ಹೊಸದಿಲ್ಲಿ : ಅತೀ ದೊಡ್ಡ ಭದ್ರತಾ ಲೋಪದ ಪ್ರಕರಣವಾಗಿ ಬಿಹಾರದ ಮುಜಫರಪುರದ ಹೊಟೇಲ್ ಒಂದರಲ್ಲಿ ನಿನ್ನೆ ಸೋಮವಾರ ಆರು ಇವಿಎಂ ಗಳು ಮತ್ತು ಒಂದು ವಿವಿಪ್ಯಾಟ್ ಯಂತ್ರ ಪತ್ತೆಯಾಗಿವೆ.
ಮುಜಫರಪುರ ದ ಎಸ್‌ಡಿಓ ಕುಂದನ್ ಕುಮಾರ್ ಅವರು ಈ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಸೆಕ್ಟರ್ ಮ್ಯಾಜಿಸ್ಟ್ರೇಟ್ ಅವಧೇಶ್ ಕುಮಾರ್ ಅವರು ತಮ್ಮ ಕಾರು ಚಾಲಕನು ಮತ ಹಾಕಲು ಹೋಗಿದ್ದರಿಂದ ಈ ಇವಿಎಂ ಗಳನ್ನು ತಾವಿದ್ದ ಹೊಟೇಲ್‌ಗೆ ಒಯ್ದಿದ್ದರು ಎಂದು ಹೇಳಲಾಗಿದೆ.
ಹೊಟೇಲ್ ನಲ್ಲಿ ಇವಿಎಂ ವಶಪಡಿಸಿಕೊಳ್ಳಲಾದುದನ್ನು ಅನುಸರಿಸಿ ಸ್ಥಳೀಯ ಜನರು ಹೊಟೇಲ್ ಮುಂದೆ ಘೇರಾಯಿಸಿ ಮ್ಯಾಜಿಸ್ಟ್ರೇಟರ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರಭಾರಾಧಿಕಾರಿಯಿಂದ ಅಕ್ರಮ ನಡೆಯುತ್ತಿರುವುದನ್ನು ಶಂಕಿಸಿ ಜನರು ಘೋಷಣೆ ಕೂಗತೊಡಗಿದರು.
ಈ ವಿದ್ಯಮಾನ ಅನುಸರಿಸಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್ ಅವಧೇಶ್ ಕುಮಾರ್ ಅವರಿಗೆ ಶೋ ಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ಇವಿಎಂ ಗಳು ಹೊಟೇಲಿಗೆ ತಲುಪಿದ್ದು ಹೇಗೆ ಎಂಬುದು° ವಿವರಿಸುವಂತೆ ಅವರನ್ನು ಕೇಳಿಕೊಳ್ಳಲಾಗಿದೆ.
ಇದೇ ವೇಳೆ ಜಿಲ್ಲಾಧಿಕಾರಿ ಆಲೋಕ್ ರಂಜನ್ ಘೋಷ್ ಅವರು ಮ್ಯಾಜಿಸ್ಟ್ರೇಟ್ ಅವಧೇಶ್ ಕುಮಾರ್ ಅವರು ತಮ್ಮ ವಾಹನ ಚಾಲಕ ಮತ ಹಾಕಲು ಹೋಗಿದ್ದ ಕಾರಣ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ತಮ್ಮ ಹೊಟೇಲ್ ಕೋಣೆಗೆ ಒಯ್ದದ್ದು ಹೌದೆಂದು ದೃಡಪಡಿಸಿದ್ದಾರೆ.