Advertisement

ಪರೀಕ್ಷೆ ಪಾಸಾಯ್ತು ಹಾಕ್‌-ಐ ಯುದ್ಧ ವಿಮಾನ : ಒಡಿಶಾದ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ

09:56 PM Jan 21, 2021 | Team Udayavani |

ಬೆಂಗಳೂರು: ನೆಲದಲ್ಲಿರುವ ಸುಮಾರು 100 ಕಿ.ಮೀ. ದೂರದ ಶತ್ರುಗಳ ನೆಲೆಗಳನ್ನು ಧ್ವಂಸಗೊಳಿಸುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಾಕ್‌-ಎಂಕೆ 132 (ಐ) ಯುದ್ಧ ವಿಮಾನದ ಸಾಮರ್ಥ್ಯ ಪರೀಕ್ಷೆ ಗುರುವಾರ ಯಶಸ್ವಿಯಾಗಿ ನಡೆಯಿತು.
125 ಕೆಜಿ ಶ್ರೇಣಿಯ ಅತ್ಯಾಧುನಿಕವಾದ ಈ ಅಸ್ತ್ರವನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಇಮಾರತ್‌ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ. ಒಡಿಶಾದ ಕರಾವಳಿಯಲ್ಲಿ ಈ ಯುದ್ಧ ವಿಮಾನದ ಅತ್ಯಾಧುನಿಕ ಆಯುದ್ಧ ವ್ಯವಸ್ಥೆ (ಎಸ್‌ಎಎಡಬ್ಲ್ಯೂ- ಸ್ಮಾರ್ಟ್‌ ಆ್ಯಂಟಿ ಏರ್‌ಫಿಲ್ಡ್‌ ವೆಪನ್‌)ಯನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ. ಪರೀಕ್ಷೆ ನಡೆಸಿತು.

Advertisement

ಎಚ್‌ಎಎಲ್‌ನ ಪರೀಕ್ಷಾ ಪೈಲಟ್‌ ವಿಂಗ್‌ ಕಮಾಂಡರ್‌ (ನಿವೃತ್ತ) ಪಿ. ಅಸ್ವಾತಿ ಹಾಗೂ ವಿಂಗ್‌ ಕಮಾಂಡರ್‌ (ನಿವೃತ್ತ) ಎಂ. ಪಟೇಲ್‌ ಇಬ್ಬರೂ ಕ್ರಮವಾಗಿ ಯುದ್ಧ ವಿಮಾನದ ಹಾರಾಟ ಮತ್ತು ಅದರಿಂದ ಶಸ್ತ್ರಾಸ್ತ್ರಗಳ ಬಿಡುಗಡೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಎಲ್ಲ ಹಂತದ ಪರೀಕ್ಷೆಯನ್ನೂ ಹಾಕ್‌-ಐ ಪೂರೈಸಿತು. ಹಗುರ ಮತ್ತು ಅತ್ಯಂತ ನಿಖರವಾಗಿ ಗುರಿ ತಲುಪುವ ಸಾಮರ್ಥ್ಯದ ಬಾಂಬ್‌ ಹೊಂದಿರುವ ಈ ವ್ಯವಸ್ಥೆಯು ಜಾಗತಿಕ ಗುಣಮಟ್ಟದ ಶಸ್ತ್ರಾಸ್ತ್ರಗಳಲ್ಲೊಂದಾಗಿದೆ.

ಇದನ್ನೂ ಓದಿ:ರಾಜ್ಯ ವನ್ಯಜೀವಿ ಮಂಡಳಿಗೆ ಸದಸ್ಯರ ನೇಮಕ: ಮೂಲ ಕಡತ ಹಾಜರುಪಡಿಸಲು ಹೈಕೋರ್ಟ್ ಸೂಚನೆ

“ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಎಚ್‌ಎಎಲ್‌ ವಿಶೇಷ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಾಕ್‌-ಐ ಯುದ್ಧ ವಿಮಾನ ಪರಿಣಾಮಕಾರಿ ಬಳಕೆಗೆ ಅನುಕೂಲ ಆಗಲಿದೆ’ ಎಂದು ಎಚ್‌ಎಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧವನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ತರಬೇತಿ ವಿಮಾನದಿಂದ ಯುದ್ಧ ವಿಮಾನ
ಈ ಯುದ್ಧ ವಿಮಾನವು ಭಾರತೀಯ ಸೇನೆಯ ಅನುದಾನಿತ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗಿದೆ. 2014ರಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಯಿತು. 2017ರ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್‌, ಹಾಕ್‌-ಐ ಯುದ್ಧ ವಿಮಾನವನ್ನು ಅನಾವರಣಗೊಳಿಸಿತು. ಈ ಮೊದಲು ಇದು ತರಬೇತಿ ವಿಮಾನವಾಗಿತ್ತು. ನಂತರದಲ್ಲಿ ಇದನ್ನು ಶತ್ರುಗಳ ಮೇಲೆ ಶಸ್ತ್ರಗಳ ಮಳೆಗರೆಯುವ ಅತ್ಯಾಧುನಿಕ ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗಿದೆ. ಆಗಸದಲ್ಲಿ ಮತ್ತೂಂದು ಶತ್ರು ಯುದ್ಧ ವಿಮಾನದ ಮೇಲೆ ಆಕ್ರಮಣ ಹಾಗೂ ಆಗಸದಿಂದ ನೆಲದಲ್ಲಿರುವ ಶತ್ರು ನೆಲೆಗಳನ್ನು ಧ್ವಂಸಗೊಳಿಸಲು ಎರಡೂ ಸಾಮರ್ಥ್ಯವನ್ನು ಇದು ಹೊಂದಿದೆ. ಅಂದಹಾಗೆ, “ಹಾಕ್‌’ ಎನ್ನುವುದು ಇಂಗ್ಲೆಂಡ್‌ ಮೂಲದ ಬ್ರಿಟಿಷ್‌ನ ಬಿಎಇ ಕಂಪೆನಿಯಿಂದ ಬಂದಿದೆ. 1974ರಲ್ಲಿ ಮೊದಲ ಬಾರಿಗೆ “ಹಾಕ್‌’ ವಿಮಾನ ಹಾರಾಟ ನಡೆಸಿತ್ತು. ಹಾಕ್‌ ಇಂದು ಭಾರತವು ಸೇರಿದಂತೆ 12 ದೇಶಗಳಲ್ಲಿ ಹಾರಾಟ ನಡೆಸುತ್ತಿದೆ.

– 100 ಕಿ.ಮೀ. ದೂರದ ಶತ್ರುಗಳ ನೆಲೆ ಧ್ವಂಸಗೊಳಿಸುವ ಸಾಮರ್ಥ್ಯ
– 125 ಕೆಜಿ ಶ್ರೇಣಿಯ ಅತ್ಯಾಧುನಿಕ ವ್ಯವಸ್ಥೆ
– 2014ರಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು
– ತರಬೇತಿ ವಿಮಾನ ಈಗ ಯುದ್ಧ ವಿಮಾನವಾಗಿ ರೂಪಾಂತರ
– ಒಡಿಶಾದ ಕರಾವಳಿಯಲ್ಲಿ ಯಶಸ್ವಿ ಪರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next