Advertisement
ಆರೋಗ್ಯದ ವಿಚಾರದಲ್ಲಿ ನಗರಸಭೆ ತೋರುವ ಘಾಡ ಅಸಡ್ಡೆಗೆ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸ್ವಲ್ಪ ಮಳೆ ಬಂದರೆ ಸಾಕು ನಗರಕ್ಕೆ ಹೊಂಡು ನೀರು ಪೂರೈಕೆ ಖಚಿತ ಎನ್ನುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ, ಜನ ಎಲ್ಲವನ್ನು ಸಹಿಸಿಕೊಂಡೇ ಬರುತ್ತಿದ್ದರು. ಆದರೆ, ಕಲುಷಿತ ನೀರಿನಿಂದ ಜೀವಕ್ಕೆ ಕುತ್ತುಂಟಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
Related Articles
Advertisement
ಏನೇ ಸಮಸ್ಯೆಗಳು ಎದುರಾದರೂ ಅದರ ನೇರ ಪರಿಣಾಮ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ. ಈ ಕಲುಷಿತ ನೀರಿನ ಸಮಸ್ಯೆಗೆ ಬಲಿಯಾಗಿರುವುದು ಅದೇ ಜನ. ಉಳ್ಳವರು ಫಿಲ್ಟರ್ ವಾಟರ್ ಅಥವಾ ಕ್ಯಾನ ವಾಟರ್‌ಗಳನ್ನು ಬಳಸುತ್ತಾರೆ. ಅವರಿಗೆ ನಗರಸಭೆ ಪೂರೈಸುವ ನೀರಿನ ಮೇಲೆ ಅವಲಂಬಿತರಲ್ಲ. ಆದರೆ, ಬಡ, ಮಧ್ಯಮ ವರ್ಗದವರು ಮಾತ್ರ ವಿಧಿ ಇಲ್ಲದೇ ಅದೇ ನೀರು ಕುಡಿಯಬೇಕಿದೆ.
ಆರೋಗ್ಯ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ
ನಗರಸಭೆ ಜನರ ಆರೋಗ್ಯ ವಿಚಾರದಲ್ಲಿ ಯಾವಾಗಲೂ ದಿವ್ಯ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದೆ. ಅದರಲ್ಲೂ ಮಳೆಗಾಲದಲ್ಲಿ ಜನ ಜೀವನ ಅತ್ಯಂತ ಹೀನಾಯವಾಗಿರುತ್ತದೆ. ನಗರದಲ್ಲಿ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿರುವುದರಿಂದ ಮಳೆ ಬಂದರೆ ಸಾಕು ಪರಿಸ್ಥಿತಿ ಕೊಳೆತು ನಾರುವಂತಾಗಿರುತ್ತದೆ.
ರಸ್ತೆ ಬದಿಯೇ ಘನ ತ್ಯಾಜ್ಯದ ರಾಶಿ ಬಿದ್ದಿದ್ದರೂ ಸರಿಯಾಗಿ ವಿಲೇವಾರಿ ಮಾಡದೆ ದುರ್ವಾಸನೆ ಬೀರುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಿ ಜನ ಕಾಯಿಲೆ ಬೀಳುವುದು ಖಚಿತ. ಪ್ರತಿ ವರ್ಷ ಈ ಸಮಸ್ಯೆ ಮರುಕಳಿಸಿದರೂ ನಗರಾಡಳಿತ ಮಾತ್ರ ಎಚ್ಚೆತ್ತುಕೊಳ್ಳುವುದೇ ಇಲ್ಲ.