ವಾಷಿಂಗ್ಟನ್: ವಿಶ್ವ ಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ತೆರಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಂಡಿದ್ದ ಟ್ರಂಪ್ ಭಾರತಕ್ಕೆ ಸಂಪೂರ್ಣ ನೆರವು ಮತ್ತು ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಅಪಾರ ಸಂಖ್ಯೆಯ ಭಾರತೀಯ ಮೂಲದ ಅಮೆರಿಕನ್ನರನ್ನು ನೋಡಿ ಟ್ರಂಪ್ ಖುಷಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಿದ್ಧತೆಯಲ್ಲಿರುವ ಟ್ರಂಪ್ ಅವರಿಗೆ ಹೌಡಿ ಮೋದಿ ಕಾರ್ಯಕ್ರಮ ದೊಡ್ಡ ಬಲವನ್ನು ತಂದುಕೊಟ್ಟಿದೆ.
ಇನ್ನು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನವನ್ನು ಭಾರತ ಹಿಂಪಡೆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ನಡೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ನೇರವಾಗಿ ಕಾಶ್ಮೀರ ಕುರಿತು ಮಾತುಗಳನ್ನಾಡದಿದ್ದರೂ, ತನ್ನ ದೇಶದ ಗಡಿಯನ್ನು ರಕ್ಷಿಸಿಕೊಳ್ಳುವ ಭಾರತ ಪ್ರಯತ್ನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದು ಪರೋಕ್ಷವಾಗಿ ಪಾಕ್ ವಿರುದ್ಧದ ಮಾತುಗಳು ಎಂದು ಬಣ್ಣಿಸಲಾಗುತ್ತದೆ.
ಈ ಕುರಿತು ಇಂದು ಟ್ರಂಪ್ ಭೇಟಿಯಾಗಲಿರುವ ಇಮ್ರಾನ್ ಕಾಶ್ಮೀರದಲ್ಲಿ ಭಾರತದ ಕೈಗೊಂಡ ನಿರ್ಣಯದ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಸಾಧ್ಯತೆ ಇದೆ.
ಸೆ. 24ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು, ಸೆ. 27ರಂದು ಸಭೆಯಲ್ಲಿ ಇಮ್ರಾನ್ ಖಾನ್ ಮಾತನಾಡುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಕಾಶ್ಮೀರವನ್ನು ಪಾಕ್ ಪ್ರಧಾನಿ ಪ್ರಸ್ತಾವಿಸುವ ಸಾಧ್ಯತೆ ಇದೆ.