ಇಸ್ಲಾಮಾಬಾದ್: ಭಾರತಕ್ಕೆ ಬೆಂಬಲವಾಗಿ ನಿಂತಿರುವ ಬಲಿಷ್ಠ ರಾಷ್ಟ್ರವೊಂದು ಪಾಕಿಸ್ಥಾನದ ವಿರುದ್ಧ ಕೋಪಗೊಂಡಿದೆ. ಇದಕ್ಕೆ, ನಾನು ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಪುತಿನ್‌ರನ್ನು ಭೇಟಿ ಮಾಡಿದ್ದೇ ಕಾರಣ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಇದೇ ವೇಳೆ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿದ್ದಾರೆ. “ಪಾಕಿಸ್ಥಾನಕ್ಕೂ ಭಾರತದಂತೆಯೇ ಸ್ವತಂತ್ರ ವಿದೇಶಾಂಗ ನೀತಿ ಇರಬೇಕಿತ್ತು. ಬಲಿಷ್ಠ ರಾಷ್ಟ್ರಗಳ ಮೇಲೆ ಅವಲಂಬಿತವಾಗಿರುವ ವಿದೇಶಾಂಗ ನೀತಿಯಿಂದಾಗಿ ಪಾಕ್ ತನ್ನ ನೈಜ ಅಂತಃಶಕ್ತಿಗೆ ತಕ್ಕಂತೆ ಬೆಳೆಯಲು ಸಾಧ್ಯವಾಗಲಿಲ್ಲ’ ಎಂದು ವಿಷಾದಿಸಿದ್ದಾರೆ.
ಖಾನ್ ದಂಪತಿ ಭದ್ರತೆ ಹೆಚ್ಚಳ: ಇದೇ 3ರಂದು ತಮ್ಮ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಅಗ್ನಿಪರೀಕ್ಷೆ ಎದುರಿಸಲಿರುವ ಖಾನ್ ಹಾಗೂ ಅವರ ಪತ್ನಿಗೆ ಪ್ರಾಣ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅವರ ಭದ್ರತೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ಇಲಾಖೆ ತಿಳಿಸಿದೆ.
ಅಮೆರಿಕ ರಾಯಭಾರಿಗೆ ಸಮನ್ಸ್: ಪಾಕ್ ಸರಕಾರ ಕೆಡವಲು ಅಮೆರಿಕವೇ ಪತ್ರ ರವಾನಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿರುವ ಹಿನ್ನೆಲೆ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕದ ರಾಯಭಾರಿಗೆ ಶುಕ್ರವಾರ ಸಮನ್ಸ್ ಜಾರಿಗೊಳಿಸಿರುವ ಪಾಕ್ ಸರಕಾರ, “ತನ್ನ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು ಸರಿಯಲ್ಲ’ ಎಂದು ಖಾರವಾಗಿ ಹೇಳಿದೆ.