ಹೊಸದಿಲ್ಲಿ : ವಿವಿಧ ದೇಶಗಳ ಸ್ಥಾಪನಾ ದಿನಾಚರಣೆಯಂದು ಆಯಾ ದೇಶಗಳ ಮುಖ್ಯಸ್ಥರಿಗೆ ಪತ್ರ ಬರೆದು ಅಭಿನಂದಿಸುವ ರಾಜತಾಂತ್ರಿಕ ವಾಡಿಕೆಯನ್ವಯ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ರಾಷ್ಟ್ರೀಯ ದಿನಾಚರಣೆಯಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಸಹಿ ಇಲ್ಲದ ಪತ್ರ ಬರೆದು ಅಭಿನಂದಿಸಿದ್ದಾರೆ.
ಭಾರತಕ್ಕೆ ಯಾವೆಲ್ಲ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧ ಇದೆಯೋ ಆ ದೇಶಗಳ ಮುಖ್ಯಸ್ಥರಿಗೆ ಅವುಗಳ ಸ್ಥಾಪನಾ ದಿನದಂದು ಪ್ರಧಾನಿ ಪತ್ರ ಬರೆದು ಅಭಿನಂದಿಸುವುದು ವಾಡಿಕೆ. ಮಾರ್ಚ್ 23 ಪಾಕ್ ರಾಷ್ಟ್ರೀಯ ದಿನವಾಗಿದೆ.
ಪ್ರಧಾನಿ ಮೋದಿ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಬರೆದಿರುವ ಅಭಿನಂದನ ಪತ್ರದಲ್ಲಿ “ಪಾಕಿಸ್ಥಾನದ ರಾಷ್ಟ್ರೀಯ ದಿನದ ಈ ಸಂದರ್ಭದಲ್ಲಿ ನಾನು ಪಾಕ್ ಜನತೆಗೆ ನನ್ನ ಅಭಿನಂದನೆ ಮತ್ತು ಶುಭ ಹಾರೈಕೆಗಳನ್ನು ತಿಳಿಸಬಯಸುತ್ತೇನೆ. ಅಂತೆಯೇ ದಕ್ಷಿಣ ಏಶ್ಯ ಉಗ್ರ ಮುಕ್ತ, ಹಿಂಸಾ ಮುಕ್ತವಾಗಲೆಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.
ಪ್ರತ್ಯೇಕತಾವಾದಿ ಹುರಿಯತ್ ನಾಯಕರಿಗೆ ದಿಲ್ಲಿಯಲ್ಲಿನ ಪಾಕ್ ಹೈಕಮಿಷನ್ ಆಹ್ವಾನ ನೀಡಿರುವ ಕಾರಣ ಭಾರತ ದಿಲ್ಲಿಯಲ್ಲಿನ ಪಾಕ್ ಹೈಕಮಿಷನ್ ಕಾರ್ಯಾಲಯದಲ್ಲಿ ಇಂದು ಶನಿವಾರ ನಡೆಯುವ ಪಾಕ್ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿರುವುದಾಗಿ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಬರೆದಿರುವ ಪತ್ರವನ್ನು ಸ್ವಾಗತಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಕೇಂದ್ರ ವಿಷಯವಾಗಿರುವ ಕಾಶ್ಮೀರ ಸಹಿತ ಎಲ್ಲ ವಿಷಯಗಳನ್ನು ಇತ್ಯರ್ಥ ಪಡಿಸುವಲ್ಲಿನ ಉಭಯ ದೇಶಗಳ ನಡುವಿನ ಸಮಗ್ರ ಮಾತುಕತೆಗೆ ಇದು ನಾಂದಿ ಎಂದು ವರ್ಣಿಸಿದ್ದಾರೆ.