ಹುಮನಾಬಾದ: ಪ್ರಶ್ನೆ ಕೇಳುವ ಸ್ವಭಾವ ಮೈಗೂಡಿಸಿಕೊಳ್ಳುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಪಾಲಕರು ಹಾಗೂ ಶಿಕ್ಷಕರು ತಾಳ್ಮೆ ಕಳೆದುಕೊಳ್ಳದೇ ಪ್ರತಿಕ್ರಿಯಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಶಿಕ್ಷಣ ತಜ್ಞೆ ಹಾಗೂ ಮಕ್ಕಳ ಮನೋವಿಜ್ಞಾನಿ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಸಲಹೆ ನೀಡಿದರು.
ಹಳ್ಳಿಖೇಡ(ಬಿ)ದ ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ರವಿವಾರ ವಿಕಾಸ ಅಕಾಡೆಮಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಶಿಕ್ಷಣ ಮಾರ್ಗದರ್ಶಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಕ್ಕಳು ಕೇವಲ ಪಠ್ಯಪುಸ್ತಕದ ಹುಳುವಾಗದೇ ಸಾಮಾನ್ಯ ಜ್ಞಾನ, ಪಠ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಪ್ರತಿಯೊಂದರಲ್ಲೂ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡಲ್ಲಿ ಯಶಸ್ಸು ನಮ್ಮನ್ನು ಒಪ್ಪಿ, ಅಪ್ಪಿಕೊಳ್ಳುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ನಂತರ ಮಕ್ಕಳು ಇಚ್ಛಿಸುವ ವಿಭಾಗ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕೆ ವಿನಃ ತಾವು ಇಚ್ಛಿಸಿದ ವಿಭಾಗ ಆಯ್ಕೆ ಮಾಡಿಕೊಳ್ಳುವಂತೆ ಯಾವುದೇ ಕಾರಣಕ್ಕೂ ಒತ್ತಡ ಹೇರದೆ ಮುಕ್ತವಾಗಿ ಬಿಡಬೇಕು. ಈ ಎಲ್ಲದರ ಜೊತೆಯಲ್ಲಿ ಗುರು- ಹಿರಿಯರನ್ನು ಗೌರವಿಸುವ ಸೌಜನ್ಯ, ಸಂಸ್ಕಾರ ಮಕ್ಕಳಿಗೆ ನೀಡುವ ಅವಶ್ಯಕತೆಯಿದ್ದು, ಅತ್ಯಂತ ಜಾಗೃತರಾಗಿರಬೇಕು. ಅದೆಷ್ಟೋ ಮಕ್ಕಳು ಪಾಲಕರ ಒತ್ತಡದಿಂದಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದರು.
ಉನ್ನತ ಸಾಧನೆಗಾಗಿ ಉನ್ನತ ಗುರಿ-ಅತ್ಯುತ್ತಮ ಗುರುವಿನ ಜೊತೆಗೆ ಸಾಧಿ ಸುವ ಛಲ ಇದ್ದಲ್ಲಿ ಅಸಾಧ್ಯವಾದದ್ದನ್ನು ಸಾಧಿ ಸಲು ಸಾಧ್ಯ. ಇಂದಿನ ಯುವಕರು ಬೇಡುವ ಕೈಗಳಾಗದೇ ನೀಡುವ ಕೈಗಳಾಗಿ ಪರಿವರ್ತನೆಯಾಗಬೇಕು. ಸರ್ಕಾರ ವಿವಿಧ ಹೆಸರಿನಲ್ಲಿ ನೀಡುವ ಭಿಕ್ಷೆ ಭಾಗ್ಯದಿಂದ ದುಡಿಯುವವರು ಸೋಮಾರಿಗಳಾಗುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಇವೆಲ್ಲವೂ ಮಾರಕ ಎಂದು ಹೇಳಿದರು.
ಬಳಿಕ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಸಂವಾದ ನಡೆಸಿದರು. ಅಧ್ಯಕ್ಷತೆ ವಹಿಸಿದ್ದ ಬಸವತೀರ್ಥ ವಿದ್ಯಾಪೀಠ
ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕೇಶವರಾವ್ ತಳಘಟಕರ್ ಮಾತನಾಡಿ, ತಜ್ಞರ ಸಲಹೆ ಪಾಲಿಸಬೇಕು. ಈ ಎಲ್ಲದರ ಜೊತೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳಿದಂತೆ ಜೀವನದಲ್ಲಿ ಯಾವತ್ತೂ ದೊಡ್ಡ ಕನಸು ಕಾಣಬೇಕು. ಕಂಡ ಕನಸು ಸಾಕಾರಗೊಳಿಸಲು ಶ್ರಮಿಸಬೇಕು ಎಂದರು.
ಸಂಸ್ಥೆ ನಿರ್ದೇಶಕ ಕೇಶವರಾವ್ ತಳಘಟಕರ್ ಸೋಮನಾಥ ಹಿರೇಮಠ ಮಾತನಾಡಿದರು. ಪ್ರಾಚಾರ್ಯ ಗುಂಡಯ್ಯ ತೀರ್ಥ, ಮಸ್ತಾನ್ ಪಟೇಲ, ಚಂದ್ರಕಾಂತ ಬಿರಾದಾರ ವೇದಿಕೆಯಲ್ಲಿದ್ದರು. ಸಂಜನಾ ಪ್ರಾರ್ಥಿಸಿದರು. ನರೇಂದ್ರ ಪಾಟೀಲ ಸ್ವಾಗತಿಸಿದರು. ವಿಕಾಸ ಅಕಾಡೆಮಿ ಸಂಚಾಲಕ ಶಿವಶಂಕರ ತರನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ಪಾಟಲ ಹಾಲಹಳ್ಳಿ ನಿರೂಪಿಸಿದರು. ಶಿವರಾಜ ವಂದಿಸಿದರು.