ನ್ಯೂಯಾರ್ಕ್/ಹೊಸದಿಲ್ಲಿ: ಜಗತ್ತಿನಾದ್ಯಂತ ಮಾನವರಿಗೆ ಕೊವಿಡ್ 19 ವೈರಸ್ ಬಾಧಿಸುತ್ತಿರುವಂತೆಯೇ ನ್ಯೂಯಾರ್ಕ್‌ನಲ್ಲಿರುವ ಬ್ರಾಂಕ್ಸ್ ಮೃಗಾಲಯದಲ್ಲಿನ ಹುಲಿಗೆ ಸೋಂಕು ಇರುವುದು ದೃಢವಾಗಿದೆ. ನಾಲ್ಕು ವರ್ಷ ವಯಸ್ಸಿನ ನಾಡಿಯಾ ಎಂಬ ಹೆಸರಿನ ಹುಲಿಗೆ ಸೋಂಕು ತಗಲಿದೆ. ಜತೆಗೆ ಇತರ ಆರು ಹುಲಿ ಮತ್ತು ಸಿಂಹಗಳೂ ಅನಾರೋಗ್ಯದಿಂದ ಬಳಲುತ್ತಿವೆ. ಮೃಗಾಲಯದ ಉದ್ಯೋಗಿಯಿಂದ ಸೋಂಕು ಪ್ರಾಣಿಗಳಿಗೆ ವರ್ಗಾವಣೆ ಆಗಿರಬಹುದೆಂದು ಸದ್ಯ ಶಂಕಿಸಲಾಗುತ್ತಿದೆ.
ಮಾ.27ರಂದು ಹುಲಿ ನಾಡಿಯಾ ಆರಂಭಿಕ ಲಕ್ಷಣಗಳನ್ನು ತೋರಿಸಲಾರಂಭಿಸಿತ್ತು. ಇದರ ಜತೆಗೆ ಜನಿಸಿದ ಅಝುಲ್ ಎಂಬ ಮತ್ತೂಂದು ಹುಲಿ, ಮೂರು ಸಿಂಹಗಳು ಒಣ ಕೆಮ್ಮು, ಆಹಾರ ಸೇವಿಸಲು ನಿರಾಸಕ್ತಿ ತೋರಿಸಲಾರಂಭಿಸಿದ್ದವು. ಅಮೆರಿಕದ ಕೃಷಿ ಇಲಾಖೆ ಮತ್ತು ನ್ಯಾಷನಲ್ ವೆಟರ್ನರಿ ಸರ್ವಿಸಸ್ ಲ್ಯಾಬೋರೇಟರೀಸ್ ಈ ಅಂಶ ಖಚಿತಪಡಿಸಿವೆ.
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಬ್ರಾಂಕ್ಸ್ ಮೃಗಾಲಯ ಸೇರಿದಂತೆ ನ್ಯೂಯಾರ್ಕ್ ವ್ಯಾಪ್ತಿಯಲ್ಲಿರುವ ನಾಲ್ಕು ಝೂಗಳನ್ನು ಮಾ.16ರಿಂದ ಮುಚ್ಚಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃಗಾಲಯ ನಿರ್ದೇಶಕ ಜಿಮ್ ಬೆರ್ಹಾನಿ ‘ಇದು ಸವಾಲಿನ ದಿನಗಳು. ಹುಲಿಗೆ ಸೋಂಕು ತಗುಲಿದ ಬಳಿಕ ಅವು ಯಾವ ರೀತಿಯ ಪ್ರತಿಕ್ರಿಯೆ ತೋರಿಸಲಿವೆ ಎನ್ನುವುದನ್ನು ನೋಡಬೇಕಷ್ಟೆ. ಅವು ಶೀಘ್ರವೇ ಗುಣಮುಖವಾಗುವಂತೆ ಮಾಡುವುದು ಆದ್ಯತೆ’ ಎಂದಿದ್ದಾರೆ. ಕಳೆದ ತಿಂಗಳ ಅಂತ್ಯಕ್ಕೆ ಬ್ರೆಜಿಲ್‌ನಲ್ಲಿ ಬೆಕ್ಕಿಗೆ, ಹಾಂಕಾಂಗ್‌ನಲ್ಲಿ 2 ನಾಯಿಗಳಿಗೆ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿದ್ದವು.
ಕಟ್ಟೆಚ್ಚರಕ್ಕೆ ಸೂಚನೆ
ನ್ಯೂಯಾರ್ಕ್ ಮೃಗಾಲಯದಲ್ಲಿ ಹುಲಿಗೆ ಸೋಂಕು ತಗಲಿರುವುದು ದೃಢವಾಗಿರುವುದರಿಂದ ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜೆಡ್‌ಎ) ದೇಶಾದ್ಯಂತ ಇರುವ ಮೃಗಾಲಯಗಳಲ್ಲಿ ಎಚ್ಚರ ವಹಿಸುವಂತೆ ಸೂಚಿಸಿದೆ. ಈ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಸ್.ಪಿ. ಯಾದವ್ ತಿಳಿಸಿದ್ದಾರೆ. 24 ಗಂಟೆಗಳ ಕಾಲ ಸಿಸಿಟಿವಿ ಮೂಲಕ ಅವುಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.