ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನೊಂದಿಗೆ ನಂಟು ಹೊಂದಿದ ಶಂಕೆಯೊಂದಿಗೆ ಆಲುವಾ ಪೊಲೀಸರು ಬಂಧಿಸಲು ಜಿಲ್ಲೆಯ ಚಂದೇರಕ್ಕೆ ಬಂದಾಗ ಪರಾರಿಯಾಗಿದ್ದ ಉತ್ತರ ಪ್ರದೇಶ ನಿವಾಸಿ ಯುವಕನನ್ನು ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮುಸಾಫಿರ್ ನಗರ ನಿವಾಸಿ ಅಹ್‌ಲಾಬಿನ್ ಆಲಿಯಾಸ್ ಇಮ್ರಾನ್ (25)ನನ್ನು ಬಂಧಿಸಲಾಗಿದೆ. ಯು.ಪಿ.ಯಿಂದ ಕೇರಳಕ್ಕೆ ಬಂದು ಎರ್ನಾಕುಳಂ ಜಿಲ್ಲೆಯ ಮುಸ್ತಫಾ ನಗರದಲ್ಲಿ ರಸ್ತೆ ಬದಿ ಜವುಳಿ ವ್ಯಾಪಾರ ನಡೆಸುತ್ತಿದ್ದ ಅಹ್‌ಲಾಬಿನ್ ಕೇರಳದ ಹಲವು ಜಿಲ್ಲೆಗಳಲ್ಲಿ ಸಾಗಿ ಜವುಳಿ ವ್ಯಾಪಾರ ಜತೆಗೆ ರಹಸ್ಯವಾಗಿ ಐಸಿಸ್ ಚಟುವಟಿಕೆ ನಡೆಸುತ್ತಿದ್ದನೆಂದು ಶಂಕಿಸಲಾಗಿತ್ತು. ಈ ಮಧ್ಯೆ ಆತ ಎರ್ನಾಕುಳಂನ ಆಲುವಾ ವಸತಿಗೃಹವೊಂದರಲ್ಲಿ ಪತ್ನಿಯೊಂದಿಗೆ ಉಳಕೊಂಡಿದ್ದ. ಈ ಸಂದರ್ಭ ಆತ ಉಗ್ರಗಾಮಿ ಚಟುವಟಿಕೆಯಲ್ಲಿ ನಿರತ ನಾಗಿರುವುದನ್ನು ಶಂಕಿಸಿದ ಪತ್ನಿ ಪ್ರಶ್ನಿಸಿದ್ದಳು. ಈ ಕಾರಣದಿಂದ ಇವರ ಮಧ್ಯೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆತ ನಾಪತ್ತೆಯಾಗಿದ್ದ.
ಉಗ್ರಗಾಮಿ ಸಂಘಟನೆಯೊಂದಿಗೆ ಆತ ಹೊಂದಿರುವ ನಂಟನ್ನು ತಾನು ಪೊಲೀಸರಿಗೆ ತಿಳಿಸುವ ಸಾಧ್ಯತೆ ಇದೆ ಎಂಬ ಶಂಕೆಯಿಂದ ಆತ ಪರಾರಿಯಾಗಿರಬಹುದು ಎಂದು ಪತ್ನಿ ಪೊಲೀಸರಲ್ಲಿ ತಿಳಿಸಿದ್ದಳು. ಅಲ್ಲದೆ ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಳು.
ಇದೇ ಸಂದರ್ಭ ಎಂಟು ತಿಂಗಳ ಹಿಂದೆ ದಲ್ಲಾಳಿಯ ಮುಖಾಂತರ ಹೊಸದುರ್ಗ ತಾಲೂ ಕಿನ ತೃಕ್ಕರಿಪುರದ ಬಡ ಕುಟುಂಬವೊಂದರ ಯುವತಿಯನ್ನು ವಿವಾಹವಾಗಿದ್ದ. ಐಸಿಸ್ ನಂಟಿನ ಬಗ್ಗೆ ಮೊದಲ ಹೆಂಡತಿ ನೀಡಿದ ದೂರಿನಂತೆ ಆಲುವಾ ಪೊಲೀಸರು ತೃಕ್ಕರಿಪುರಕ್ಕೆ ಬಂದಾಗ ಆತ ಅಲ್ಲಿಂದ ಪರಾರಿಯಾಗಿದ್ದ. ಇದರಿಂದ ದ್ವಿತೀಯ ಪತ್ನಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ, ಆತನ ಮೊಬೈಲ್ ನಂಬ್ರ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ದಿಲ್ಲಿಯಲ್ಲಿರುವ ವಿಷಯ ತಿಳಿಯಿತು. ಆಲುವಾ ಪೊಲೀಸರು ದಿಲ್ಲಿಗೆ ತೆರಳಿ ಅಲ್ಲಿನ ಪೊಲೀಸರ ನೆರವಿನೊಂದಿಗೆ ಆತನನ್ನು ಬಂಧಿಸಿ ಆಲುವಾಕ್ಕೆ ಕರೆತಂದಿದ್ದಾರೆ. ಈತನ ಐಸಿಸ್ ನಂಟಿನ ಬಗ್ಗೆ ಹಾಗೂ ಕೇರಳದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಿದ್ದನೇ ಎಂಬ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
ಈತನಿಗೆ ವಿವಾಹ ಮಾಡಿದ ದಲ್ಲಾಳಿ ನಾಪತ್ತೆಯಾ ಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ.