ನವದೆಹಲಿ:ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್, ವಿದೇಶದಲ್ಲಿ ನಡೆಯಲಿರುವ ಸಮಾರಾಭ್ಯಾಸದಲ್ಲಿ ಭಾಗವಹಿಸಲಿದೆ.
ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)ನಲ್ಲಿ ನಿರ್ಮಾಣಗೊಂಡಿರುವ ತೇಜಸ್ ಸೇರಿದಂತೆ ಭಾರತೀಯ ವಾಯುಪಡೆಯ ಒಟ್ಟು 5 ಯುದ್ಧ ವಿಮಾನಗಳು ಫೆ.27ರಿಂದ ಮಾರ್ಚ್ 17ರವರೆಗೆ ಯುಎಇಯಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
ಯುಕೆಯಲ್ಲಿ 2022ರಲ್ಲಿ ನಡೆಯಬೇಕಿದ್ದ ಕೋಬ್ರಾ ವಾರಿಯರ್ ಕವಾಯತಿನಲ್ಲಿ ತೇಜಸ್ ಚೊಚ್ಚಲ ಪ್ರದರ್ಶನ ನೀಡಬೇಕಿತ್ತು. ಆದರೆ, ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಆ ಸಮರಾಭ್ಯಾಸ ರದ್ದಾಗಿತ್ತು.
ಈಗ ಸೋಮವಾರದಿಂದ ಯುಎಇಯಲ್ಲಿ ಆರಂಭವಾಗಲಿರುವ “ಎಕ್ಸರ್‌ಸೈಸ್ ಡೆಸರ್ಟ್ ಫ್ಲ್ಯಾಗ್’ನಲ್ಲಿ ಯುಎಇ, ಫ್ರಾನ್ಸ್, ಕುವೈಟ್, ಆಸ್ಟ್ರೇಲಿಯಾ, ಯು.ಕೆ. ಬಹರೈನ್, ಮೊರೊಕ್ಕೋ, ಸ್ಪೇನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕದ ವಾಯುಪಡೆಗಳು ಕೂಡ ಭಾಗವಹಿಸಲಿವೆ. ಚೀನಗೆ ಪ್ರತಿಸ್ಪರ್ಧಿಯಾಗಿ ಭಾರತವು ಲಘು ಯುದ್ಧ ವಿಮಾನಗಳ ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಅರ್ಜೆಂಟೀನಾ ಮತ್ತು ಈಜಿಪ್ಟ್ ಗೆ ಎಚ್‌ಎಎಲ್ ತನ್ನ ತೇಜಸ್ ವಿಮಾನವನ್ನು ರಫ್ತು ಮಾಡಿದೆ. ಇನ್ನೂ ಕೆಲವು ರಾಷ್ಟ್ರಗಳು ಕೂಡ ಆಸಕ್ತಿ ತೋರಿವೆ. ಈ ನಿಟ್ಟಿನಲ್ಲಿ ತೇಜಸ್‌ನ ಚೊಚ್ಚಲ ಸಾಮರ್ಥ್ಯ ಪ್ರದರ್ಶನವು ಹೆಚ್ಚು ಮಹತ್ವ ಪಡೆದಿದೆ.