Advertisement

ಶಿಕ್ಷಣ ವ್ಯವಸ್ಥೆ ಸುಧಾರಿಸುವುದೇ ಮಕ್ಕಳ ಬಜೆಟ್‌?

10:13 AM Dec 16, 2019 | mahesh |

ಮಕ್ಕಳಿಗೆ ಶಿಕ್ಷಣ ನೀಡುವುದು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ, ಅದಕ್ಕೆ ಮೂಲ ಸೌಲಭ್ಯಗಳನ್ನು, ಸೌಕರ್ಯಗಳನ್ನು ಹಾಗೂ ಸಾಧನ ಸಲಕರಣೆಗಳನ್ನು ಒದಗಿಸುವುದು ಸಹ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಶಿಕ್ಷಣಕ್ಕೆ ಪೂರಕವಾಗಿರುವ ಶಾಲಾ ಕಟ್ಟಡ, ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಕರ ನೇಮಕ, ಶೌಚಾಲಯ ವ್ಯವಸ್ಥೆ ಒದಗಿಸುವುದು ಆಯಾ ಸರಕಾರಗಳ ಆದ್ಯ ಕರ್ತವ್ಯ. ಇದರ ಜೊತೆಗೆ ಸರಕಾರಗಳು ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಹತ್ತು ಹಲವು ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸುತ್ತಿವೆ. ಆದರೆ, ಹಣಕಾಸಿನ ಕೊರೆತೆಯಿಂದ, ಇಲಾಖೆಗಳ ನಿರ್ಲಕ್ಷ್ಯದಿಂದ, ಅವೈಜ್ಞಾನಿಕ ಕ್ರಿಯಾ ಯೋಜನೆಗಳಿಂದ, ಅನುದಾನಗಳು ಸರಿಯಾಗಿ ದೊರೆಯದೇ ಎಷ್ಟೋ ಯೋಜನೆಗಳು ಅರ್ಧದಲ್ಲಿಯೇ ನಿಂತು ಹೋಗುವುದನ್ನು ನಾವು ಪದೇ ಪದೇ ನೋಡುತ್ತಿರುತ್ತೇವೆ. ಇದು ಸರಕಾರಿ ಶಾಲೆಗಳ ಪ್ರತಿಷ್ಠೆಯನ್ನು ಕೆಳ ದರ್ಜೆಗೆ ತಳ್ಳುವಂತೆ ಮಾಡಿದೆ.

Advertisement

ಕರ್ನಾಟಕದ ವಿಷಯಕ್ಕೆ ಬರುವುದಾದರೆ, ಪ್ರತಿ ವರ್ಷ ಮಕ್ಕಳಿಗೆ ಬೇಕಾಗಿರುವ ಪಠ್ಯ ಪುಸ್ತಕಗಳು ವರ್ಷದ ಮಧ್ಯದಲ್ಲಿಯೋ ಅಥವಾ ಇನ್ನೂ ಕೆಲವು ಬಾರಿ ಅಂತ್ಯದಲ್ಲಿ ಬಂದದ್ದು ಇದೆ. ಸಮವಸ್ತ್ರಗಳು ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಈ ವಿಚಾರವಾಗಿ ನ್ಯಾಯಾಂಗವು ಸರಕಾರಕ್ಕೆ ನಿರ್ದೇಶನ ನೀಡಿದ ನಿದರ್ಶನ ಸಹ ಇದೆ. ಇತ್ತೀಚೆಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನೀಡಿರುವ ಮಾಹಿತಿ ಆಧರಿಸಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ತೀರಾ ದುಸ್ಥಿತಿಯಲ್ಲಿರುವ ಸರಕಾರಿ ಶಾಲಾ ಕಟ್ಟಡಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಆ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಸೂಚಿಸಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ದಡ್ಡಲಕಾಡು ಸರ್ಕಾರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಚರಣ್ಯ ತನ್ನ ಶಾಲೆಯ ಒಂದನೇ ತರಗತಿಯ 78 ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ ತಿಂಗಳವರೆಗೆ ಪಠ್ಯಪುಸ್ತಕಗಳು ಸರಬರಾಜು ಆಗದಿದ್ದಾಗ, ಮಾನ್ಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಳು. ಇದಕ್ಕೆ ಸ್ಪಂದಿಸಿ ಸಚಿವರು, 24 ಗಂಟೆಯಲ್ಲಿ ಪುಸ್ತಕ ಶಾಲೆಗೆ ತಲುಪುವ ವ್ಯವಸ್ಥೆ ಮಾಡಿದರು. ಇನ್ನೊಂದೆಡೆ, ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಯು “ಭಯಂಕರ ಮಳೆಗಾಲವಿದೆ. ಹಾಗೆಯೇ ಚಳಿಗಾಲದಲ್ಲಿ ಬಟ್ಟೆಯೇ ಒಣಗುವುದಿಲ್ಲ. ವರ್ಷಪೂರ್ತಿ ಒಂದೇ ಬಟ್ಟೆ, ಒಂದೇ ಸಮವಸ್ತ್ರದಲ್ಲಿ ಶಾಲೆಗೆ ಹೋಗುವಂತಹ ಪರಿಸ್ಥಿತಿ ಇದೆ. ಕೆಲವೊಮ್ಮೆ ಹಸಿ ಬಟ್ಟೆಯಲ್ಲೇ ಶಾಲೆಗೆ ಹೋಗಬೇಕು. ಇನ್ನೊಂದು ಜೊತೆ ಸಮವಸ್ತ್ರ ಕೊಡಿಸಿ’ ಎಂಬ ಕೋರಿಕೆಯೊಡನೆ ರಾಜ್ಯ ಹೈಕೋರ್ಟ್‌ಗೆ ಬರೆದಿದ್ದ ಪತ್ರವನ್ನೇ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನಾಗಿ ದಾಖಲಿಸಿಕೊಂಡಿದ್ದ ರಾಜ್ಯ ಹೈಕೋರ್ಟ್‌ ಈ ಬಗ್ಗೆ ವಿಚಾರಣೆ ನಡೆಸಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ನೀಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಿತ್ತು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಎರಡು ಜೊತೆ ಸಮವಸ್ತ್ರ ನೀಡುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾಯ ಪೀಠವು ಎಲ್ಲ ವಿದ್ಯಾರ್ಥಿಗಳಿಗೆ ತಲಾ ಎರಡು ಜೊತೆ ಸಮವಸ್ತ್ರವನ್ನು ಪ್ರಸಕ್ತ ವರ್ಷದಿಂದಲೇ ನೀಡುವಂತೆ ಆದೇಶಿಸಿತ್ತು. ಆದರೆ, ಇದು ಇನ್ನೂ ಮಕ್ಕಳಿಗೆ ದೊರೆತಿಲ್ಲ.

ಈ ಮೂರು ಘಟನೆಗಳಿಂದ ನಮಗೆ ಸ್ಪಷ್ಟವಾಗಿ ತಿಳಿಯುವ ಸಂಗತಿಯೆಂದರೆ, ಮಕ್ಕಳಿಗೆ ತೀರಾ ಅಗತ್ಯವಾಗಿ ಬೇಕಾಗಿರುವ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಶಾಲಾ ಕಟ್ಟಡಗಳನ್ನು ಒದಗಿಸಲು ನ್ಯಾಯಾಂಗವು ನಿರ್ದೇಶನ ಮಾಡುವ ಅಥವಾ ನ್ಯಾಯಾಂಗದ ಮೊರೆ ಹೋಗಿ ಪಡೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದಕ್ಕೆ ಅನುದಾನದ ಕೊರೆತೆ ಪ್ರಮುಖವಾದದ್ದು ಎಂದು ಹೇಳಬಹುದು.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಲಪ್ತ ಸಮಯದಲ್ಲಿ ಎಲ್ಲ ಸವಲತ್ತುಗಳು ದೊರೆಯಬೇಕಾದರೆ ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್‌ ತರುವುದು ಅನಿವಾರ್ಯವಾಗಿದೆ. ಭಾರತದಲ್ಲಿ ಮಕ್ಕಳ ಬಜೆಟ್‌ನ ಕಲ್ಪನೆ 2000ನೇ ಇಸವಿಯಿಂದ ಪ್ರಾರಂಭವಾಯಿತು. ಆದರೆ, ಇದು ಆರ್ಥಿಕ ಬಜೆಟ್‌ ಭಾಗವೇ ಆಗಿತ್ತು. ನಂತರದ ದಿನಗಳಲ್ಲಿ ಕೇಂದ್ರ ಹಣಕಾಸು ಮಂತ್ರಿಗಳು ಇದನ್ನು ಪ್ರತ್ಯೇಕವಾಗಿ ಘೋಷಿಸಿದರು. ವಿವಿಧ ಸಂಘಟನೆಗಳು ಪ್ರತ್ಯೇಕ ಬಜೆಟ್‌ ಜಾರಿಗಾಗಿ 2003ರಿಂದ ಸರ್ಕಾರ ಹಾಗೂ ಯುನಿಸೆಫ್ ಮೇಲೆ ಒತ್ತಡ ತಂದಿವೆ. ಮೊದಲು ಮಾದರಿಯಾಗಿ ಆಂಧ್ರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಒಡಿಸಾದಲ್ಲಿ ಆರಂಭಿಸಲಾಯಿತು. ನಂತರ 2005ರಲ್ಲಿ  ಜಾ ರ್ಖಂಡ್‌, 2006ರಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಪ್ರಾರಂಭಿಸಿದರು. ಹೊರ ದೇಶದಲ್ಲಿಯೂ ಈ ಯೋಜನೆ ಜಾರಿಯಲ್ಲಿದೆ. ಈಗ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಬಜೆಟ್‌ ಮಂಡನೆಯಾಗಲಿದೆ. ಮಾರ್ಚ್‌ನಲ್ಲಿ ಮಂಡನೆಯಾಗಲಿರುವ 2020-21ನೇ ಸಾಲಿನ ಆಯವ್ಯಯದಲ್ಲಿ ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಮ ಕೇಂದ್ರೀಕೃತ ನಿರ್ವಹಣೆಗೆ ಅನುಕೂಲವಾಗುವ ರೀತಿ ಮಕ್ಕಳ ಬಜೆಟ್‌ನ್ನು ಮಂಡಿಸಲು ಹಣಕಾಸು ಇಲಾಖೆ ಸಿದ್ಧತೆ ಆರಂಭಿಸಿದೆ. ಇದರ ಮುಖ್ಯ ಉದ್ದೇಶ ಮಕ್ಕಳ ಹಕ್ಕು ಉಲ್ಲಂಘನೆ ತಡೆಯುವುದು, ಇಲಾಖೆಗಳಲ್ಲಿ ಮಕ್ಕಳಿಗಾಗಿಯೇ ಇರುವ ಯೋಜನೆ ಗಳ ಯಥಾವತ್‌ ಜಾರಿ ಮಾಡುವುದಾಗಿದೆ.

Advertisement

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳು ಶ್ರಮಿಸಬೇಕಾಗಿದೆ. ಆರ್‌ಟಿಇ ಕಾಯಿದೆಯ ಸೆಕ್ಷನ್‌ 9ರಲ್ಲಿ ಸ್ಥಳೀಯ ಸರಕಾರಗಳ ಜವಾಬ್ದಾರಿಗಳ ಬಗ್ಗೆ (ಎ) ಯಿಂದ (ಎಮ್‌) ವರೆಗೆ ಸವಿವರವಾಗಿ ವಿವರಿಸಲಾಗಿದೆ. ಆದರೆ, ಸ್ಥಳೀಯ ಆಡಳಿತಗಳು ಮತ್ತು ಇತರ ಇಲಾಖೆಗಳು ಶಾಲಾ ಮತ್ತು ಮಕ್ಕಳ ಅಭಿವೃದ್ಧಿಯ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಇನ್ನೊಂದೆಡೆ, ಪ್ರತಿ ಇಲಾಖೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರತ್ಯೇಕ ಅನುದಾನ ಮೀಸಲಿಡದಿರುವುದು ಸಹ ತೊಡಕಾಗಿದೆ. ಇನ್ನು, ಪ್ರತಿ ಇಲಾಖೆಯಲ್ಲೂ ಅನುದಾನ ಹಾಗೂ ಮಕ್ಕಳ ಆಧಾರಿತ ಕಾರ್ಯಕ್ರಮಗಳಿದ್ದರೂ ಸರಿಯಾಗಿ ನಿರ್ವಹಣೆ ಆಗದೆ ಬೇರೆ ಬೇರೆ ಉದ್ದೇಶಗಳಿಗೆ ಹಣ ಬಳಕೆ ಆಗುತ್ತಿದೆ.

ಇದನ್ನು ತಡೆಯಲು ಮತ್ತು ಪ್ರತಿ ಇಲಾಖೆಗಳು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಭಾಗಿಯಾಗಲು ಮಕ್ಕಳ ಬಜೆಟ್‌ ಸಹಕಾರಿಯಾಗಲಿದೆ. ಪ್ರಸ್ತುತ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ. 40 ಮಕ್ಕಳಿದ್ದಾರೆ. ಮಕ್ಕಳ ಕೇಂದ್ರಿತ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಶೇ. 12 ಹಣ ಮೀಸಲಿಡಬೇಕು ಎಂಬ ಒತ್ತಾಯಗಳು ಸಹ ಇದೆ.

ಮುಂದುವರಿದು ಈ ಮಕ್ಕಳ ಬಜೆಟ್‌ನಲ್ಲಿ ಮಕ್ಕಳ ಹಕ್ಕು ಕಾಪಾಡುವುದು, ಬಾಲಾಪರಾಧಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಕೃಷಿಯಲ್ಲಿ ತರಬೇತಿ ಹಾಗೂ ದುಡಿಮೆ ನಿಷೇಧ, ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ಮತ್ತು ಇತರ ಸವಲತ್ತುಗಳನ್ನು ಸರಿಯಾದ ಸಮಯಕ್ಕೆ ಒದಗಿಸುವ ಯೋಜನೆಯನ್ನು ಮಾಡಲಾಗಿದೆ. ಎಲ್ಲ ಇಲಾಖೆ ಗಳಲ್ಲಿಯೂ ಮಕ್ಕಳ ಆಧಾರಿತ ಕಾರ್ಯಕ್ರಮಗಳಿದ್ದರೂ ಜಾರಿಗೊಳಿಸಲು ಹಣಕಾಸಿನ ಕೊರತೆ ಇದ್ದೇ ಇದೆ. ಕೆಲ ಇಲಾಖೆಗಳಲ್ಲಿ ಹಣ ಇದ್ದರೂ ಕೊನೇ ಹಂತದಲ್ಲಿ ತರಾತುರಿಯಲ್ಲಿ ಅನಗತ್ಯವಾಗಿ ವೆಚ್ಚ ಮಾಡಲಾಗುತ್ತದೆ. ಇವುಗಳಿಗೆ ಕಡಿವಾಣ ಹಾಕುವುದಕ್ಕೆ ಮಕ್ಕಳ ಬಜೆಟ್‌ ಕಾರಣವಾಗಲಿ.

ಅಂತಿಮವಾಗಿ ಹೇಳುವುದಾದರೆ, ಪ್ರತಿ ಸರಕಾರಗಳೂ ಶೈಕ್ಷಣಿಕ ವಿಚಾರಗಳನ್ನು ಕಡೆಗಣಿಸುತ್ತಲೇ ಬಂದಿವೆ. ಇನ್ನಾದರೂ ಮಕ್ಕಳ ಬಜೆಟ್‌ನಿಂದ ಪ್ರತಿ ಇಲಾಖೆಗಳು ಸಮನ್ವಯದೊಂದಿಗೆ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಂಡು, ಅನುದಾನವನ್ನು ಸರಿಯಾಗಿ ಬಳಸಿಕೊಂಡು, ರಾಜ್ಯದಲ್ಲಿ ಸಂವಿಧಾನದ ಮತ್ತು ಆರ್‌.ಟಿ.ಇ ಕಾಯಿದೆಯ ಅನ್ವಯ ಉತ್ತಮ ಶಿಕ್ಷಣ ದೊರೆಯುವಂತೆ ನೋಡಿ ಕೊಳ್ಳಲಿ ಎಂದು ಹಾರೈಸೋಣ.

– ದಿಲೀಪ್‌ ಕುಮಾರ್‌ ಸಂಪಡ್ಕ

Advertisement

Udayavani is now on Telegram. Click here to join our channel and stay updated with the latest news.

Next