ಬೆಂಗಳೂರು: ಟಿಕೆಟ್ ಹಂಚಿಕೆಯ ದಿನಗಳು ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಹೊಸ ಅಸ್ತ್ರವೊಂದನ್ನು ಪಕ್ಷದ ವರಿಷ್ಠರ ಮುಂದಿಟ್ಟಿರುವುದು ಹೊಸ ಬೆಳವಣಿಗೆ.
ಅಲ್ಪಸಂಖ್ಯಾಕ ಸಮುದಾಯದ ಪ್ರಾಬಲ್ಯವುಳ್ಳ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುವುದರ ಜತೆಗೆ ಇತರ ಕ್ಷೇತ್ರಗಳಲ್ಲೂ ಟಿಕೆಟ್ ನೀಡಬೇಕು, ಇದುವರೆಗೆ ಟಿಕೆಟ್ ನೀಡುತ್ತಿದ್ದ ಸಾಂಪ್ರದಾಯಿಕ ಕ್ಷೇತ್ರಗಳಲ್ಲದೆ ಹೊಸದಾಗಿ 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದು ಈಗ ಇತರರಿಗೆ ನುಂಗಲಾರದ ತುತ್ತಾಗಿದೆ. ಕೇವಲ ನಮ್ಮನ್ನು ವೋಟ್‌ಬ್ಯಾಂಕ್ ಆಗಿ ಪರಿಗಣಿಸಬೇಡಿ, ಇತರ ಕ್ಷೇತ್ರಗಳಲ್ಲೂ ಟಿಕೆಟ್ ಕೊಟ್ಟು ನಮ್ಮನ್ನು ಗೆಲ್ಲಿಸಿ, ನಾವು ಪಕ್ಷವನ್ನು ಗೆಲ್ಲಿಸುತ್ತೇವೆಂದು ಒತ್ತಡ ಹೇರುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಇಬ್ಬರು ಜೈನರು, ಇಬ್ಬರು ಕ್ರಿಶ್ಚಿಯನ್ನರು ಸೇರಿ 22 ಮಂದಿ ಅಲ್ಪಸಂಖ್ಯಾಕರಿಗೆ ಟಿಕೆಟ್ ನೀಡಲಾಗಿತ್ತು.
ಕಾಗವಾಡದಿಂದ ಶ್ರೀಮಂತ ಪಾಟೀಲ್, ಮೂಡುಬಿದಿರೆಯಿಂದ ಅಭಯಚಂದ್ರ ಜೈನ್‌ಗೆ ಟಿಕೆಟ್ ನೀಡಲಾಗಿತ್ತು. ಈ ಇಬ್ಬರು ಜೈನ ಸಮುದಾಯಕ್ಕೆ ಸೇರಿದವರು. ಆನಂತರ ಶ್ರೀಮಂತ ಪಾಟೀಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಇತಿಹಾಸ. ಇನ್ನು ಸರ್ವಜ್ಞನಗರದಿಂದ ಕೆ.ಜೆ. ಜಾರ್ಜ್ ಹಾಗೂ ಮಂಗಳೂರು ನಗರ ದಕ್ಷಿಣದಿಂದ ಜಾನ್ ರಿಚರ್ಡ್ ಲೋಬೋಗೆ ಟಿಕೆಟ್ ಕೊಡಲಾಗಿತ್ತು. ಅದರಲ್ಲಿ ಜಾರ್ಜ್ ಮಾತ್ರ ಗೆದ್ದಿದ್ದರು.
ಇನ್ನು ಬೆಳಗಾವಿ ಉತ್ತರದಿಂದ ಫಿರೋಜ್ ಶೇಠ್ , ವಿಜಯಪುರದಿಂದ ಅಬ್ದುಲ್ ಹಮೀದ್ ಮುಶ್ರಫ್, ಕಲುಬುರಗಿ ಉತ್ತರದಿಂದ ಫಾತಿಮಾ ಖಮರುಲ್ ಇಸ್ಲಾಂ, ಬೀದರ್‌ನಿಂದ ರಹೀಂಖಾನ್, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ, ಶಿಗ್ಗಾಂವಿಯಿಂದ ಸಯ್ಯದ್ ಖಾದ್ರಿ, ತುಮಕೂರು ನಗರದಿಂದ ಡಾ| ರಫೀಕ್ ಅಹ್ಮದ್, ಕೋಲಾರದಿಂದ ಜಮೀರ್ ಪಾಷಾ, ಶಿವಾಜಿನಗರದಿಂದ ರೋಷನ್ ಬೇಗ್, ಚಾಮರಾಜಪೇಟೆಯಿಂದ ಜಮೀರ್ ಅಹ್ಮದ್, ರಾಮನಗರದಲ್ಲಿ ಇಕ್ಬಾಲ್ ಹುಸೇನ್, ಮಂಗಳೂರು ನಗರ ಉತ್ತರದಿಂದ ಮೊದಿನ್ ಬಾವಾ, ಮಂಗಳೂರಿನಿಂದ ಯು.ಟಿ. ಖಾದರ್, ಮೈಸೂರಿನ ನರಸಿಂಹರಾಜದಿಂದ ತನ್ವೀರ್ ಶೇಠ್, ಶಾಂತಿನಗರದಿಂದ ಹ್ಯಾರೀಸ್‌ಗೆ ಟಿಕೆಟ್ ನೀಡಲಾಗಿತ್ತು. ಇವರಲ್ಲಿ ಖಾದರ್, ರಹೀಂ ಖಾನ್, ಫಾತಿಮಾ, ತನ್ವೀರ್ ಶೇಠ್, ಜಮೀರ್ ಅಹ್ಮದ್, ಹ್ಯಾರೀಸ್ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ರೋಷನ್ ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆಯಲ್ಲಿ ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಆಯ್ಕೆಯಾಗಿದ್ದಾರೆ. ಹೀಗಾಗಿ ಸದ್ಯ ವಿಧಾನಸಭೆಯಲ್ಲಿ 7 ಮಂದಿ ಮುಸ್ಲಿಂ ಶಾಸಕರಿದ್ದಾರೆ.
ಈ ಕ್ಷೇತ್ರಗಳ ಜತೆಗೆ ಮಾಜಿ ಸಿಎಂ ಬಿಜೆಪಿಯ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಹಾಗೂ ಅಮೃತ ದೇಸಾಯಿ ಪ್ರತಿನಿಧಿಸುವ ಧಾರವಾಡ ಗ್ರಾಮೀಣ (ಈ ಹಿಂದೆ ವಿನಯ್ ಕುಲಕರ್ಣಿ ಆಯ್ಕೆಯಾಗಿದ್ದ ಕ್ಷೇತ್ರ), ಹೊಸಪೇಟೆ, ದಾವಣಗೆರೆ ದಕ್ಷಿಣ ಹಾಗೂ ಯಾದಗಿರಿ ಕ್ಷೇತ್ರಗಳಲ್ಲೂ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಜೈನರು ಹಾಗೂ ಕ್ರಿಶ್ಚಿಯನ್ನರನ್ನು ಹೊರತುಪಡಿಸಿ ಮುಸ್ಲಿಂ ಸಮುದಾಯಕ್ಕೆ 21 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದರೆ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗಲಿವೆ ಎಂಬ ಲೆಕ್ಕಾಚಾರವನ್ನು ಪಕ್ಷದ ವರಿಷ್ಠರ ಮುಂದಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.