Advertisement

ಧಾರ್ಮಿಕ ಸ್ಥಳಗಳಲ್ಲಿ ಅಶುದ್ಧ ಪರಿಸರ; ನಗರಸಭೆಗೆ ಅಲೆದೂ ಅಲೆದೂ ಸುಸ್ತಾದ ಭಕ್ತರು

12:08 AM Feb 24, 2020 | Sriram |

ನಿಟ್ಟೂರು: ಈ ಮಂದಿರದಲ್ಲಿ ನಿತ್ಯವೂ ಸಾಕಷ್ಟು ಮಂದಿ ಗುರುಗಳ ದರ್ಶನಕ್ಕೆ ಬರುತ್ತಾರೆ. ಹಾಗೆ ಬಂದವರು ಪ್ರಶಾಂತ ಪರಿಸರ ಬಯಸುವುದು ಸಹಜ. ಧ್ಯಾನ, ಪೂಜೆ ಮುಗಿಸಿ ಹೋಗುವುದು ಅಭ್ಯಾಸ. ಇವೆಲ್ಲವೂ ಸುಖ ಸಂತೋಷಕ್ಕಾಗಿ ಆಚರಿಸುತ್ತಿರುವ ಸಂಪ್ರ ದಾಯವಷ್ಟೇ ಅಲ್ಲ; ಅವರ ಬದುಕಿನ ನಂಬಿಕೆ. ಇವೆಲ್ಲದಕ್ಕೂ ಅಡ್ಡಿಯಾಗಿ ರುವುದು ಇಂದ್ರಾಣಿ ನದಿಯಲ್ಲಿ ಹರಿ ಯುತ್ತಿರುವ ಕೊಳಚೆ ನೀರು.

Advertisement

ಕಂಬಳಕಟ್ಟದ ಸೇತುವೆ ಬಳಿ ಇರುವ ಶ್ರೀ ಸಾಯಿಬಾಬಾ ಮಂದಿರಕ್ಕೆ ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ಸುತ್ತಲಿನ ಮತ್ತು ಅಕ್ಕಪಕ್ಕದ ಪ್ರದೇಶಗಳ ಜನರೂ ಭೇಟಿ ನೀಡುತ್ತಾರೆ. ಅವರೆಲ್ಲರೂ ಉಸಿರು ಬಿಗಿ ಹಿಡಿದುಕೊಂಡು ಕಷ್ಟಪಟ್ಟು ಗುರುಗಳ ದರ್ಶನ ಪಡೆದು ಹೋಗುವ ಅನಿವಾರ್ಯತೆ. ಯಾಕೆಂದರೆ, ಪಕ್ಕದಲ್ಲೇ ಹರಿದು ಹೋಗುವ ಇಂದ್ರಾಣಿ ನದಿಯ ಕೊಳಚೆ ನೀರು ಇಡೀ ಧಾರ್ಮಿಕ ಪರಿಸರವನ್ನೇ ಹಾಳುಗೆಡವಿದೆ.

ಈ ಮಾತು ಬರೀ ಸಾಯಿಬಾಬ ಮಂದಿರಕ್ಕಷ್ಟೇ ಅನ್ವಯಿಸುತ್ತಿಲ್ಲ. ಇಂದ್ರಾಣಿ ನದಿ ಹರಿದು ಹೋಗುವ (ವಿಶೇಷವಾಗಿ ಮಠದಬೆಟ್ಟುವಿನ ಬಳಿಕ ಬೊಬ್ಬರ್ಯ ಪಾದೆವರೆಗೂ) ಸುಮಾರು 50 ಕ್ಕೂ ಹೆಚ್ಚು ದೇವಸ್ಥಾನ, ದೈವಸ್ಥಾನ ಹಾಗೂ ಮೂಲ ಸ್ಥಾನಗಳಿವೆ. ಇಲ್ಲೆಲ್ಲಾ ಸಾವಿರಾರು ಮಂದಿ ನಿತ್ಯವೂ ಮನಸ್ಸಿನ ನೆಮ್ಮದಿಯನ್ನು ಅರಸಿ ಭೇಟಿ ಕೊಡುತ್ತಾರೆ. ಅವರೆಲ್ಲರೂ ಈ ಕೊಳಚೆ ನೀರಿನ, ದುರ್ವಾಸನೆಯ ಕಿರಿಕಿರಿ ಅನುಭವಿಸಲೇಬೇಕು.

ಉದಯವಾಣಿ ಸುದಿನ ಅಧ್ಯಯನ ತಂಡವು ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟಾಗ ಮಾತಿಗೆ ಸಿಕ್ಕ ಹಲವು ಭಕ್ತರ ಸಮಸ್ಯೆಯೊಂದೇ. “ನಾವು ಹೇಳುವಷ್ಟು ಹೇಳಿದ್ದೇವೆ, ಮನವಿ ಮಾಡುವಷ್ಟು ಮಾಡಿದ್ದೇವೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಏನು ಮಾಡಬೇಕೋ ತೋಚುವುದಿಲ್ಲ. ಹಾಗಾಗಿಯೇ ಇದನ್ನೇ ಅನುಭವಿಸು ತ್ತಿದ್ದೇವೆ’ ಎನ್ನುತ್ತಾರೆ.

ಬೆಳಗ್ಗೆ ಒಂದು, ಸಂಜೆ ಎರಡುರಾತ್ರಿ ಹೊತ್ತಿನಲ್ಲಿ ಪೂರ್ತಿ ಶುದ್ಧೀಕರಿ ಸದೇ ಬಿಡುವ ಕೊಳಚೆ ನೀರಿನ ವಾಸನೆ ಬೆಳಗ್ಗೆವರೆಗೂ ಆವರಿಸಿರುತ್ತದೆ. ಒಂದು ಸಣ್ಣ ಗಾಳಿ ಬೀಸಿದರೂ ಹೊಟ್ಟೆ ತೊಳೆಸುವಂತೆ ದುರ್ವಾಸನೆ ಮೂಗಿಗೆ ಬಡಿ ಯುತ್ತದೆ. ಉದಾಹರಣೆಗೆ ಕೊಡವೂರಿನ ಮುಕ್ತಿಧಾಮದ ಅಶ್ವತ್ಥಕಟ್ಟೆ ಬಳಿ ಹೋಗಿ ನಿಂತುಕೊಂಡರೆ ಸಾಕು. ಸಾಯಿ ಬಾಬಾ ಮಂದಿರದ ಬಳಿ ಹೋದರೂ ಇದೇ ಸಮಸ್ಯೆ. ಅಲ್ಲಿಂದ ಕಲ್ಮಾಡಿ ಮಾರಿಗುಡಿ ಬಳಿ ಹೋದರೂ ಸಮಸ್ಯೆ ತಪ್ಪಿದ್ದಲ್ಲ.

Advertisement

ಬೆಳಗ್ಗೆ ಈ ದುರ್ವಾಸನೆಯ ಸಮಸ್ಯೆಯಾದರೆ, ಸಂಜೆಯಾಗುವಾಗ ದುರ್ವಾ ಸನೆಯೊಂದಿಗೆ ಸೊಳ್ಳೆಗಳ ಕಾಟವೂ ಹೆಚ್ಚುತ್ತದೆ. ಇದಕ್ಕೆ ಏನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿ ಭಕ್ತರು ಇದ್ದಾರೆ. ಕೊಡವೂರು ಮುಕ್ತಿಧಾಮದ ಬಳಿ ಆಗುತ್ತಿರುವ ಸಮಸ್ಯೆಯನ್ನು ಈ ಹಿಂದಿನ ಲೇಖನದಲ್ಲೂ ವಿವರಿಸಲಾಗಿತ್ತು. ಅಲ್ಲಿಯೂ ಇದೇ ಸಮಸ್ಯೆ. ನದಿಯ ಪ್ರಶಾಂತ ಪರಿಸರವೇ ಹಾಳಾಗಿದೆ. ಹಾಗೆಂದು ಧಾರ್ಮಿಕ ಮಂದಿರಗಳ ಟ್ರಸ್ಟಿಗಳು, ಮುಖ್ಯಸ್ಥರು ಹಾಗೂ ಭಕ್ತರು ಸುಮ್ಮನೆ ಕುಳಿತಿಲ್ಲ. ಹಲವು ಬಾರಿ ನಗರಸಭೆಗೆ ದೂರು ನೀಡಿದ್ದಾರೆ. ಆದರೆ ಯಾವುದೂ ಪ್ರಯೋಜನವಾಗದ ಮೇಲೆ ಅಸಹಾಯಕರಾಗಿ ಸುಮ್ಮ ನಾಗಿದ್ದಾರೆ. ಇದೇ ಅಭಿಪ್ರಾಯ ಹಲವೆಡೆ ಕೇಳಿಬಂದಿತು.

ಶ್ರೀ ಸಾಯಿಬಾಬ ಮಂದಿರದ ಟ್ರಸ್ಟಿ ದಿವಾಕರ ಶೆಟ್ಟಿಯವರು ಹೇಳುವಂತೆ, ಇಂದ್ರಾಣಿ ನದಿಯಲ್ಲಿ ಹರಿಯುವ ಕೊಳಚೆ ನೀರಿನಿಂದಾಗಿ ಸಾಯಿಬಾಬ ಮಂದಿರ ಸುತ್ತಮುತ್ತಲಿನ ಪ್ರದೇಶದಲ್ಲಿ ಉಸಿರಾಡಲು ಕಷ್ಟವಾಗುತ್ತಿದೆ. ಈ ಬಗ್ಗೆ ಲೆಕ್ಕವಿಲ್ಲದಷ್ಟು ಬಾರಿ ನಗರಸಭೆಗೆ ದೂರು ನೀಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಒಂದು ವರ್ಷದಿಂದ ದೂರು ನೀಡುವುದನ್ನು ನಿಲ್ಲಿಸಿದ್ದೇವೆ. ಭಕ್ತರಿಗಾಗಿ 2 ಲ.ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ ಎನ್ನುತ್ತಾರೆ.

ಭಜನ ಮಂದಿರಗಳದ್ದೂ ಇದೇ ಸ್ಥಿತಿ
ಇಂದ್ರಾಣಿ ನದಿ ತೀರದಲ್ಲಿ ಹಲವು ಭಜನ ಮಂದಿರಗಳೂ ಇವೆ. ಅಲ್ಲಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಯಾರಲ್ಲೂ ಏನನ್ನೂ ಹೇಳಲಾಗದ ಪರಿಸ್ಥಿತಿ ಭಕ್ತರದ್ದಾಗಿದೆ.

ಬೊಬ್ಬರ್ಯ ಪಾದೆ
ಬಳಿ ಮತ್ತೂಂದು ಸಮಸ್ಯೆ
ಮಲ್ಪೆಯ ಬೊಬ್ಬರ್ಯ ಪಾದೆ ಮೀನುಗಾರರ ಆರಾಧ್ಯ ದೈವ ಇರುವ ಸ್ಥಳ. ಇಲ್ಲಿಯ ಸಮಸ್ಯೆ ಇನ್ನೂ ವಿಚಿತ್ರದ್ದು. ಕಲ್ಮಾಡಿ ಕಡೆಯಿಂದ ಬರುವ ಕೊಳಚೆ ಇಲ್ಲಿಗೆ ಸೇರಿದರೆ, ಹತ್ತಿರದಲ್ಲಿ ಕಪ್ಪೆಟ್ಟು, ಮಜ್ಜಿಗೆ ಪಾದೆ ಕಡೆಯಿಂದ ಕಿನ್ನಿಮೂಲ್ಕಿ ವೆಟ್‌ವೆಲ್‌ ನಿಂದ ಆಗಾಗ್ಗೆ ಬಿಡುವ ಕೊಳಚೆ ನೀರು ಬಗ್ಗುಮುಂಡದ ಬಳಿ ಸೇರುತ್ತದೆ. ಇದರಿಂದ ಸುತ್ತಲಿನ ವಾತಾವರಣ ಅಸಹನೀಯವಾಗಿದೆ.

ಇಲ್ಲಿಯ ಬಾವಿ ನೀರೂ ಹಾಳಾಗಿದೆ. ಆದರೆ ಇದಕ್ಕೆ ಹತ್ತಿರದಲ್ಲೇ ಇರುವ ಸಮುದ್ರದ ಉಪ್ಪು ನೀರು ಸೇರುವಿಕೆಯೂ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಕೊಳಚೆ ನೀರಿನಿಂದಲೂ ಬಾವಿಗಳು ಹಾಳಾಗಿರುವುದನ್ನು ಸಂಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ.

ಧಾರ್ಮಿಕ ಸ್ಥಳಗಳು ಇರುವುದು ಮನಸ್ಸಿನಲ್ಲಿ ಮತ್ತಷ್ಟು ನೆಮ್ಮದಿ ತುಂಬಿಕೊಳ್ಳಲಿಕ್ಕಾಗಿ. ನಿತ್ಯದ ಗಜಿಬಿಜಿಯಿಂದ ಪ್ರಶಾಂತ ಮತ್ತು ಶುದ್ಧ ಪರಿಸರವನ್ನು ಅರಸಿ ಭಕ್ತಾದಿಗಳು ಈ ಧಾರ್ಮಿಕ ಸ್ಥಳಗಳಿಗೆ ಬರುತ್ತಾರೆ. ಅಲ್ಲಿ ಕೇವಲ ಶಾಂತತೆ (ಗಲಾಟೆ ಇಲ್ಲದ )ಇದ್ದರಷ್ಟೇ ಸಾಲದು ; ಪರಿಸರವೂ ಶುದ್ಧವಾಗಿರಬೇಕು. ಅದನ್ನು ಕಲ್ಪಿಸಬೇಕಾದದ್ದು ನಗರಾಡಳಿತದ ಮೂಲ ಕರ್ತವ್ಯಗಳಲ್ಲಿ ಒಂದು. ಆದರೆ ಇಂದ್ರಾಣಿ ನದಿ ತೀರದಲ್ಲಿ ಬರುವ ಸುಮಾರು ಐವತ್ತಕ್ಕೂ ಹೆಚ್ಚು ಧಾರ್ಮಿಕ ಸ್ಥಳಗಳ ಪರಿಸರ ಹಾಳಾಗಿರುವುದು ನಗರಸಭೆಯ ನಿರ್ವಹಣೆಯ ಕೊರತೆಯಿಂದ ನದಿಗೆ ಸೇರುತ್ತಿರುವ ಕೊಳಚೆಯಿಂದ. ಈ ಬಗ್ಗೆ ಧಾರ್ಮಿಕ ತಾಣಗಳ ಮುಖ್ಯಸ್ಥರು, ಭಕ್ತಾದಿಗಳು ನಗರಸಭೆಗೆ ದೂರು ಕೊಟ್ಟೂ, ಕೊಟ್ಟೂ ಸುಸ್ತಾಗಿ ಆ ದೇವರೇ ಬುದ್ಧಿ ಕೊಡಲಿ ಎಂದು ಸುಮ್ಮನಾಗಿದ್ದಾರೆ. ಆದರೂ ನಗರಸಭೆಯವರು ತಲೆ ಕೆಡಿಸಿಕೊಂಡಿಲ್ಲ. ಈಗಲಾದರೂ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು ಒಗ್ಗಟ್ಟಾಗಿ ಹೋರಾಡಬೇಕಿದೆ.

ಶ್ರೀ ಶಂಕರನಾರಾಯಣ ದೇವರಿಗೆ ಕೋಪ !
ಈ ಮಾತೂ ನಿಜ. ಹತ್ತಿರದಲ್ಲೇ ಇರುವ ಇಂದ್ರಾಣಿ ನದಿ ನೀರು ಅಶುದ್ಧವಾಗಿರುವುದಕ್ಕೆ ಕೊಡವೂರು, ಮಲ್ಪೆ ಪ್ರದೇಶದ ಗ್ರಾಮ ದೇವರು ಕೊಡವೂರು ಶ್ರೀ ಶಂಕರನಾರಾಯಣ ದೇವರಿಗೆ ಕೋಪ ಬಂದಿದೆ.

2013 ರಲ್ಲಿ ಅಷ್ಟಮಂಗಳ ಪ್ರಶ್ನೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿತ್ತು. ಶ್ರೀ ಶಂಕರನಾರಾಯಣ ದೇವರಿಗೆ ಪಕ್ಕದ ನದಿಯಲ್ಲಿನ ಅಶುಚಿತ್ವ (ಕೊಳಚೆ ನೀರು ಸೇರುತ್ತಿರುವುದು)ದಿಂದ ಕೋಪ ಬಂದಿದೆ. ಕೊಳಚೆ ನೀರು ದೇವರ ಲಿಂಗಕ್ಕೆ ಸೋಕದಂತೆ ಎಚ್ಚರಿಕೆ ವಹಿಸಬೇಕು. ಅದಕ್ಕೆ ಏನು ಬೇಕೋ ಸೂಕ್ತ ವಾದುದನ್ನು ಮಾಡಿ ಎಂಬ ಅಭಿಪ್ರಾಯ ಬಂದಿತ್ತು. ಆ ಹಿನ್ನೆಲೆಯಲ್ಲಿ ಆಗಿನ ಸಮಿತಿ ಉದ್ಭವ ಲಿಂಗವನ್ನು ಶೋಧಿಸಿ, ಶುದ್ಧೀಕರಿಸಿ ವ್ಯವಸ್ಥೆ ಮಾಡಿತ್ತು.

ಆಗಿನ ಅಷ್ಟಮಂಗಳ ಪ್ರಶ್ನೆ ನೇತೃತ್ವ ವಹಿಸಿದ್ದ ಪ್ರವೀಣ್‌ ತಂತ್ರಿಯವರು ಉದಯವಾಣಿ ತಂಡದೊಂದಿಗೆ ಮಾತನಾಡಿ, “ಕೊಳಚೆ ನೀರು ನದಿಯಲ್ಲಿ ಹರಿಯುತ್ತಿರುವುದು ದೇವರ ಕೋಪಕ್ಕೆ ಕಾರಣ ವಾಗಿತ್ತು. ಆ ಸಂಗತಿ ಪ್ರಶ್ನೆ ಸಂದರ್ಭ ಬಂದಿತ್ತು. ಹಾಗಾಗಿ 21 ಅಡಿಯಲ್ಲಿ ಉದ್ಭವ ಲಿಂಗವನ್ನು ಶೋಧಿಸಿ, ಬಳಿಕ ಮರಳಿನಲ್ಲಿ ಮುಚ್ಚಿ ಯಾವುದೇ ಕಾರಣಕ್ಕೂ ಕೊಳಚೆ ನೀರು ತಾಗ ದಂತೆ ಎಲ್ಲ ವ್ಯವಸ್ಥೆ ಮಾಡಿ, ಚಿನ್ನದ ಸರಿಗೆಯಿಂದ ಮೂರ್ತಿಗೆ ಸಂಪರ್ಕ ಕಲ್ಪಿಸಲು ಸೂಚಿಸ ಲಾಗಿತ್ತು. ಅದರಿಂದ ಉದ್ಭವಲಿಂಗದ ಚೈತನ್ಯ ಶಕ್ತಿಯ ಅನುಗ್ರಹ ಭಕ್ತರಿಗೆ ಸಿಗಲಿದೆ ಎಂದು ಹೇಳಿದ್ದೆವು’ ಎಂದು ತಿಳಿಸಿದ್ದಾರೆ.

ಆಗಿನ ದೇವಸ್ಥಾನದ ಮೊಕ್ತೇಸರರಾದ ರಾಘವೇಂದ್ರ ರಾವ್‌ ಅವರೂ, ಅಷ್ಟ ಮಂಗಳ ಪ್ರಶ್ನೆಯಲ್ಲಿ ಬಂದ ಹಾಗೆ ನಾವು ಕ್ರಮ ಕೈಗೊಂಡಿ ದ್ದೇವೆ. ಗ್ರಾಮದ ಆರೋಗ್ಯ ಮುಖ್ಯ. ಈ ಹಿನ್ನೆಲೆಯಲ್ಲಿ ಸೂಕ್ತವೆನಿಸಿದ್ದನ್ನು ಎಲ್ಲರ ಒಪ್ಪಿಗೆಯಂತೆ ಕೈಗೊಳ್ಳಲಾಗಿದೆ. ಪಕ್ಕದ ದೇವರ ಕೆರೆ ಇತ್ಯಾದಿ ಎಲ್ಲವೂ ಕೊಳಚೆ ನೀರಿನಿಂದ ಅಶುದ್ಧವಾಗಿದೆ’ ಎಂದು ಸುದಿನ ತಂಡಕ್ಕೆ ತಿಳಿಸಿದ್ದಾರೆ.

ಈಗಿನ ಮೊಕ್ತೇಸರ ಪ್ರಕಾಶ್‌ ಕೊಡವೂರು ಅವರು, “ದೇವಸ್ಥಾನಕ್ಕೆ ನೇರವಾಗಿ ಸಮಸ್ಯೆ ಆಗಿದ್ದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಒಳಗಿನ ಬಾವಿ ನೀರಿಗೆ ಇನ್ನೂ ಸಮಸ್ಯೆಯಾಗಿಲ್ಲ. ಹಾಗಾಗಿ ಈ ಸಂಬಂಧ ಯಾರಿಗೂ ದೂರು ಕೊಟ್ಟಿಲ್ಲ’ ಎನ್ನುತ್ತಾರೆ.

ಕೆಲವು ಧಾರ್ಮಿಕ ಸ್ಥಳಗಳು
1. ಬನ್ನಂಜೆ ನಿಡಂಬೂರು ಗರಡಿ
2. ಬನ್ನಂಜೆ ನಾಗಬನ
3. ಮಠದ ಬೆಟ್ಟು ಶಂಕರನಾರಾಯಣ ದೇವಸ್ಥಾನ
4. ಅಡ್ಕದ ಕಟ್ಟೆ – ಭಂಡಾರ ಮನೆ
5. ಜುಮಾದಿ
6. ಶಾರದಾ ಹೊಟೇಲ್‌ ಸಮೀಪದ ನಾಗ ಬನ
7. ಕೊಡಂಕೂರು ಬಬುಸ್ವಾಮಿ
8. ಕಂಬಳ ಸಿರಿ ಕುಮಾರ
9. ಕಾವೇರಡಿ ಬೊಬ್ಬರ್ಯ
10. ಸಾಯಿಬಾಬ ಮಂದಿರ
11. ಪಂಜುರ್ಲಿ ಪರಿವಾರ
12. ಬಾಚನ ಬೈಲು ನಾಗಬನ
13. ರಕ್ತೇಶ್ವರಿ ಕೊಡವೂರು
14. ಕೊಡವೂರು ಮೂಡುಗಣಪತಿ
15. ಮುಕ್ತಿಧಾಮ
16. ಬಾಚನ ಬೈಲು ಬೊಬ್ಬರ್ಯ
17. ಕೊಡವೂರು ಶಂಕರನಾರಾಯಣ ದೇವಸ್ಥಾನ
18. ಕಲ್ಮಾಡಿ ಮಾರಿಗುಡಿ
19. ಕಾನಂಗಿ ಸಮೀಪದ ವಿವಿಧ ದೈವ ಹಾಗೂ ಮೂಲ ಸ್ಥಾನ
20. ಕಲ್ಮಾಡಿ ಸಮೀಪದಲ್ಲಿ 10-15 ದೈವಸ್ಥಾನ ಹಾಗೂ ಮೂಲ ಸ್ಥಾನ ನಾಗ ಬನ
21. ಮಲ್ಪೆ ಬೊಬ್ಬರ್ಯ ಪಾದೆ
22.ಕಂಬಳಕಟ್ಟ ಮಹಾಲಿಂಗೇಶ್ವರ ದೇವಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next