ನವದೆಹಲಿ:ಭಾರತದಲ್ಲಿ ಕೋವಿಡ್ 19 ವೈರಸ್ ನ ಹಾಟ್ ಸ್ಪಾಟ್ ಜಿಲ್ಲೆಗಳ ಸಂಖ್ಯೆ ಕಳೆದ 15 ದಿನಗಳಲ್ಲಿ 170ರಿಂದ 129ಕ್ಕೆ ಇಳಿಕೆಯಾಗಿರುವುದಾಗಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೋವಿಡ್ 19 ಸೋಂಕು ರಹಿತ ಜಿಲ್ಲೆಗಳ(ಹಸಿರು ವಲಯ) ಸಂಖ್ಯೆ ಕೂಡಾ 325ರಿಂದ 307ಕ್ಕೆ ಇಳಿಕೆಯಾಗಿದೆ ಎಂದು ವಿವರಿಸಿದ್ದಾರೆ. ಮತ್ತೊಂದೆಡೆ ಹಾಟ್ ಸ್ಪಾಟ್ ರಹಿತ ಜಿಲ್ಲೆ(ಆರೆಂಜ್ ಜೋನ್)ಗಳ ಸಂಖ್ಯೆ 207ರಿಂದ 297ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಏಪ್ರಿಲ್ 15ರಂದು ಜಿಲ್ಲೆಗಳನ್ನು ಮೂರು ಕೆಟಗರಿಯನ್ನಾಗಿ ವಿಂಗಡಿಸಿತ್ತು. ಅತೀ ಹೆಚ್ಚು ಕೋವಿಡ್ 19 ಪ್ರಕರಣಗಳು ಪತ್ತೆಯಾದ ಪ್ರದೇಶವನ್ನು ಹಾಟ್ ಸ್ಪಾಟ್ ಅಥವಾ ರೆಡ್ ಜೋನ್ ಎಂದು, ಶ್ವಾಸಕೋಶದ ಸೋಂಕು ಇರುವ ಪ್ರದೇಶಗಳನ್ನು ಆರೆಂಜ್ ಜೋನ್ ಅಥವಾ ಹಾಟ್ ಸ್ಪಾಟ್ ರಹಿತ ಹಾಗೂ ಕೋವಿಡ್ 19 ಪ್ರಕರಣಗಳು ಇಲ್ಲದೇ ಇರುವ ಜಿಲ್ಲೆಗಳನ್ನು ಹಸಿರು ವಲಯ ಎಂದು ವಿಂಗಡಿಸಿತ್ತು.
ಒಂದು ವೇಳೆ ಕಳೆದ 14 ಅಥವಾ 28ದಿನಗಳಿಂದ ಯಾವುದೇ ಹೊಸ ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗದಿದ್ದಲ್ಲಿ ರೆಡ್ ಜೋನ್ ಅಥವಾ ಆರೆಂಜ್ ಜಿಲ್ಲೆಗಳನ್ನು ಹಸಿರು ವಲಯ ಎಂದು ಗುರುತಿಸಲಾಗುತ್ತದೆ. ಏಪ್ರಿಲ್ 15ರಂದು ಕೇಂದ್ರ ಸರ್ಕಾರ ದೇಶದ 25 ರಾಜ್ಯಗಳ 170 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಟ್ ಸ್ಪಾಟ್ ಎಂದು ಘೋಷಿಸಿತ್ತು.
ಇದರಲ್ಲಿ 123 ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡಿತ್ತು. 47 ಜಿಲ್ಲೆಗಳನ್ನು ಕ್ಲಸ್ಟರ್ ಎಂದು ವಿಭಾಗಿಸಲಾಗಿತ್ತು. ಇದರಲ್ಲಿ 325 ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್ ಗೆ ಸಂಬಂಧಿಸಿದ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ತಿಳಿಸಿತ್ತು.