ಬೀದರ: ಹೃದಯರೋಗ ಸಂಬಂಧಿತ ಆಸ್ಪತ್ರೆಗಳ ಸುಧಾರಣೆ ಅಗತ್ಯವಿದೆ. ಆಸ್ಪತ್ರೆಗಳು ಕೇವಲ ಹಣ ಗಳಿಕೆಗಾಗಿ ಸ್ಪರ್ಧೆಗಿಳಿಯದೇ ಜನರ ಆರೋಗ್ಯ ಸುಧಾರಣೆಗೆ ಮುಂದಾಗಬೇಕೆಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸಕ ಡಾ| ವಿವೇಕ ಜವಳಿ ಸಲಹೆ ನೀಡಿದರು.
ನಗರದ ಗುದಗೆ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ಕ್ಯಾಥಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹೃದಯ ಸಂಬಂಧಿ ರೋಗಿಗಳ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಸುವರ್ಣ ಆರೋಗ್ಯ ಟ್ರಸ್ಟ್ ನಡಿ ಜಾರಿಯಾದ ಆಯುಷ್ಮಾನ ಭಾರತ ಹಾಗೂ ಆರೋಗ್ಯ ಕರ್ನಾಟಕ ಸೇರಿದಂತೆ ಇತರೆ ಯೋಜನೆಗಳು ಬಡ ಜನರಿಗೆ ಹೆಚ್ಚು ಅನುಕುಲವಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ 75 ಸೇರಿ ರಾಜ್ಯಾದ್ಯಂತ 175 ಹೃದಯರೋಗ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಕನಿಷ್ಟ 10 ಲಕ್ಷ ಜನರ ಪೈಕಿ 800 ಜನರಿಗೆ ಅನುಕೂಲವಾಗುವಂತೆ ಹೃದಯ ಸಂಬಂಧಿ ಆಸ್ಪತ್ರೆಗಳಿಗೆ ಅವಕಾಶ ಇರಬೇಕು. ಅವು ಹೆಚ್ಚಾದರೆ ಜನರಿಗೆ ಪರಿಣಾಮಕಾರಿ ಚಿಕಿತ್ಸೆ ದೊರಕಲು ಸಾಧ್ಯವಾಗುವುದಿಲ್ಲ. ದೇಶದಲ್ಲೇ ಮಹಾರಾಷ್ಟ್ರ, ಕೇರಳ ನಂತರ ಕರ್ನಾಟಕವೇ ಹೃದಯ ಸಂಬಂಧಿ ಚಿಕಿತ್ಸೆ ನೀಡಿಕೆಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ ಸಂಗತಿ ಎಂದರು.
ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ವಾಸಿಸುವ ಪ್ರತಿ ಏಳು ಜನರಲ್ಲಿ ಒಬ್ಬರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದು ಮುಂದೆ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸಾತ್ವಿಕ ಆಹಾರ ಸೇವನೆ, ವ್ಯಾಯಾಮ, ದುಶ್ಚಟಗಳ ದೂರ ಇರಬೇಕು. ಸೂಕ್ತ ಚಿಕಿತ್ಸೆಯಿಂದ ಶೇ.80ರಷ್ಟು ಹೃದ್ರೋಗಿಗಳು ಕಾಯಿಲೆಯಿಂದ ಪಾರಾಗಬಹುದು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಬೀದರನಲ್ಲಿ ಬ್ರಿಮ್ಸ್ ಆರಂಭ ಬಳಿಕ ಸಾಕಷ್ಟು ಸ್ಟೆಷಾಲಿಟಿ ಆಸ್ಪತ್ರೆಗಳು ಸ್ಥಾಪನೆಯಾಗುತ್ತಿದ್ದು, ಇರಿಂದ ಚಿಕಿತ್ಸೆಗಾಗಿ ಮಹಾ ನಗರಗಳಿಗೆ ಹೋಗುವುದು ತಪ್ಪಿದೆ. ಗುದಗೆ ಆಸ್ಪತ್ರೆಯ ಅತ್ಯಾಧುನಿಕ ಕ್ಯಾಥಲ್ಯಾಬ್‌ನ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಶಾಸಕ ರಾಜಶೇಖರ ಪಾಟೀಲ, ಹೃದಯ ರೋಗ ತಜ್ಞ ಡಾ| ನಿತೀನ್ ಗುದಗೆ ಮಾತನಾಡಿದರು.
ಎನ್.ಬಿ ರೆಡ್ಡಿ ಗುರೂಜಿ, ಶಾಸಕ ರಹೀಮ್ ಖಾನ್, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಕೆಆರ್‌ಇ ಸಂಸ್ಥೆ ಅಧ್ಯಕ್ಷ ಡಾ| ಬಸವರಾಜ ಪಾಟೀಲ, ಅಭಿಷೇಕ ಪಾಟೀಲ, ಪ್ರತಿಮಾ ಬಹೇನ್, ಶಕುಂತಲಾ ಬೆಲ್ದಾಳೆ, ಬಾಬುರಾವ ಗುದಗೆ, ಬಿ.ಎಸ್ ಕುದರೆ, ವೈಜಿನಾಥ ಕಮಠಾಣೆ, ಡಾ| ಚನ್ನಬಸಪ್ಪ ಹಾಲಹಳ್ಳಿ, ಶಿವಶರಣಪ್ಪ ವಾಲಿ, ಬಸವರಾಜ ಪಾಟೀಲ, ಬಸವರಾಜ ಜಾಬಶೆಟ್ಟಿ, ಸುಮಿತ್ ಮೋರ್ಗೆ, ಡಾ| ಜನಾರ್ಧನ, ಡಾ| ಸ್ವಾತಿ, ಡಾ| ನಾಗಭೂಷಣ ಎಂ., ಡಾ| ಮಹೇಶ ತೊಂಡಾರೆ ಇದ್ದರು.