ಇಸ್ಲಾಮಾಬಾದ್ : ಇದೇ ಆಗಸ್ಟ್ 11ರಂದು ಪಾಕಿಸ್ಥಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಗೆ ಪ್ರತಿ ಪಕ್ಷಗಳಿಂದ ಯಾವುದೇ ಸವಾಲು ಎದುರಾಗದಿದ್ದರೂ ದೇಶದ ಸಂಪೂರ್ಣವಾಗಿ ಹದಗೆಟ್ಟ ಆರ್ಥಿಕತೆಯನ್ನು ಮೇಲೆತ್ತಲು ಬಿಲಿಯಗಟ್ಟಲೆ ಡಾಲರ್ ಅಗತ್ಯದ ಅತೀ ದೊಡ್ಡ ಸವಾಲು ಕಾಡಲಿದೆ.
ತೀವ್ರವಾಗಿ ಹದಗೆಟ್ಟಿರುವ ಮತ್ತು ದಿವಾಳಿ ಅಂಚಿಗೆ ತಲುಪಿರುವ ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರಲು ಇಮ್ರಾನ್ ಖಾನ್‌ಗೆ ಈಗ ತತ್‌ಕ್ಷಣಕ್ಕೆ ಕನಿಷ್ಠ 12 ಶತಕೋಟಿ ಡಾಲರ್ ನೆರವು ಬೇಕಾಗಿದೆ.
ಇಷ್ಟು ದೊಡ್ಡ ಮೊತ್ತದ ನೆರವಿಗಾಗಿ ಪಾಕಿಸ್ಥಾನ ಐಎಂಎಫ್ ಕಡೆ ಮುಖ ಮಾಡಬೇಕಿದೆ. 2013ರಲ್ಲಿ ಪಾಕಿಸ್ಥಾನ IMF ನಿಂದ 6.6 ಬಿಲಿಯ ಡಾಲರ್ ಸಾಲ ಪಡೆದಿತ್ತು. ಆದರೆ ಈಗ ಕೇವಲ ಐದೇ ವರ್ಷದಲ್ಲಿ ಪಾಕಿಸ್ಥಾನಕ್ಕೆ ಇದರ ದುಪ್ಪಟ್ಟು ಹಣದ ಅಗತ್ಯವಿದೆ. ಆದರೆ ಈ ಹಣ IMF ನಿಂದ ಸಿಗುವುದು ಖಚಿತವಿಲ್ಲ ಎಂಬ ಸ್ಥಿತಿ ಈಗ ಒದಗಿದೆ.
ಚೀನದಿಂದ ಪಡೆದಿರುವ ಭಾರೀ ಮೊತ್ತದ ಸಾಲವನ್ನು ಮರು ಪಾವತಿಸುವ ಸಲುವಾಗಿ ಇಮ್ರಾನ್ ಖಾನ್ ಅವರ ಪಾಕಿಸ್ಥಾನ ಈಗಿನ್ನು ಐಎಂಎಫ್ ನಿಂದ ಪಡೆಯಲು ಪ್ರಯತ್ನಿಸುವ ಯಾವುದೇ ಸಾಲದ ಮೇಲೆ ತೀವ್ರ ನಿಗಾ ಇಡುವುದಾಗಿ ಅಮೆರಿಕ ಈಗಾಗಲೇ ಎಚ್ಚರಿಕೆ ನೀಡಿದೆ.
ಪಾಕ್ ಬಳಿ ಈಗ 10.3 ಶತಕೋಟಿ ಡಾಲರ್ ವಿದೇಶಿ ವಿನಿಮಯ ಮೀಸಲು ನಿಧಿ ಇದೆ ಎಂದು ಹಿಂದಿನ ಸರಕಾರ ಹೇಳಿತ್ತು. ಆದರೆ ಈ ಮೊತ್ತ ಕೇವಲ ಎರಡು ತಿಂಗಳ ಆಮದಿಗೆ ಕೂಡ ಸಾಲದಾಗಿದೆ.
ದೇಶದಲ್ಲಿ ಬ್ರಹ್ಮಾಂಡದ ಪ್ರಮಾಣಕ್ಕೆ ಬೆಳೆದಿರುವ ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಸಮರ ಸಾರುವುದು ಮತ್ತು ಆಮದು ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸುವುದು ಇಮ್ರಾನ್ ಮುಂದಿರುವ ಗುರುತರ ಸವಾಲಾಗಿದೆ.
ಈ ಸಂದರ್ಭದಲ್ಲಿ ಪಾಕಿಸ್ಥಾನ, ಚೀನ ಮತ್ತು ಸೌದಿ ಅರೇಬಿಯದ ಮುಂದೆ ಕೈಚಾಚುವುದು ಅನಿವಾರ್ಯವಾಗುತ್ತದೆ. ಚೀನದಿಂದ ಹೆಚ್ಚೆಚ್ಚು ಸಾಲ ಪಡೆದರೆ ಉಂಟಾಗುವ ರಾಜಕೀಯ-ಭೌಗೋಳಿಕ ಪರಿಣಾಮ ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟಾಗುತ್ತದೆ ಎಂಬುದನ್ನು ಈಗಾಗಲೇ ಲಂಕಾ ಮೊದಲಾದ ದೇಶಗಳು ಕಂಡುಕೊಂಡಿವೆ.