ನವದೆಹಲಿ: ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಇಲಾಖೆ ಇದೇ ಮೊದಲ ಬಾರಿಗೆ ತನ್ನಲ್ಲಿನ ಕೊಂಬಾಟ್ ಅಧಿಕಾರಿ ಶ್ರೇಣಿಯ ಹುದ್ದೆಗೆ ಮಹಿಳೆಯೊಬ್ಬರನ್ನು ನೇಮಿಸಿಕೊಂಡಿದೆ. ಬಿಹಾರದ ಸಮಷ್ಠಿಪುರ ಜಿಲ್ಲೆಯ ಪ್ರಕೃತಿ (25) ಹುದ್ದೆಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲೇ ಪ್ರಕೃತಿಗೆ ಉಡುಗೊರೆ ರೂಪದಲ್ಲಿ ಈ ಹುದ್ದೆ ಒಲಿದು ಬಂದಿರುವುದು ವಿಶೇಷ.
2016ರಲ್ಲಿ ಮೊದಲ ಬಾರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ನೇಮಕಾತಿಯ ಪರೀಕ್ಷೆ ತೆಗೆದುಕೊಂಡಿದ್ದ ಅವರು, ತಮ್ಮ ಮೊದಲ ಯತ್ನದಲ್ಲೇ ಉತ್ತೀರ್ಣರಾಗಿದ್ದರು. ಈವರೆಗೆ ಕೇವಲ ಪೇದೆಗಳ ಶ್ರೇಣಿಯಲ್ಲೇ ಮಹಿಳೆಯರನ್ನು ನೇಮಿಸಿಕೊಳ್ಳುತ್ತಿದ್ದ ಐಟಿಬಿಪಿ, ಇದೇ ಮೊದಲ ಬಾರಿಗೆ ಉನ್ನತ ಹುದ್ದೆಗೆ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿದೆ.
ಸದ್ಯಕ್ಕೆ ಉತ್ತರಾಖಂಡದ ಪಿತ್ತೋರಗಢದಲ್ಲಿರುವ ಐಟಿಬಿಪಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಸದ್ಯದಲ್ಲೇ ಡೆಹ್ರಾಡೂನ್‌ನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಪೂರ್ಣ ಪ್ರಮಾಣದ ತರಬೇತಿಗಾಗಿ ಕಳುಹಿಸಲಾಗುತ್ತದೆ.
ಅಲ್ಲಿ ಒಂದು ವರ್ಷದ ತರಬೇತಿ ಪೂರ್ಣಗೊಂಡ ನಂತರ, ಪ್ರಕೃತಿ ಅವರಿಗೆ, ಅಸಿಸ್ಟಂಟ್ ಕಮಾಂಡಂಟ್ ಹುದ್ದೆ ನೀಡಲಾ ಗುತ್ತದೆ. ಗಡಿ ಭಾಗದಲ್ಲೇ ಅವರು ಸೇವೆ ಸಲ್ಲಿಸಬೇಕಾಗುತ್ತದೆ ಎಂದು ಐಟಿಬಿಪಿ ತಿಳಿಸಿದೆ.