Advertisement

ಮತ್ತೆ ತೆರವಾಯ್ತು ಕಾಫಿನಾಡಿನ ಉಸ್ತುವಾರಿ

12:58 PM Apr 16, 2022 | Team Udayavani |

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ತಲೆದಂಡದಿಂದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಮತ್ತೆ ತೆರವಾಗಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವರ ವಿಚಾರದಲ್ಲಿ ಬಹುತೇಕ ಉಸ್ತುವಾರಿಗಳು ಅಕ್ಕಪಕ್ಕದ ಜಿಲ್ಲೆಯವರು ಎಂಬ ಕೊರಗು ಜಿಲ್ಲೆಯ ಜನತೆಯನ್ನು ಬಹಳಷ್ಟು ವರ್ಷಗಳಿಂದ ಕಾಡುತ್ತಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿಲ್ಲದವರೇ ಉಸ್ತುವಾರಿ ಮಂತ್ರಿಯಾಗುತ್ತಾರೆಂಬ ಆರೋಪ ಇದೆ.

ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಮಂತ್ರಿ ಮಾಡುವುದರಿಂದ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ನಿರಾಸಕ್ತಿ ಮತ್ತು ರಾಷ್ಟ್ರಧ್ವಜ ಹಾರಿಸಲು ಮಾತ್ರ ಸೀಮಿತರಾಗುತ್ತಾರೆಂಬ ದೂರು ಇದೆ. ಕೆ.ಎಸ್. ಈಶ್ವರಪ್ಪ ಅವರು ಪಕ್ಕದ ಜಿಲ್ಲೆಯವರಾದರೂ ಮಲೆನಾಡಿನ ಜನರ ಸಮಸ್ಯೆಗಳ ಬಗ್ಗೆ ಅರಿವಿದೆ ಎಂಬ ಸಮಾಧಾನವನ್ನು ಜಿಲ್ಲೆಯ ಜನತೆ ಹೊಂದಿದ್ದರು.

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಎ 1 ಆರೋಪಿಯಾಗಿರುವ ಕೆ.ಎಸ್. ಈಶ್ವರಪ್ಪ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇವರ ರಾಜೀನಾಮೆಯಿಂದ ಮತ್ತೊಮ್ಮೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸ್ಥಾನ ಖಾಲಿಯಾಗಿದೆ.

ಬಿಜೆಪಿ ಸರ್ಕಾರದಲ್ಲಿ 4ಜನ ಉಸ್ತುವಾರಿ

Advertisement

ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇಲ್ಲಿಯವರೆಗೂ ಜಿಲ್ಲೆ 4 ಜನ ಉಸ್ತುವಾರಿಗಳನ್ನು ಕಂಡಿದೆ. ಬಿಜೆಪಿ ಅಧಿಕಾರ ಹಿಡಿಯುತ್ತಿದ್ದಂತೆ ಸಿ.ಟಿ. ರವಿ ಸಚಿವ ಸ್ಥಾನ ಮತ್ತು ಜಿಲ್ಲಾ ಉಸ್ತುವಾರಿ ಸ್ಥಾನ ವಹಿಸಿಕೊಂಡರು. ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎಸ್‌. ಅಂಗಾರ ಜಿಲ್ಲಾ ಉಸ್ತುವಾರಿಯಾದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಳಿಕ ಎಸ್‌. ಅಂಗಾರ ಜಿಲ್ಲಾ ಉಸ್ತುವಾರಿ ಸ್ಥಾನ ಕಳೆದುಕೊಂಡರು. ಬಸವರಾಜ ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾ ಉಸ್ತುವಾರಿಯಾದರು. ಮುಂದಿನ ಬೆಳವಣಿಗೆಯಲ್ಲಿ ಜನವರಿ ತಿಂಗಳಲ್ಲಿ ಕೆ.ಎಸ್. ಈಶ್ವರಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಯ್ಕೆಯಾದರು.

ಈಶ್ವರಪ್ಪಗೆ 2ಬಾರಿ ಕಾಫಿನಾಡು ಉಸ್ತುವಾರಿ

ಕೆ.ಎಸ್. ಈಶ್ವರಪ್ಪ ಅವರು 2 ಬಾರಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಈಶ್ವರಪ್ಪ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯಾಗಿ ಮತ್ತೆ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ 2ನೇ ಬಾರಿಗೆ ಉಸ್ತುವಾರಿಯಾಗಿ ನೇಮಕವಾದರು.

2 ಬಾರಿ ಚಿಕ್ಕಮಗಳೂರಿಗೆ ಭೇಟಿ

ಈಶ್ವರಪ್ಪ ಜಿಲ್ಲಾ ಉಸ್ತುವಾರಿಯಾದ ಬಳಿಕ ಚಿಕ್ಕಮಗಳೂರು ಜಿಲ್ಲೆಗೆ 2 ಬಾರಿ ಮಾತ್ರ ಭೇಟಿ ನೀಡಿದ್ದರು. ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಇತ್ತೀಚೆಗೆ ಜಿಪಂ ಆವರಣದಲ್ಲಿ ಕೆಡಿಪಿ ಸಭೆ ನಡೆಸಿದ್ದರು. ಆ ಬಳಿಕ ಚಿಕ್ಕಮಗಳೂರಿಗೆ ಭೇಟಿ ನೀಡಿರಲಿಲ್ಲ. ಈಗ ಅವರ ರಾಜೀನಾಮೆಯಿಂದ ಉಸ್ತುವಾರಿ ಸ್ಥಾನ ಮತ್ತೆ ತೆರವಾಗಿದೆ.

– ಸಂದೀಪ ಜಿ.ಎನ್. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next