೆ ಬೆರೆಯುವುದಿಲ್ಲ, ಪಕ್ಷದ ಸಮಾರಂಭಗಳಲ್ಲಿ ಭಾಗವಹಿಸುವುದು ಕಡಿಮೆ ಯಾಗುತ್ತದೆ. ಇದು ಮುಂದಿನ ವಿಧಾನಸಭಾ ಚುನಾವಣೆಯ ಸಿದ್ಧತೆ ಮೇಲೆ ಖಂಡಿತ ಪ್ರಭಾವ ಬೀರಲಿದೆ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದರು.

ಚುನಾವಣೆ ಸಿದ್ಧತೆ
ಒಂದು ವರ್ಷದಲ್ಲಿ ಚುನಾವಣೆ ಎದು ರಾಗಬಹುದು. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಮನ್ವಯ ಅತೀ ಮುಖ್ಯ. ಸ್ಥಳೀಯ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾದರೆ, ಜಿಲ್ಲೆಯಲ್ಲಿ ಅವರ ಓಡಾಟ ಹೆಚ್ಚಿರುವುದರಿಂದ ಸಂಘಟನಾತ್ಮಕವಾಗಿ ಮತ್ತು ಚುನಾವಣೆ ಸಿದ್ಧತೆಗೂ ಹೆಚ್ಚು ಅನುಕೂಲವಾಗಲಿದೆ. ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ. ಜಿಲ್ಲೆಯ ಸಚಿವರು ತಮ್ಮ ಉಸ್ತುವಾರಿಯ ಜಿಲ್ಲೆಗಳಲ್ಲಿ ಪ್ರವಾಸದಲ್ಲಿ ಇರಬೇಕಾಗುತ್ತದೆ. ಆಗ ತಮ್ಮ ಕ್ಷೇತ್ರ ಸಹಿತವಾಗಿ ಜಿಲ್ಲೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ಚುನಾವಣೆ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರದಂತೆ ಈಗ ಕಾರ್ಯ ನಡೆಸಬೇಕಾದ ಮತ್ತು ಬೇರೆ ಜಿಲ್ಲೆಗಳಲ್ಲಿ ಸಮನ್ವಯ ಸಾಧಿಸುವ ಹೊಸ ಸವಾಲು ಇದು ಎಂದು ಸಚಿವರೊಬ್ಬರು ತಿಳಿಸಿದರು.

Advertisement

ಪಕ್ಷ ಸಂಘಟನೆಗೆ ಅನನುಕೂಲ
ಉಸ್ತುವಾರಿ ಸಚಿವರು ಸದ್ಯ ಸರಕಾದ ನಿರ್ದೇಶನದಂತೆ ಕೊರೊನಾ 3ನೇ ಅಲೆಯ ನಿರ್ವಹಣೆ, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚಿನ ಗಮನ ನೀಡಬೇಕು. ಪಕ್ಷದ ಹಿತದೃಷ್ಟಿಯಿಂದ ಚುನಾವಣ ಸಿದ್ಧತೆಯ ಮೇಲೂ ನಿಗಾ ವಹಿಸಬೇಕಾಗುತ್ತದೆ. ಜಿಲ್ಲೆಯ ಸಮಸ್ಯೆ, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಉಸ್ತುವಾರಿಗಳಿಗೆ ಸ್ಪಷ್ಟತೆ ಇರಬೇಕಾಗುತ್ತದೆ. ಜತೆಗೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಸ್ಥಳೀಯರೇ ಜಿಲ್ಲಾ ಉಸ್ತುವಾರಿಗಳು ಆದಾಗ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಸಿಗಲಿದೆ. ಸ್ಥಳೀಯ ಕಾರ್ಯಕರ್ತರಿಗೆ ಅವರೊಂದಿಗೆ ಬೆರೆಯಲು ಅನುಕೂಲವಾಗುತ್ತದೆ. ಬೇರೆ ಜಿಲ್ಲೆಯ ಉಸ್ತುವಾರಿಗಳಾದಾಗ ಕಾರ್ಯಕರ್ತರ ಆಸಕ್ತಿ, ಉತ್ಸಾಹವೂ ಕಡಿಮೆಯಾಗುತ್ತದೆ ಎಂಬ ವಾದವಿದೆ.

ಆಯಾ ಜಿಲ್ಲೆಯವರಾದರೆ ಒಳಿತು
ಜಿಲ್ಲೆಯ ಉಸ್ತುವಾರಿಯನ್ನು ಆಯಾ ಜಿಲ್ಲೆಯವರಿಗೆ ನೀಡಿದರೆ ಸಂಘಟನಾತ್ಮಕವಾಗಿ ಪಕ್ಷವನ್ನು ಇನ್ನಷ್ಟು ಬೆಳೆಸಲು ಹಾಗೂ ಜಿಲ್ಲೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗುತ್ತದೆ. ಸದ್ಯ ಪಕ್ಷ ಮತ್ತು ಸರಕಾರ ಸದ್ಯ ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸುತ್ತೇವೆ.
-ಕುಯಿಲಾಡಿ ಸುರೇಶ್‌ ನಾಯಕ್‌, ಜಿಲ್ಲಾಧ್ಯಕ್ಷ, ಬಿಜೆಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next