ಹೊಸದಿಲ್ಲಿ: ತೆಲುಗು ದೇಶಂ ಪಕ್ಷದ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರ್ಪಡೆ ಯಾಗಿರುವಂತೆಯೇ ಈ ಬಗ್ಗೆ ಸಭಾಪತಿ ಎಂ. ವೆಂಕಯ್ಯ ನಾಯ್ಡುಗೆ ದೂರು ಸಲ್ಲಿಕೆಯಾಗಿದೆ. ಇದೊಂದು ನ್ಯಾಯ ಸಮ್ಮತವಲ್ಲದ ವಿಲೀನ ಎಂದು ಪಕ್ಷದ ನಾಯಕ ಜಯದೇವ ಗಲ್ಲಾ ಮೇಲ್ಮನೆ ಸಭಾಪತಿಗೆ ಸಲ್ಲಿಸಿರುವ ದೂರಿನಲ್ಲಿ ಅರಿಕೆ ಮಾಡಿ ಕೊಂಡಿದ್ದಾರೆ.
ರಾಜ್ಯಸಭೆಯಲ್ಲಿ ಟಿಡಿಪಿ ಬಿಜೆಪಿಯಲ್ಲಿ ವಿಲೀನ ವಾಗುವ ಬಗ್ಗೆ ನಾಲ್ವರು ಸಂಸದರು ಪತ್ರದ ಮೂಲಕ ಅರಿಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಪಕ್ಷದ ಸಭೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಟಿಡಿಪಿ ಸಂಪೂರ್ಣವಾಗಿ ಬಿಜೆಪಿ ಜತೆ ವಿಲೀನವಾಗಿಲ್ಲ. ಹೀಗಾಗಿ, ಸಂಸದರು ಮಾಡಿಕೊಂಡಿರುವ ಮನವಿ ತಿರಸ್ಕರಿಸಬೇಕು ಎಂದು ಕೋರಿಕೊಳ್ಳಲಾಗಿದೆ.
ಸಂಪರ್ಕದಲ್ಲಿ ಹಲವರು: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ತೆಲಂಗಾಣ ಮತ್ತು ಆಂಧ್ರದ ಕಾಂಗ್ರೆಸ್ ಮತ್ತು ಟಿಡಿಪಿ ನಾಯಕರು ಬಿಜೆಪಿ ಜತೆಗೆ ಸಂಪರ್ಕ ದಲ್ಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ ರಾವ್ ಹೇಳಿದ್ದಾರೆ. 2 ವರ್ಷಗಳಲ್ಲೇ ಎರಡೂ ರಾಜ್ಯಗಳಲ್ಲಿ ಬಿಜೆಪಿ ಪ್ರಧಾನ ಪ್ರತಿಪಕ್ಷವಾಗಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.
ಖಾಸಗಿ ವಿಧೇಯಕಕ್ಕೆ ರಾಜ್ಯಸಭೆ ಸಂಸದರ ಬೆಂಬಲ: ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಗಳಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮೀಸಲು ನೀಡುವ ಸಂಸತ್ ಸದಸ್ಯರ ಖಾಸಗಿ ಮಸೂ ದೆಗೆ ರಾಜ್ಯಸಭೆಯ ಹೆಚ್ಚಿನ ಸದಸ್ಯರು ಬೆಂಬಲ ವ್ಯಕ್ತಪಡಿ ಸಿದ್ದಾರೆ. ವೈಎಸ್ಸಾರ್ ಕಾಂಗ್ರೆಸ್‌ನ ವಿ.ವಿಜಯಸಾಯಿ ರೆಡ್ಡಿ ಈ ಮಸೂದೆ ಮಂಡಿಸಿದ್ದಾರೆ. ಸಂವಿಧಾನ (ತಿದ್ದುಪಡಿ) ವಿಧೇಯಕ 2018 (330 ಎ ಮತ್ತು 332ಎ ಎಂಬ ಹೊಸ ವಿಧಿ ಸೇರ್ಪಡೆ) ಅನ್ನು ಮಂಡಿಸಿದ್ದಾರೆ. 2009 ಮತ್ತು 2014ರಲ್ಲಿ ಲೋಕಸಭೆಗೆ ಆಯ್ಕೆಯಾದ ಒಟ್ಟು ಸದಸ್ಯರ ಪೈಕಿ ಕ್ರಮವಾಗಿ ಶೇ.18 ಮತ್ತು ಶೇ.20 ಒಬಿಸಿ ವರ್ಗಕ್ಕೆ ಸೇರಿದವರು. ಒಟ್ಟು ಜನಸಂಖ್ಯೆಯಲ್ಲಿ ಇತರ ಹಿಂದುಳಿದವರ ವರ್ಗಕ್ಕೆ ಸೇರಿದವರ ಪ್ರಮಾಣ ಶೇ.40-55 ಆಗಿದೆ ಎಂದು ಹೇಳಿದ್ದಾರೆ.
ಕೇಂದ್ರವೇ ಕಾವೇರಿ ಪ್ರಾಧಿಕಾರ ನಿರ್ಮಿಸಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಹೊಣೆಯನ್ನು ಕೇಂದ್ರ ಸರಕಾರವೇ ವಹಿಸಿಕೊಳ್ಳಬೇಕು ಎಂದು ಎಐಎಡಿಎಂಕೆ ಶುಕ್ರವಾರ ಒತ್ತಾಯಿಸಿದೆ. ಜತೆಗೆ ತಮಿಳುನಾಡಿಗೆ ನ್ಯಾಯ ಸಮ್ಮತವಾಗಿ ನೀಡಬೇಕಾಗಿ ರುವ ನೀರು ಹಂಚುವ ವ್ಯವಸ್ಥೆ ಆಗಬೇಕು ಎಂದು ಲೋಕಸಭೆಯಲ್ಲಿ ಪಕ್ಷದ ಸಂಸದೆ ವಿಜ್ಜಿಲ ಸತ್ಯನಾಥ್ ಒತ್ತಾಯಿಸಿದ್ದಾರೆ. ಕಾವೇರಿ ಮತ್ತು ಗೋದಾವರಿ ನದಿಯನ್ನು ಸಂಪರ್ಕಿ ಸುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇದರಿಂದ ಗೋದಾವರಿ ನದಿಯಲ್ಲಿ ಸಿಗುವ 300 ಟಿಎಂಸಿ ನೀರನ್ನು ಇತರ ಭಾಗಗಳಿಗೂ ನೀಡಲು ಸಾಧ್ಯ ವಾಗುತ್ತದೆ ಎಂದೂ ಪ್ರತಿಪಾದಿಸಿದ್ದಾರೆ.
ಮಿತಿ ಮೀರಿ ಮಾತು
ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಸರಕಾರ ಹೆಚ್ಚು ಸಮಯ ಅಧಿಕಾರದಲ್ಲಿ ಉಳಿಯದು. ಬೇರೆಯ ಆಯ್ಕೆಗಳು ಶೀಘ್ರವೇ ಗೊತ್ತಾಗಲಿವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ ರಾವ್ ಹೇಳಿದ್ದಾರೆ. ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ರಾವ್, ’37 ಶಾಸಕರು ಇರುವ ಜೆಡಿಎಸ್‌ಗೆ ಸದನ ವಿಸರ್ಜಿಸುವ ಅಧಿಕಾರವೇ ಇಲ್ಲ. ಮಾಜಿ ಪ್ರಧಾನಿ ತಮ್ಮ ಮಿತಿ ಮೀರಿ ಮಾತನಾಡಿದ್ದಾರೆ’ಎಂದಿದ್ದಾರೆ.
ಮನಮೋಹನ್ ಸಿಂಗ್‌ಗೆ ರಾಜ್ಯಸಭೆ ವಿದಾಯ
ರಾಜ್ಯಸಭೆ ಸದಸ್ಯತ್ವದಿಂದ ಜೂ. 15ರಂದು ನಿವೃತ್ತರಾದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ರ ಸಾಧನೆಗಳನ್ನು ಶುಕ್ರವಾರ ರಾಜ್ಯಸಭೆಯಲ್ಲಿ ನೆನಪಿಸಿಕೊಳ್ಳಲಾಯಿತು. ಇವರನ್ನು ರಾಜ್ಯಸಭೆ ಸ್ಮರಿಸುತ್ತದೆ. ಸಿಂಗ್ ವಿವಿಧ ವಿಷಯಗಳ ಕುರಿತ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಘನತೆ ಹೆಚ್ಚಿಸಿದ್ದಾರೆ ಎಂದು ಸಭಾಪತಿ ವೆಂಕಯ್ಯ ನಾಯ್ಡು ಸದನದಲ್ಲಿ ಹೇಳಿದ್ದಾರೆ.